ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ರಸ್ತೆ ಅಧ್ವಾನ; ಓಡಾಟ ಗೋಳು

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನ
Last Updated 12 ಜನವರಿ 2022, 6:42 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನದ ದಾರಿ ಅಧ್ವಾನವಾಗಿದೆ. ಕಲ್ಲುಮಣ್ಣು, ತಗ್ಗುದಿಬ್ಬಗಳ ಈ ಕೊರಕಲು ಹಾದಿಯಲ್ಲಿ ಓಡಾಟ ಗೋಳಾಟವಾಗಿದೆ.

ನಗರದ ಕೆಂಪನಹಳ್ಳಿಯ ಆಶಾ ಕಿರಣ ಅಂಧಮಕ್ಕಳ ಶಾಲೆ ಪಕ್ಕದಲ್ಲಿ ಕನ್ನಡ ಭವನ ಇದೆ. ಶಾಲೆಯ ಕಾಂಪೌಂಡ್‌ ಬಳಿಯಿಂದ ಭವನಕ್ಕೆ ಸಂಪರ್ಕ ದಾರಿ ಇದೆ. ಹಾದಿಯ ಎರಡು ಇಕ್ಕೆಲಗಳಲ್ಲಿ ಕಳೆ ಸಸ್ಯಗಳು–ಮುಳ್ಳಿನ ಗಿಡಗಳು, ಪೊದೆಗಳು ಬೆಳೆದಿವೆ.

ದಾರಿಯುದ್ದಕ್ಕೂ ಗುಂಡಿಗಳಾಗಿವೆ. ಭವನದ ಕಾಂಪೌಂಡ್‌ ಮುಂಭಾಂಗದಲ್ಲಿ ಪೈಪ್‌ ಅಳವಡಿಕೆಗೆ ಉದ್ದಕ್ಕೂ ಅಗೆಯಲಾಗಿದೆ. ಭವನದ ಹಿಂದೆ, ಪಕ್ಕದಲ್ಲಿ ಗಿಡಗಂಟಿಗಳು ಬೆಳೆದಿವೆ.

ಭವನದ ಮುಂದೆ ರಾಮಕೃಷ್ಣ ಶಾರದಾ ಆಶ್ರಮ ಇದೆ. ಆಶ್ರಮದ ಪಕ್ಕಕ್ಕೆ ಶ್ರೀಗುರು ಕಡೇ ಬಾಗಿಲು ಸಿದ್ದಪ್ಪ ಸ್ವಾಮಿ ದೇವಾಲಯ ಇದೆ.
ಕನ್ನಡ ಭವನ, ಶಾರದಾ ಆಶ್ರಮ, ಸಿದ್ದಪ್ಪ ಸ್ವಾಮಿ ದೇಗಲಕ್ಕೆ ಓಡಾಡಲು ಈ ಹದಗೆಟ್ಟ ದಾರಿ ಬಿಟ್ಟರೆ ಬೇರೆ ಹಾದಿ ಇಲ್ಲ.

‘ದತ್ತಿ ಉಪನ್ಯಾಸ’, ‘ಪುಸ್ತಕ ಬಿಡುಗಡೆ’ ಮೊದಲಾದ ಕಾರ್ಯಕ್ರಮಗಳು ಕನ್ನಡ ಭವನದ ಸಭಾಂಗಣದಲ್ಲಿ ನಡೆಯುತ್ತವೆ. ರಸ್ತೆ ದುಃಸ್ಥಿತಿ, ನೀರಿನ ಸಮಸ್ಯೆಗಳು ಭವನದಲ್ಲಿ ಕಾರ್ಯಕ್ರಮಗಳ ಆಯೋಜನೆಗೂ ಹಿಂದೇಟು ಹಾಕುವಂತೆ ಮಾಡಿದೆ.

‘ಕನ್ನಡ ಭವನ ದಾರಿಗೆ ಡಾಂಬರೀಕರಣ ಮಾಡಿಸುವುದಾಗಿ ಶಾಸಕರು ಹೇಳಿದ್ದರು. ಈವರೆಗೆ ಡಾಂಬರೀಕರಣ ಆಗಿಲ್ಲ. ಆಶಾಕಿರಣ ಅಂಧ ಮಕ್ಕಳ ಶಾಲೆಯ ಕೆಲಸಗಾರೊಬ್ಬರು ಕನ್ನಡ ಭವನದ ಸ್ವಚ್ಛತೆ, ನಿರ್ವಹಣೆ ಮಾಡುತ್ತಾರೆ. ನಾಲ್ಕು ತಿಂಗಳಿನಿಂದ ಆ ಕೆಲಸಗಾರನಿಗೆ ಪರಿಷತ್‌ನವರು ಸಂಬಳ ನೀಡಿಲ್ಲ. ರಸ್ತೆಯ ನಿರ್ಮಾಣಕ್ಕೆ, ಕೆಲಸಗಾರಗೆ ಸಂಬಳ ನೀಡಲು ಸಂಬಂಧಪಟ್ಟವರು ಕ್ರಮ ವಹಿಸಬೇಕು’ ಎಂಬುದು ಆಶಾಕಿರಣ ಅಂಧ ಮಕ್ಕಳ ಶಾಲೆಯಡಾ. ಜೆ.ಪಿ.ಕೃಷ್ಣೇಗೌಡ ಅವರ ಒತ್ತಾಯ.

‘ರಸ್ತೆ, ನೀರು, ಬೀದಿ ದೀಪಕ್ಕೆ ಮೊರೆ’

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನಕ್ಕೆ ರಸ್ತೆ, ನೀರು, ಬೀದಿ ದೀಪ ಒದಗಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇನೆ ಎಂದು ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್‌ ತಿಳಿಸಿದರು.

‘ಕನ್ನಡ ಭವನಕ್ಕೆ ಡಾಂಬರು ರಸ್ತೆ ನಿರ್ಮಿಸಬೇಕು. ನಲ್ಲಿ ಸಂಪರ್ಕ ಕಲ್ಪಿಸಬೇಕು. ಮಾರ್ಗದಲ್ಲಿ ಬೀದಿದೀಪಗಳನ್ನು ಅಳವಡಿಸಬೇಕು ಎಂದು ಕೋರಿಕೆ ಸಲ್ಲಿಸಿದ್ದೇನೆ. ಜಿಲ್ಲಾಧಿಕಾರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT