ಸೋಮವಾರ, ಸೆಪ್ಟೆಂಬರ್ 16, 2019
24 °C
ಚಿಕ್ಕಮಗಳೂರಿನ ತಮಿಳು ಕಾಲೋನಿಯಲ್ಲಿರುವ ದೇಗುಲ

 ಕರುಮಾರಿಯಮ್ಮ ಜಾತ್ರೆ; ಕರಗ ಮಹೋತ್ಸವ ವೈಭವ

Published:
Updated:
Prajavani

ಚಿಕ್ಕಮಗಳೂರು: ನಗರದ ತಮಿಳು ಕಾಲೋನಿಯ ಕರುಮಾರಿಯಮ್ಮ ದೇವರ ಜಾತ್ರೆ ಅಂಗವಾಗಿ ಶುಕ್ರವಾರ ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ದಂಟರಮಕ್ಕಿಯ ಕೆರೆಕೋಡಮ್ಮ ದೇಗುಲದಿಂದ ಮಾರುಕಟ್ಟೆ ರಸ್ತೆ ಮೂಲಕ ತಮಿಳು ಕಾಲೋನಿಯ ಕರುಮಾರಿಯಮ್ಮ ದೇಗುಲದವರೆಗೆ ಉತ್ಸವ ನಡೆಯಿತು. ಭಕ್ತರು ಬೆನ್ನಿನ ಚಮ್ಮಕ್ಕೆ ಕಬ್ಬಿಣದ ಕೊಕ್ಕೆ ಸಿಕ್ಕಿಸಿಕೊಂಡು ಮೂಲಕ ಆಟೋರಿಕ್ಷಾ, ಟ್ರಾಕ್ಟರ್, ಟಾಟಾ ಏಸ್ ವಾಹನಗಳನ್ನು ಎಳೆದು ಹರಕೆ ತೀರಿಸಿದರು. ಮಹಿಳೆಯರು ಬಕೆಟಿನಲ್ಲಿ ನೀರು ತುಂಬಿಕೊಂಡು ಅದಕ್ಕೆ ಬೇವಿನ ಸೊಪ್ಪು ಅದ್ದಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಪ್ರೋಕ್ಷಿಸಿದರು.

ಕೆಲ ಭಕ್ತರು ಬಾಯಿಗೆ ಕಬ್ಬಿಣದ ಸರಳು(ಬಾಯಿಬೀಗ) ಚುಚ್ಚಿಕೊಂಡು ಮೆರವಣಿಗೆಯಲ್ಲಿ ಸಾಗಿ ಹರಕೆ ಒಪ್ಪಿಸಿದರು. ಬೆನ್ನು ಮತ್ತು ತೊಡೆ ಚರ್ಮಕ್ಕೆ ಕಬ್ಬಿಣದ ಕೊಕ್ಕೆ ಸಿಕ್ಕಿಸಿಕೊಂಡು ಬೊಂಬುಗಳಲ್ಲಿ ಜೋತಾಡಿ ಭಕ್ತಿ ಮೆರೆದರು. ಮೆರವಣಿಗೆಯುದ್ದಕ್ಕೂ ಗೋವಿಂದ ನಾಮಸ್ಮರಣೆ ಮಾಡಿದರು.

ಮೆರವಣಿಗೆ ನಂತರ ಅಂಬಲಿ ಸೇವೆ ನಡೆಯಿತು. ಭಕ್ತರು ಮನೆಗಳಿಂದ ಪಾತ್ರೆಯಲ್ಲಿ ಅಂಬಲಿ ತುಂಬಿಕೊಂಡು ಅದರ ಮೇಲ್ಭಾಗಕ್ಕೆ ಮಾವಿನಕಾಯಿ ಚೂರುಗಳನ್ನು ಹಾಕಿಕೊಂಡು ದೇಗುಲಕ್ಕೆ ತಂದಿದ್ದರು. ಅರ್ಚಕರು ಅಂಬಲಿಯನ್ನು ದೊಡ್ಡ ಪಾತ್ರೆಗೆ ಸುರಿದು ಪೂಜಿಸಿ ಭಕ್ತರಿಗೆ ವಿತರಿಸಿದರು. ಸಿಡಿ ಉತ್ಸವ ಸಂಜೆ ನಡೆಯಿತು.

ಜಾತ್ರೋತ್ಸವದ ನಿಮಿತ್ತ ತಮಿಳು ಕಾಲೋನಿ ಮುಖ್ಯ ರಸ್ತೆ, ಹೆಬ್ಬಾಗಿಲು, ಕರುಮಾರಿಯಮ್ಮ ದೇಗುಲಗಳನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

‘ದೇಗುಲ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ರಘು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ಜಾತ್ರೋತ್ಸವದ ನಿಮಿತ್ತ ದೇಗುಲದಲ್ಲಿ ಇದೇ 1ರಂದು ಕರುಮಾರಿಯಮ್ಮ ಮೂಲಮೂರ್ತಿಗೆ ಕಂಕಣಧಾರಣೆ, 2ರಂದು ಶಾರದಾಂಭ ದೇಗುಲದ ಅರಳಿಕಟ್ಟೆಯಿಂದ ಹಾಲಿನ ಕಳಸದ ಮೆರವಣಿಗೆ ಮತ್ತು ವಿಶೇಷ ಅಭಿಷೇಕ ಜರುಗಿದವು. ಶನಿವಾರ ಸಾರ್ವಜನಿಕ ಅನ್ನಸಂತರ್ಪಣೆ, ಭಾನುವಾರ ಕರಗ ವಿಸರ್ಜನೆ ಕೈಂಕರ್ಯ ನಡೆಯಲಿದೆ. ಇದರೊಂದಿಗೆ ಜಾತ್ರ ಮಹೋತ್ಸವ ಸಂಪನ್ನವಾಗಲಿದೆ’ ಎಂದು ತಿಳಿಸಿದರು .

‘ಭಕ್ತರು 48 ದಿನಗಳು ಮಾಲೆ ಧರಿಸಿ, ವೃತಾಚರಣೆ ಮಾಡುತ್ತಾರೆ. ಜಾತ್ರೆಯ ಉತ್ಸವದಂದು ಬಾಯಿಬೀಗ ಚುಚ್ಚಿಸಿಕೊಂಡು, ಕಬ್ಬಿಣದ ಹುಕ್ಕುಗಳನ್ನು ಸಿಕ್ಕಿಸಿಕೊಂಡು ವಾಹನ ಎಳೆದು ಹರಕೆ ತೀರಿಸುತ್ತಾರೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಶಿವಮೊಗ್ಗ, ಹಾಸನ, ಬೆಂಗಳೂರಿನ ಭಕ್ತರು ದೇವಿಗೆ ನಡೆದುಕೊಳ್ಳುತ್ತಾರೆ’ ಎಂದು ದೇಗುಲ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ರಘು ಹೇಳಿದರು.

Post Comments (+)