ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವೈಜ್ಞಾನಿಕವಾಗಿ ಕೆರೆ ಅಗೆತ: ಶರತ್ ಕೃಷ್ಣಮೂರ್ತಿ ದೂರು

ಕಡೂರುಹಳ್ಳಿ ಕೆರೆಯ ಮೂಲ ಸ್ವರೂಪಕ್ಕೆ ಧಕ್ಕೆ– ಶರತ್ ದೂರು
Last Updated 10 ಫೆಬ್ರುವರಿ 2021, 3:16 IST
ಅಕ್ಷರ ಗಾತ್ರ

ಕಡೂರು: ‘ತಾಲ್ಲೂಕಿನ ಕಡೂರುಹಳ್ಳಿ ಕೆರೆಯಲ್ಲಿ ಅವೈಜ್ಞಾನಿಕವಾಗಿ ಮಣ್ಣು ತೆಗೆಯುತ್ತಿರುವುದನ್ನು ಕೂಡಲೇ ನಿಲ್ಲಿಸ ಬೇಕು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಶರತ್ ಕೃಷ್ಣಮೂರ್ತಿ ಒತ್ತಾಯಿಸಿದರು.

ಕಡೂರಹಳ್ಳಿಯಲ್ಲಿ ಮಂಗಳವಾರ ಗ್ರಾಮಸ್ಥರ ಸಭೆಯ ನಂತರ ಸುದ್ದಿಗಾರ ರೊಂದಿಗೆ ಅವರು ಮಾತನಾಡಿದರು.

‘ತಾಲ್ಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ಕೆಲಸ ಸೇರಿದಂತೆ ಹಲವು ಕಾಮಗಾರಿಗಳು ನಡೆಯುತ್ತಿವೆ. ರಸ್ತೆ ನಿರ್ಮಾಣಕ್ಕೆ ಮಣ್ಣು ಅವಶ್ಯಕ. ರಸ್ತೆ ನಿರ್ಮಾಣ ಗುತ್ತಿಗೆದಾರರು ಸುಲಭವಾಗಿ ಸಿಗುವ ಕೆರೆಗಳ ಮಣ್ಣನ್ನು ಬಳಸಿ ಕೊಳ್ಳುತ್ತಾರೆ. ಅಭಿವೃದ್ಧಿಗೆ ಪೂರಕವಾಗಿ ಇದಕ್ಕೆ ಆಕ್ಷೇಪಣೆ ಮಾಡಬಾರದು. ಆದರೆ, ಕಡೂರಹಳ್ಳಿಯ ಕೆರೆಯಲ್ಲಿ ಗುತ್ತಿಗೆದಾರರು ಅಪಾಯಕಾರಿ ವೆನಿಸುವಷ್ಟು ಆಳ ಮಣ್ಣು ಬಗೆದಿದ್ದಾರೆ’ ಎಂದು ಹೇಳಿದರು.

‘ಮಣ್ಣು ತೆಗೆಯಲು ಅನುಮತಿ ನೀಡಿರುವಷ್ಟು ಮಾತ್ರ ತೆಗೆಯಬೇಕು. ಆದರೆ, ಈ ಕೆರೆಯಲ್ಲಿ ಅವೈಜ್ಞಾನಿಕವಾಗಿ ವಿಪರೀತ ಆಳದಿಂದ ಮಣ್ಣು ತೆಗೆದಿರುವುದರಿಂದ ಅಂತರ್ಜಲದ ಮೇಲೂ ಪರಿಣಾಮವಾಗುತ್ತದೆ. ಒಂದೊಮ್ಮೆ ಮಳೆ ಚೆನ್ನಾಗಿ ಸುರಿದು ನೀರು ಬಂದರೆ ಕೆರೆಯ ವಾಸ್ತವಿಕ ಸಂಗ್ರಹ ಸಾಮರ್ಥ್ಯಕ್ಕಿಂತ ಹೆಚ್ಚು ನೀರು ತುಂಬಿ ಕೆರೆ ಏರಿಯ ಭದ್ರತೆಗೂ ಅಪಾಯ ತಟ್ಟುವ ಸಂಭವವಿದೆ. ಕೆರೆ ದಂಡೆಯ ಮೇಲೆ ಬರುವ ರಸ್ತೆಯ ಪಕ್ಕದಲ್ಲೇ ಪ್ರಪಾತ ನಿರ್ಮಾಣಗೊಂಡು ಅಪಾಯದ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ’ ಎಂದರು.

‘ಈ ಕುರಿತು ಗ್ರಾಮಸ್ಥರು ಗುತ್ತಿಗೆದಾರರನ್ನು ಆಕ್ಷೇಪಿಸಿದಾಗ ‘ಇದಕ್ಕೆ ರಾಜಧನ ಕಟ್ಟಿದ್ದೇವೆ’ ಎಂದು ಹೇಳಿ ದೌರ್ಜನ್ಯ ಮಾಡುತ್ತಿದ್ದಾರೆ. ಗ್ರಾಮಸ್ಥರನ್ನು ಎದುರಿಸಲು ಪೊಲೀಸರನ್ನೂ ಕರೆತರುತ್ತಾರೆ. ಈ ಎಲ್ಲಾ ವಿಚಾರಗಳನ್ನು ಸಂಬಂಧಿಸಿದವರಿಗೆ ತಿಳಿಸಿ ಲಿಖಿತ ದೂರು ನೀಡಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ. ಈ ಕೂಡಲೇ ಈ ಕೆಲಸ ನಿಲ್ಲಿಸಬೇಕು. ಕೆರೆಯನ್ನು ಉಳಿಸಿಕೊಡಬೇಕು. ಈ ಕುರಿತು ಶೀಘ್ರದಲ್ಲಿಯೇ ಕಡೂರಹಳ್ಳಿ ಗ್ರಾಮಸ್ಥರೊಂದಿಗೆ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಲಾಗುವುದು’ ಎಂದರು.

ಶಿವಾಲಯ ಕೆರೆ ಬಳಕೆದಾರರ ಸಂಘದ ಅಧ್ಯಕ್ಷ ಕೆ.ಸಿ.ಶಿವಪ್ರಸಾದ್ ಮಾತನಾಡಿ, ‘ಗ್ರಾಮಸ್ಥರು ಅಭಿವೃದ್ಧಿ ಕಾರ್ಯಗಳ ವಿರೋಧಿಗಳಲ್ಲ. ಆದರೆ, ಅಭಿವೃದ್ಧಿಯ ಹೆಸರಿನಲ್ಲಿ ಕೆರೆಯ ಮೂಲ ಸ್ವರೂಪಕ್ಕೆ ಧಕ್ಕೆ ಬರುವಂತೆ ಮಣ್ಣು ತೆಗೆಯುವುದು ಸರಿಯಲ್ಲ. ಈ ಬಗ್ಗೆ ದೂರು ಸಲ್ಲಿಸಿದ್ದರೂ ಇಲ್ಲಿಯ ತನಕ ಯಾರೊಬ್ಬ ಅಧಿಕಾರಿಯೂ ಸಮಸ್ಯೆ ಆಲಿಸಿಲ್ಲ’ ಎಂದು ದೂರಿದರು.

ಕಡೂರಹಳ್ಳಿ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT