ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗದ ಹಕ್ಕುಪತ್ರ: ಕಣ್ಣೀರು ಹಾಕಿದ ಚನ್ನಡಲು ಸಂತ್ರಸ್ತರು

ತಹಶೀಲ್ದಾರ್ ನಡೆ ಗ್ರಾಮದ ಕಡೆಗೆ ಕಾರ್ಯಕ್ರಮ
Last Updated 20 ನವೆಂಬರ್ 2022, 7:22 IST
ಅಕ್ಷರ ಗಾತ್ರ

ಕಳಸ: ಮರಸಣಿಗೆ ಗ್ರಾಮದಲ್ಲಿ ಶನಿವಾರ ನಡೆದ ‘ತಹಶೀಲ್ದಾರ್ ನಡೆ ಗ್ರಾಮದ ಕಡೆಗೆ’ ಕಾರ್ಯಕ್ರಮದಲ್ಲಿ ಚನ್ನಡಲು ಅತಿವೃಷ್ಟಿ ಸಂತ್ರಸ್ತರು ಕಣ್ಣೀರು ಹಾಕುವ ಜತೆಗೆ ಸರ್ಕಾರದ ವಿರುದ್ಧ ಆಕ್ರೋಶವನ್ನೂ ಹೊರಹಾಕಿದರು.

ತಹಶೀಲ್ದಾರ್ ನಂದಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚನ್ನಡಲಿನ ಸಂತ್ರಸ್ತರು ನೀಲಯ್ಯ, ಜಗದೀಶ್ ಮತ್ತಿತರರ ನೇತೃತ್ವದಲ್ಲಿ ಸಭೆಗೆ ಅಡ್ಡಿಪಡಿಸಿದರು.

‘ಚನ್ನಡಲಿನ ಸಂತ್ರಸ್ತರು ಮನೆ ಕಳೆದುಕೊಂಡು 3 ವರ್ಷ ಕಳೆದರೂ ಬದಲಿ ನಿವೇಶನದ ಹಕ್ಕುಪತ್ರ ಈವರೆಗೂ ಬಂದಿಲ್ಲ. ಇಡಕಿಣಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂತ್ರಸ್ತರು ಮನೆ ನಿರ್ಮಾಣ ಆರಂಭಿಸಿದ್ದರೂ ನಿವೇಶನದ ಹಕ್ಕುಪತ್ರ ಇಲ್ಲದೆ ಪಂಚಾಯಿತಿಯಿಂದ ಅನುದಾನ ಸಿಗುತ್ತಿಲ್ಲ’ ಎಂದು ಆಕ್ರೋಶ ಹೊರಹಾಕಿದರು.

‘ಹಿಂದಿನ 2 ಸಭೆಯಲ್ಲೂ ಜಿಲ್ಲಾಧಿಕಾರಿ 15 ದಿನದಲ್ಲಿ ಹಕ್ಕುಪತ್ರ ಕೊಡುವ ಭರವಸೆ ನೀಡಿ ಹೋದರು. ಆದರೆ, ಈವರೆಗೂ ನಮಗೆ ಹಕ್ಕುಪತ್ರ ಸಿಕ್ಕಿಲ್ಲ. ನಮಗೆ ಹಕ್ಕುಪತ್ರ ಬೇಡ. ಎಲ್ಲ 16 ಕುಟುಂಬಗಳಿಗೂ ದಯಾಮರಣಕ್ಕೆ ಅವಕಾಶ ಕೊಡಿ’ ಎಂದು ಸಂತ್ರಸ್ತ ಮಹಿಳೆಯರು ಕಣ್ಣೀರು ಹಾಕಿದರು.

ಮರಸಣಿಗೆ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ್ ಸಂತ್ರಸ್ತರ ಪರವಾಗಿ ದನಿಗೂಡಿಸಿದರು. ಪಂಚಾಯಿತಿಯಿಂದ ನಿರ್ಣಯ ಮಾಡಿಕೊಟ್ಟ ಮನವಿಗಳಿಗೆ ಜಿಲ್ಲಾಡಳಿತದಿಂದ ಮನ್ನಣೆ ಸಿಗುತ್ತಿಲ್ಲ. ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಅವರನ್ನು ಕಳಿಸಿದರೆ ಉಪಯೋಗ ಆಗುವುದಿಲ್ಲ. ಜಿಲ್ಲಾಧಿಕಾರಿಯೇ ಸಭೆಯಲ್ಲಿ ಭಾಗವಹಿಸಿ ಸಮಸ್ಯೆ ಪರಿಹರಿಸಬೇಕು ಎಂದು ವಿಶ್ವನಾಥ್ ಆಗ್ರಹಿಸಿದರು.

ಮರಸಣಿಗೆ ಗ್ರಾಮದ 6 ಸರ್ಕಾರಿ ಶಾಲೆಗಳ ಭೂದಾಖಲೆಗಳನ್ನು ಒದಗಿಸಲು 3 ತಿಂಗಳ ಹಿಂದಿನ ಎಡೂರು ಸಭೆಯಲ್ಲಿ ಜಿಲ್ಲಾಧಿಕಾರಿ ಗಮನ ಸೆಳೆದಿದ್ದೆ. ಆದರೆ ಈವರೆಗೂ ಯಾವ ಕೆಲಸವೂ ಆಗಿಲ್ಲ. ರೈತ ಸಂಪರ್ಕ ಕೇಂದ್ರ, ಆಟದ ಮೈದಾನ, ಆರೋಗ್ಯ ಇಲಾಖೆಗೆ ಮಂಜೂರು ಆಗಿರುವ ಭೂಮಿ ಗುರುತಿಸಿಕೊಡಲು ಈವರೆಗೂ ಕ್ರಮ ವಹಿಸಿಲ್ಲ. ಗ್ರಾಮ ಪಂಚಾಯಿತಿಯ ಯಾವ ನಿರ್ಣಯ ಮತ್ತು ಮನವಿಗೂ ಜಿಲ್ಲಾಡಳಿತ ಮನ್ನಣೆ ನೀಡುತ್ತಿಲ್ಲ ಎಂದು ವಿಶ್ವನಾಥ್ ಬೇಸರ ಹೊರಹಾಕಿದರು.

ಎಡೂರಿನ ಕಿರಣ್ ಶೆಟ್ಟಿ ಮಾತನಾಡಿ, ಎಡೂರು ರಸ್ತೆ ಕಾಮಗಾರಿ ಆರಂಭ ಆಗದ ಬಗ್ಗೆ ಮತ್ತು ವಿದ್ಯುತ್ ಮಾರ್ಗದ ಕೆಳಗಿನ ಅಕೇಶಿಯಾ ಮರಗಳನ್ನು ಅರಣ್ಯ ಇಲಾಖೆ ತೆರವು ಮಾಡದ ಬಗ್ಗೆ ಗಮನ ಸೆಳೆದರು.

ಅರಣ್ಯ ಇಲಾಖೆಯು ಕೃಷಿಕರ ಗಿಡಗಳನ್ನು ತೆರವು ಮಾಡುವ ಬಗ್ಗೆಯೂ ಸಭೆಯಲ್ಲಿ ದೂರು ಕೇಳಿ ಬಂತು. ಅರಣ್ಯ ಮತ್ತು ಕಂದಾಯ ಇಲಾಖೆಯ ಭೂಮಿ ಗಡಿಗುರುತು ಮಾಡುವ ಮುನ್ನ ಯಾರ ಗಿಡಗಳನ್ನು ಕೂಡ ಕಡಿಯಬಾರದು ಎಂದು ಕೃಷಿಕರು ಸಭೆಯಲ್ಲಿ ಒತ್ತಾಯಿಸಿದರು.

ತಹಶೀಲ್ದಾರ್ ನಂದಕುಮಾರ್ ಮಾತನಾಡಿ, ಜಿಲ್ಲೆಯ ಎಲ್ಲ ಸಭೆಗಳಿಗೂ ಜಿಲ್ಲಾಧಿಕಾರಿ ಬರಲು ಸಾಧ್ಯವಿಲ್ಲ. ಆದರೆ, ಇಲ್ಲಿನ ಎಲ್ಲ ಸಮಸ್ಯೆಗಳನ್ನು ಅವರ ಗಮನಕ್ಕೆ ತರಲಾಗುತ್ತದೆ ಎಂದರು.

ಸಭೆಯ ನಡುವೆ ಎದ್ದು ಹೋದ ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ಸತೀಶ್ ಅವರನ್ನು ಕರೆಸಿದ ತಹಶೀಲ್ದಾರ್ ಛೀಮಾರಿ ಹಾಕಿದರು.

ಎಡೂರು ರಸ್ತೆ ಬಗ್ಗೆ ಗ್ರಾಮಸ್ಥರು ಸ್ಪಷ್ಟನೆ ಕೇಳಿದಾಗ ಸತೀಶ್, ಗುತ್ತಿಗೆದಾರನಿಗೆ ನೋಟಿಸ್ ನೀಡಲಾಗಿದ್ದು ಒಂದು ವಾರದಲ್ಲೇ ಕೆಲಸ ಆರಂಭವಾಗುತ್ತದೆ ಎಂದರು.

ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಅರಣ್ಯ, ಶಿಕ್ಷಣ ಆರೋಗ್ಯ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT