ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಳೆಹೊನ್ನೂರು | 30 ಮಂಗಗಳ ಹತ್ಯೆ; ವಿಷಪ್ರಾಶನ ಶಂಕೆ

Published 7 ಜೂನ್ 2024, 13:58 IST
Last Updated 7 ಜೂನ್ 2024, 13:58 IST
ಅಕ್ಷರ ಗಾತ್ರ

ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಚಿಕ್ಕ ಅಗ್ರಹಾರದ ಬಳಿ, ನಾಲ್ಕು ಮರಿಗಳು ಸೇರಿದಂತೆ 30 ಮಂಗಗಳ ಕಳೇಬರ ಪತ್ತೆಯಾಗಿದ್ದು,  ವಿಷವಿಕ್ಕಿ ಬೇರೆಲ್ಲೂ ಮಂಗಗಳನ್ನು ಸಾಯಿಸಿ ಇಲ್ಲಿಗೆ ತಂದು ಎಸೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗುಡ್ಡೆಹಳ್ಳದಿಂದ ದಾವಣಕ್ಕೆ ತೆರಳುವ ರಸ್ತೆಯ ರಾಮನಹಡ್ಲುನ ಮೇಗರಮಕ್ಕಿ ಮೀಸಲು ಅರಣ್ಯ ಪ್ರದೇಶದ ಬಳಿ ಮಂಗಳ ಮೃತದೇಹ ಕಂಡ ಸ್ಥಳೀಯರು ಇದನ್ನು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರು.

ಕೊಪ್ಪ ಸಹಾಯಕ ಅರಣ್ಯ ಸಂರಕ್ಷಾಧಿಕಾರಿ ಸುದರ್ಶನ್ ಮಾತನಾಡಿ, ‘4 ಮರಿ, 14 ಗಂಡು ಹಾಗೂ 16 ಹೆಣ್ಣು ಮಂಗಗಳು ಮೃತಪಟ್ಟಿರುವುದು ಪತ್ತೆಯಾಗಿದೆ. ಮೇಲ್ನೋಟಕ್ಕೆ ಬಾಳೆಹಣ್ಣಿಗೆ ವಿಷಹಾಕಿ ಮಂಗಗಳಿಗೆ ತಿನ್ನಲು ಕೊಟ್ಟು, ಅವು ಅರೆಪ್ರಜ್ಞಾವಸ್ಥೆ ತಲುಪಿದಾಗ ದೊಣ್ಣೆಯಿಂದ ಹೊಡೆದು ಸಾಯಿಸಿರುವ ಶಂಕೆ ಇದೆ. ಎಲ್ಲ ಮಂಗಗಳ ತಲೆಗೆ ಪೆಟ್ಟಾಗಿ ರಕ್ತ ಸುರಿದಿದೆ. ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಲಿದ್ದು, ವರದಿ ಬಂದ ನಂತರ ಸಾವಿಗೆ ನಿಖರವಾದ ಕಾರಣ ಗೊತ್ತಾಗಲಿದೆ. ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಲಾಗುವುದು. ಮಂಗಗಳ ಹತ್ಯೆ ಮಾಡಿದವರ ಸುಳಿವು ನೀಡಿದವರಿಗೆ ಬಹುಮಾನ ನೀಡಲಾಗುವುದು. ಮಾಹಿತಿ ನೀಡಿದವರ ಹೆಸರನ್ನು ಗೋಪ್ಯವಾಗಿ ಇಡಲಾಗುವುದು’ ಎಂದರು.

ನರಸಿಂಹರಾಜಪುರದ ಪಿಎಸ್‌ಐ ನಿರಂಜನಗೌಡ, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶಿವಕುಮಾರ್, ಕಟ್ಟಿನಮನೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿನಯ್, ಉಪ ವಲಯ ಅರಣ್ಯಾಧಿಕಾರಿ ರಂಗನಾಥ್ ರಾಮಣ್ಣ, ಅತಳಟ್ಟೆ, ಕಾನೂರು ಗ್ರಾಮ ಪಂಚಾಯಿತಿ ಪಿಡಿಒ ಶ್ರೀನಿವಾಸ್, ಕಟ್ಟಿನಮನೆ ಪಿಎಚ್‌ಸಿಯ  ಆರೋಗ್ಯ ನಿರೀಕ್ಷಣಾಧಿಕಾರಿ ನಾಗೇಂದ್ರಪ್ಪ, ಆಶಾ ಕಾರ್ಯಕರ್ತೆ ಸಿ.ಕೆ.ಸವಿತಾ, ಅರಣ್ಯ ಇಲಾಖೆಯ ಸಚಿನ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT