ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇತುವೆ ಮರೀಚಿಕೆ: ಸಂಚಾರವೇ ಸಮಸ್ಯೆ

ಕೊಪ್ಪ ತಾಲ್ಲೂಕು: ಭಂಡಿಗಡಿ ಗ್ರಾಮ ಪಂಚಾಯಿತಿ ತಲುಪಲು 24 ಕಿ.ಮೀ. ಸುತ್ತಾಟ
Last Updated 14 ಸೆಪ್ಟೆಂಬರ್ 2021, 4:27 IST
ಅಕ್ಷರ ಗಾತ್ರ

ಕೊಪ್ಪ: ಭಂಡಿಗಡಿ ಗ್ರಾಮ ಪಂಚಾಯಿತಿಗೆ ತಲುಪಲು ಸುಮಾರು 24 ಕಿ.ಮೀ.ದೂರ ಸುತ್ತಿಬಳಸಿ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ತಾಲ್ಲೂಕಿನ ಕವಡೆಕಟ್ಟೆ ಭಾಗದ ಗ್ರಾಮಸ್ಥರದ್ದಾಗಿದೆ.

ತಾಲ್ಲೂಕಿನ ಭಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕವಡೆಕಟ್ಟೆ, ಹೊಸತೋಟ, ಸೂಳೆಕೆರೆ, ಚಾರಣಬೈಲು, ಮೇಲುಕೊಪ್ಪ ಗ್ರಾಮದ ಜನರು ಪಂಚಾಯಿತಿಗೆ ತೆರಳಲು ಸುತ್ತುಬಳಸಿ ಓಡಾಡಬೇಕಾಗಿದೆ.ಸುಮಾರು 200 ಮತದಾರರು ಇಲ್ಲಿದ್ದಾರೆ. ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೂ ಕವಡೆಕಟ್ಟೆ ಭಾಗಕ್ಕೂ ಮಧ್ಯೆ ಅಡ್ಡಲಾಗಿ ಹರಿಯುತ್ತಿರುವ ತುಂಗಾನದಿಗೆ ಇಲ್ಲಿ ಸೇತುವೆ ಇಲ್ಲ.

ಈ ಭಾಗದ ಜನರು ಪ್ರಸ್ತುತ ಭಂಡಿಗಡಿಗೆ ಹೋಗಲು ಬೇಸಿಗೆಯಲ್ಲಿ ನದಿ ದಾಟಿ ಸಂಚರಿಸುತ್ತಾರೆ. ಮಳೆಗಾಲದಲ್ಲಿ ನದಿ ತುಂಬಿ ಹರಿಯುವುದರಿಂದ ಬೊಮ್ಮಲಾಪುರ ಮೂಲಕ ಸಿಗದಾಳುವಿನಲ್ಲಿ ರಾಷ್ಟ್ರೀಯ ಹೆದ್ದಾರಿ– 169 ಅನ್ನು ಸಂಪರ್ಕಿಸಿ ಹರಿಹರಪುರ ಮೂಲಕ ಭಂಡಿಗಡಿಗೆ ತೆರಳುತ್ತಾರೆ. ಖಾಸಗಿ ವಾಹನ ಇಲ್ಲದವರು ಗಡಿಕಲ್‌ನಲ್ಲಿ ಬಸ್ ಹಿಡಿದು ಕೊಪ್ಪಕ್ಕೆ ಬಂದು ಸುಮಾರು 30 ಕಿ.ಮೀ. ದೂರ ಸಂಚರಿಸುತ್ತಾರೆ. ಮತ್ತೆ ಕೆಲವರು ತೀರ್ಥಹಳ್ಳಿ ತಾಲ್ಲೂಕು ಬಸವಾನಿ ಮೂಲಕ ಹಾದು ಭಂಡಿಗಡಿಗೆ ತಲುಪುತ್ತಾರೆ.

‘ತೂಗು ಸೇತುವೆ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಅನೇಕ ಬಾರಿ ಮನವಿಯನ್ನೂ ಸಲ್ಲಿಸಿದ್ದಾರೆ. 2016ರಲ್ಲಿ ಜಿಲ್ಲಾಧಿಕಾರಿಗೆ, 2017ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ, 2017ರಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ, ಈ ಹಿಂದೆ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ(ಎಂಎಡಿಬಿ) ಅಧ್ಯಕ್ಷರಾಗಿದ್ದ ಶಾಸಕ ಟಿ.ಡಿ.ರಾಜೇಗೌಡ ಅವರಿಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮನವಿ ಸಲ್ಲಿಸಿದ್ದೆವು‘ ಎನ್ನುತ್ತಾರೆ ಗ್ರಾಮಸ್ಥರು.

ತುಂಗಾ ನದಿಗೆ ತೂಗು ಸೇತುವೆ ನಿರ್ಮಿಸಿಕೊಡುವಂತೆ ದಲಿತ ಸಂಘರ್ಷ ಸಮಿತಿ ಮುಖಂಡ ರವೀಂದ್ರ ಅವರು ಭಂಡಿಗಡಿ ಗ್ರಾಮ ಪಂಚಾಯಿತಿಗೆ ಈ ಹಿಂದೆ ಮನವಿ ಸಲ್ಲಿಸಿದ್ದಾಗ, ‘ತುಂಗಾ ನದಿಗೆ ತೂಗು ಸೇತುವೆ ನಿರ್ಮಾಣವನ್ನು ಜಿಪಿಡಿಪಿ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗಿದೆ’ ಎಂಬ ಹಿಂಬರಹವನ್ನು ನೀಡಿದ್ದರು.

‘ಯಾವುದೇ ಕೆಲಸಕ್ಕಾದರೂ ಹತ್ತಾರು ಕಿ.ಮೀ. ದೂರ ಕ್ರಮಿಸಿ ಗ್ರಾಮ ಪಂಚಾಯಿತಿಗೆ ಹೋಗಬೇಕು. ಕೆಲವೊಮ್ಮೆ ಅಧಿಕಾರಿಗಳು ಸಿಗದಿದ್ದಾಗ ಇಡೀ ದಿನ ವ್ಯರ್ಥವಾಗುತ್ತದೆ. ಜತೆಗೆ ಕೂಲಿ ಕೆಲಸವನ್ನೂ ಬಿಟ್ಟು ಓಡಾಡಬೇಕಾಗುತ್ತದೆ. ಖಾಸಗಿ ವಾಹನ ಇಲ್ಲದವರು ಬಸ್ ಮೂಲಕ, ಇಲ್ಲವೇ ಬಾಡಿಗೆ ವಾಹನದ ಮೂಲಕ ನೂರಾರು ರೂಪಾಯಿ ಖರ್ಚು ಮಾಡಿ ಹೋಗಿ ಬರಬೇಕಾಗಿದೆ. ಬಡವರು, ವೃದ್ಧರಿಗೆ ಸಮಸ್ಯೆ ಉಲ್ಬಣಿಸಿದೆ’ ಎಂದು ಗ್ರಾಮಸ್ಥರು ಸಂಕಷ್ಟದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಜಿಲ್ಲಾಧಿಕಾರಿ ಸ್ಥಳ ಪರಿಶೀಲಿಸಿದ್ದರು: ‘ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ತೂಗು ಸೇತುವೆ ನಿರ್ಮಾಣ ಕುರಿತು 2015ರಲ್ಲಿ ಅಂದಿನ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು’ ಎಂದು ಭಂಡಿಗಡಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕವಡೆಕಟ್ಟೆಯ ಪ್ರದೀಪ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT