ಮಂಗಳವಾರ, ಫೆಬ್ರವರಿ 7, 2023
27 °C
ಅಕ್ರಮ ಸಕ್ರಮ ಸಮಿತಿ ಸಭೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ಸ್ಪಷ್ಟನೆ

ಸಭೆ ನಡಾವಳಿಯಲ್ಲಿ ತಪ್ಪು ಬರಹ: ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪ: ಕಳೆದ 2021 ರಲ್ಲಿ ನಡೆದಿದ್ದ ಅಕ್ರಮ ಸಕ್ರಮ ಸಮಿತಿ ಸಭೆಯ ನಡಾವಳಿಯನ್ನು ಅಧಿಕಾರಿಗಳು ತಪ್ಪಾಗಿ ಬರೆದಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ಅವರು ಸೋಮವಾರ ಆಕ್ಷೇಪ ವ್ಯಕ್ತಪಡಿಸಿದರು.

ತಾಲ್ಲೂಕು ಕಚೇರಿಯಲ್ಲಿ ಮೇಗುಂದಾ ಹೋಬಳಿ ವ್ಯಾಪ್ತಿಗೆ ಸಂಬಂಧಿಸಿದಂತೆ ಆಯೋಜಿಸಿದ್ದ ಅಕ್ರಮ ಸಕ್ರಮ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಂಟಿ ಸರ್ವೆ ಮಾಡಿ ಕಂದಾಯ ಭೂಮಿಯನ್ನು ಗುರುತಿಸಲು ಸೂಚಿಸಿದ್ದೇನೆಯೇ ಹೊರತು, ರೈತರಿಗೆ ಅನ್ಯಾಯವಾಗುವಂತಹ ಯಾವುದೇ ನಿರ್ಣಯ ಕೈಗೊಂಡಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಈಗಾಗಲೇ ಸಾಗುವಳಿ ಚೀಟಿ ನೀಡಿರುವ ಹಾಗೂ ಇನ್ನುಮುಂದೆ ಸಾಗುವಳಿ ಚೀಟಿ ನೀಡಲಿರುವ ಸರ್ವೆ ನಂಬರ್ ಗಳು ಅರಣ್ಯ ವ್ಯಾಪ್ತಿಗೆ ಸೇರಿದ್ದಲ್ಲಿ ಅವುಗಳನ್ನು ವಾಪಸ್ ಅರಣ್ಯ ಇಲಾಖೆಗೆ ಬಿಟ್ಟುಕೊಡಲಾಗುವುದು ಎಂದು ತಪ್ಪಾಗಿ ಸಭಾ ನಡಾವಳಿ ಬರೆದಿರುವುದರಿಂದ ಜನರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಾಗುವಳಿ ಚೀಟಿ ರದ್ದುಪಡಿಸುವುದಾಗಲೀ ಅಥವಾ ರೈತರಿಗೆ ಮಂಜೂರಾದ ಭೂಮಿಯನ್ನು ಅರಣ್ಯ ಇಲಾಖೆಗೆ ವಾಪಸ್ ನೀಡುವುದಾಗಲಿ ನಮ್ಮ ಕೆಲಸವಲ್ಲ. ಈ ಹಿಂದೆ ನೀಡಿರುವ ಸಾಗುವಳಿ ಚೀಟಿಯನ್ನು ವಾಪಸ್ ಪಡೆಯಲು ನಮ್ಮ ಸಮಿತಿಗೆ ಏನು ಹಕ್ಕಿದೆ’ ಎಂದು ಪ್ರಶ್ನಿಸಿದರು.

ಫಾರಂ 53 ರಲ್ಲಿ 6 ಸಾಗುವಳಿ ಚೀಟಿ ವಿತರಣೆಗೆ ಸಿದ್ಧವಿದ್ದು, ಈ ಪೈಕಿ ಸಭೆ ನಡೆದ ಸಂದರ್ಭ ಹಾಜರಿದ್ದ 5 ಮಂದಿಗೆ ಸಾಗುವಳಿ ಚೀಟಿ ವಿತರಣೆ ಮಾಡಲಾಯಿತು. ಸಭೆಯಲ್ಲಿ 9 ಕಡತಗಳನ್ನು ಸ್ಥಿರೀಕರಿಸಲಾಯಿತು.

ತಹಶೀಲ್ದಾರ್ ವಿಮಲ ಸುಪ್ರಿಯಾ, ಬಗರ್ ಹುಕುಂ ಸಮಿತಿ ಸದಸ್ಯರಾದ ಎಚ್.ಕೆ.ದಿನೇಶ್ ಹೊಸೂರು, ಮಂಜುನಾಥ್, ನಾಗಲಕ್ಷ್ಮಿ, ಕೊಪ್ಪ ವಲಯಾರಣ್ಯಾಧಿಕಾರಿ ಪ್ರವೀಣ್ ಕುಮಾರ್, ಶೃಂಗೇರಿ ಉಪ ವಲಯಾರಣ್ಯಾಧಿಕಾರಿ ಚಂದ್ರಶೇಖರ್ ನಾಯಕ್, ಶಿರಸ್ತೆದಾರ್ ರಶ್ಮಿ, ಜಯಪುರ ಉಪ ತಹಶೀಲ್ದಾರ್ ನಾಗರಾಜ್, ಕಂದಾಯ ನಿರೀಕ್ಷಕ ಸುಧೀರ್, ತಾಲ್ಲೂಕು ಕಚೇರಿಯ ರಮೇಶ್, ಧರ್ಮರಾಜ್, ಗ್ರಾಮಲೆಕ್ಕಾಧಿಕಾರಿ ವಿಘ್ನೇಶ್, ಪ್ರೀತಿ, ಸೀತಾರಾಂ, ಶಾಸಕರ ಆಪ್ತ ಸಹಾಯಕ ಬಿ.ಸಿ.ರಾಜೇಂದ್ರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು