ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರು ಮಚ್ಚೇರಿಯಲ್ಲಿ ನೀರಿಗಾಗಿ ಪರದಾಟ

ತಿಂಗಳು ಕಳೆದರೂ ದುರಸ್ತಿಯಾಗದ ಶುದ್ಧ ಕುಡಿಯುವ ನೀರಿನ ಘಟಕ
Last Updated 14 ಡಿಸೆಂಬರ್ 2021, 5:12 IST
ಅಕ್ಷರ ಗಾತ್ರ

ಕಡೂರು: ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಸಿಗಬೇಕೆಂಬ ಆಶಯದಿಂದ ಮಚ್ಚೇರಿಯಲ್ಲಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ತಿಂಗಳು ಕಳೆದಿದೆ. ಜನರು ಈಗ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

2015ರಲ್ಲಿ ಮಲ್ಲೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಚ್ಚೇರಿ ಗ್ರಾಮಕ್ಕೆ ಈ ಶುದ್ಧ ಕುಡಿಯುವ ನೀರಿನ ಘಟಕ ಮಂಜೂರಾಗಿ ಸ್ಥಾಪನೆಯಾಯಿತು. ರಾಜ್ಯ ಹೆದ್ದಾರಿ ಬದಿಯಲ್ಲೆ 10×15 ಮೀಟರ್‌ ಅಳತೆಯ ಪ್ರೀಫ್ಯಾಬ್ರಿಕೇಟೆಡ್ ಕಟ್ಟಡದಲ್ಲಿ ಎಲ್ಲ ಯಂತ್ರಗಳನ್ನು ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿದರೂ ನೀರಿನ ಸರಬರಾಜಿಲ್ಲದೆ ಮತ್ತೊಂದು ವರ್ಷದಲ್ಲಿ ಯಂತ್ರಗಳು ದೂಳು ಹಿಡಿದಿದ್ದವು. ಹತ್ತಿರದ ಆಂಜನೇಯ ಸ್ವಾಮಿ ದೇಗುಲದ ಬಳಿ ಇದ್ದ ಒಂದು ಕೊಳವೆಬಾವಿಯಿಂದ ಈ ಘಟಕಕ್ಕೆ ಗ್ರಾಮ ಪಂಚಾಯಿತಿಯವರು ನೀರಿನ ಸಂಪರ್ಕ ಕಲ್ಪಿಸಿದ ನಂತರ ಈ ಘಟಕ ಕಾರ್ಯಾರಂಭ ಮಾಡಿತು.

ಆರಂಭದಿಂದಲೂ ಘಟಕ ಸಮರ್ಪಕವಾಗಿ ಕಾರ್ಯ ಮಾಡಿದ ಉದಾಹರಣೆಯಿಲ್ಲ. ಪದೇ ಪದೇ ಕೆಟ್ಟು ಹೋಗುವ ಘಟಕದ ನೀರಿನ ತೊಟ್ಟಿಗಳನ್ನು ಶುಚಿಗೊಳಿಸುವ ಕಾರ್ಯ ಆಗಿಯೇ ಇಲ್ಲ ಎಂಬುದು ಸ್ಥಳೀಯರ ದೂರು.

ಘಟಕದಲ್ಲಿ ಸಿಗುವ ಶುದ್ಧ ನೀರನ್ನು ಮಚ್ಚೇರಿ, ಮಲ್ಲಿದೇವಿಹಳ್ಳಿ ಮುಂತಾದ ಗ್ರಾಮಗಳ ಜನರು ಬಳಸುತ್ತಾರೆ. ಸುಮಾರು 280 ಮನೆಗಳಿರುವ ಗ್ರಾಮದಲ್ಲಿ ಪ್ರತಿದಿನ ಇದೇ ನೀರನ್ನು ಕುಡಿಯಲು ಬಳಸಲಾಗುತ್ತದೆ. ಕಿರುನೀರು ಸರಬರಾಜು ಯೋಜನೆಯಿಂದ ಬರುವ ನೀರು ಕುಡಿಯಲು ಯೋಗ್ಯವಲ್ಲದ್ದರಿಂದ ಈ ಶುದ್ಧ ಕುಡಿಯುವ ನೀರಿನ ಘಟಕದ ನೀರೇ ಆಸರೆಯಾಗಿದೆ.

ಈಗ ಘಟಕ ಕೆಟ್ಟು ಒಂದು ತಿಂಗಳಾಗಿದೆ. ಇದರತ್ತ ಗ್ರಾಮ ಪಂಚಾಯಿತಿಯವರು ಗಮನ ಹರಿಸಿಲ್ಲ. ಇದರಿಂದ ಗ್ರಾಮಸ್ಥರು ಇದೇ ಗ್ರಾಮದಲ್ಲಿರುವ ಮತ್ತೊಂದು ಖಾಸಗಿ ನೀರಿನ ಘಟಕದ ನೀರನ್ನು ಬಳಸಲಾರಂಭಿಸಿದ್ದಾರೆ. ಅದರೆ, ಅದು ಸಪ್ಪೆಯಾಗಿರುವ ಕಾರಣ ಕುಡಿಯಲು ಸಾಧ್ಯವಾಗುತ್ತಿಲ್ಲ. ಅನಿವಾರ್ಯವಾಗಿ ಕಿರುನೀರು ಸರಬರಾಜು ಯೋಜನೆಯ ನೀರನ್ನೇ ಕುಡಿಯಲು ಬಳಸುತ್ತಿದ್ದಾರೆ. ಗ್ರಾಮದಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನರು ಶೀತ, ಕೆಮ್ಮಿನಿಂದ ತೊಂದರೆಗೊಳಗಾಗಿ ಚಿಕಿತ್ಸೆ ಪಡೆದಿದ್ದಾರೆ. ಕೂಡಲೇ ಈ ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT