ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | ಕೋರೆಗಾಂವ್ ವಿಜಯೋತ್ಸವ: ದಲಿತರ ಹಕ್ಕು–ಸ್ವಾಭಿಮಾನದ ಹೋರಾಟ

206 ನೇ ಭೀಮ ಕೋರೆಗಾಂವ್ ವಿಜಯೋತ್ಸವ , ಸಿಹಿ ಹಂಚಿ ಸಂಭ್ರಮಾಚರಣೆ
Published 1 ಜನವರಿ 2024, 14:24 IST
Last Updated 1 ಜನವರಿ 2024, 14:24 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಅಸ್ಪಶ್ಯತೆ ಅಸಮಾನತೆ ವಿರುದ್ಧ ದಲಿತರ ಸ್ವಾಭಿಮಾನ, ಹಕ್ಕಿಗಾಗಿ ನಡೆದ ಕೋರೆಗಾಂವ್ ಕದನದ ವಿಜಯೋತ್ಸವ ಭಾರತ ಚರಿತ್ರೆಯಲ್ಲಿ ಅವಿಸ್ಮರಣೀಯ ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ ಹೇಳಿದರು.

ಗೌತಮ ಬುದ್ಧ ಪರಿಶಿಷ್ಟ ಜಾತಿ ಸಹಕಾರ ಸಂಘ ಹಾಗೂ ಸಮಾನ ಮನಸ್ಕ ವೇದಿಕೆ ವತಿಯಿಂದ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಸೋಮವಾರ ಏರ್ಪಡಿಸಿದ್ದ 206 ನೇ ಭೀಮ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭಾರತ ಇತಿಹಾಸದ ಸ್ವಾತಂತ್ರ್ಯ ಪೂರ್ವದಲ್ಲಿ ಸಿಪಾಯಿ ದಂಗೆಗೂ ಮುನ್ನಾ ನಡೆದ 1818 ರ ಕೋರೆಗಾಂವ್ ಯುದ್ಧ ಅತ್ಯಂತ ಮಹತ್ವದಾಗಿದೆ. ಅಂದು ಮರಾಠ ಪೇಶ್ವೆ ಸೈನ್ಯದಲ್ಲಿದ್ದ ಜಾತೀಯತೆ, ಅಸ್ಪಶ್ಯತೆ ವಿರುದ್ಧ ಸಿದ್ಧನಾಕ ನಾಯಕತ್ವದ 500 ಮಹಾರ್ ಸೈನಿಕರು ಸಿಡಿದೆದ್ದರು. ನಿರಂತರ 12 ಗಂಟೆಗಳ ಹೋರಾಟದ ಮೂಲಕ ಮರಾಠ ಪೇಶ್ವೆಯ 30 ಸಾವಿರ ಸೈನಿಕರನ್ನು ಮಣಿಸಿ ವಿಜಯಪತಾಕೆ ಹಾರಿಸಿದ್ದರು. ಹೋರಾಟದಲ್ಲಿ 22 ಮಂದಿ ಮಹಾರ್ ಸೈನಿಕರು ಹುತಾತ್ಮರಾದರು. ಅವರ ಧೈರ್ಯ, ಸಾಹಸದ ಸ್ಮರಣೆಯ ಪ್ರತೀಕವೆ ಕೊರೆಂಗಾವ್ ವಿಜಯೋತ್ಸವ ಎಂದು ಸ್ಮರಿಸಿದರು.

ಕೆಳ ವರ್ಗದ ಜನತೆ ತಮ್ಮ ಆತ್ಮಗೌರವ, ಸ್ವಾಭಿಮಾನ ಮತ್ತು ಹಕ್ಕುಗಳಿಗಾಗಿ ಮೇಲ್ವರ್ಗದ ವಿರುದ್ಧ ನಡೆಸಿ ವಿಜಯ ಸಾಧಿಸಿದ ಮೊದಲ ಕದನ ಇದಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ ಕಳೆದರೂ ಜಾತೀಯತೆ, ಅಸ್ಪೃಶ್ಯತೆ ಜೀವಂತವಾಗಿದೆ, ಶೋಷಣೆ, ದೌರ್ಜನ್ಯ ನಿರಂತರಾಗಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಬಿ.ಆರ್‌. ಅಂಬೇಡ್ಕರ್ ಅವರು ಕೆಳವರ್ಗದಲ್ಲಿ ಹುಟ್ಟಿ ಅಸಮಾನತೆ ಎದುರಿಸಿದರೂ ಸಂವಿಧಾನದ ಮೂಲಕ ಎಲ್ಲ ವರ್ಗಗಳಿಗೆ ಸಮಾನತೆ ಕಲ್ಪಿಸಿದ್ದಾರೆ. ದೇಶದಲ್ಲಿ ಅಂಬೇಡ್ಕರ್ ಅವರ ಸಂವಿಧಾನವನ್ನು ಇಡಿಯಾಗಿ ಜಾರಿಗೊಳಿಸಿ ಸರ್ವಜನಾಂಗದ ಏಳಿಗೆ ಬಯಸುವ ಇಚ್ಛಾಶಕ್ತಿ ಯಾವುದೇ ಪಕ್ಷಗಳಿಗಿಲ್ಲ ಎಂದು ದೂರಿದರು.

ದಲಿತ, ಶೋಷಿತ ಸಮುದಾಯಗಳು ಮೌಢ್ಯತೆಗಳನ್ನು ದೂರಮಾಡಿ ಪ್ರಜ್ಞಾವಂತರಾಗಬೇಕು. ಅಂಬೇಡ್ಕರ್‌ ಸಂವಿಧಾನದ ಮೂಲಕ ಎಲ್ಲ ವರ್ಗದ ಜನರಿಗೆ ಮತದಾನದ ಹಕ್ಕು ನೀಡಿದ್ದಾರೆ. ಜಾತಿ, ಧರ್ಮ, ಮೌಢ್ಯದ ಸಂಕೋಲೆಗೆ ಸಿಲುಕಿ ಅದನ್ನು ಮಾರಿಕೊಳ್ಳದೆ ವಿವೇಚನೆಯಿಂದ ಸಾರ್ವಭೌಮತ್ವ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಎಂ.ಎಲ್‌.ಮೂರ್ತಿ ಮಾತನಾಡಿ, ದಲಿತ ಸಮುದಾಯ ಹಿಂದಿನಿಂದಲೂ ಅಪಮಾನ ಶೋಷಣೆ ದೌರ್ಜನ್ಯಗಳನ್ನು, ಎದುರಿಸುತ್ತಲೇ ಬಂದಿದೆ. ಆದರೆ ಇಂದಿಗೂ ಅದು ನಿವಾರಣೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ವರ ಅಭ್ಯುದಯಕ್ಕೆ ಕುವೆಂ‍ಪು, ಅಂಬೇಡ್ಕರ್ ಸೇರಿದಂತೆ ಅನೇಕ ಮಹನೀಯರು ಸರ್ವಜನಾಂಗದ ಶಾಂತಿಯ ತೋಟ, ಸಹಬಾಳ್ವೆ ಸಂದೇಶ ತಿಳಿಸಿದ್ದಾರೆ. ಧರ್ಮ, ಕೋಮುಭಾವನೆ ಬಿಟ್ಟು ಒಗಟ್ಟಿನಿಂದ ಬಾಳಬೇಕು ಎಂದು ಸಲಹೆ ನೀಡಿದರು. ವಕೀಲರಾದ ಪರಮೇಶ್‌ ಕೋರೆಂಗಾವ್ ವಿಜಯೋತ್ಸವದಲ್ಲಿ ಮಹಾರ್ ಸೈನಿಕರ ಸಾಹಸ ಕುರಿತು ವಿವರಿಸಿದರು.

ಗೌತಮ ಬುದ್ಧ ಪರಿಶಿಷ್ಟ ಜಾತಿ ಸಹಕಾರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ. ಬಸವರಾಜ್‌, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ, ಮುಖಂಡರಾದ ರವೀಶ್ ಕ್ಯಾತನಬೀಡು, ಎಚ್.ಎಂ. ರೇಣುಕಾರಾಧ್ಯ, ಗುರುಶಾಂತಪ್ಪ, ಗೌಸ್‌ಮೊಹಿಯುದ್ಧೀನ್, ಕೂದುವಳ್ಳಿ ಮಂಜು, ರಘು, ಸಂತೋಷ್‌ ಪಾಲ್ಗೊಂಡಿದ್ದರು.

ದಲಿತ ಸಮುದಾಯ ಕೀಳರಿಮೆ ಬಿಡಬೇಕು ದಲಿತ ಸಮುದಾಯಗಳು ತಮ್ಮಲ್ಲಿನ ಕೀಳರಿಮೆ ಮನೋಭಾವನೆ ಬಿಡಬೇಕು ಎಂದು ಕೆಪಿಸಿಸಿ ವಕ್ತಾರ ಎಚ್‌.ಎಚ್‌.ದೇವರಾಜ್ ಹೇಳಿದರು. ಸಮಾಜದಲ್ಲಿ ಬೇರೂರಿರುವ ಅಸಮಾನತೆ ಅಸ್ಪೃಶ್ಯತೆ ನಿವಾರಣೆಯಾಗಬೇಕು. ಆ ನಿಟ್ಟಿನಲ್ಲಿ ಸಾಮಾಜಿಕ ಆರ್ಥಿಕ ರಾಜಕೀಯ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು. ಜಾತಿಧರ್ಮದ ಅಮಲು ಬಿಟ್ಟು ಅಂಬೇಡ್ಕರ್ ಆಶಯ ಹಾಗೂ ಮಾನವ ಧರ್ಮವನ್ನು ಪ್ರೀತಿಸಬೇಕು ಎಂದರು. ಪೇಶ್ವೆಗಳ ಆಡಳಿತದಲ್ಲಿದ್ದ ಅಸ್ಪಶ್ಯತೆ ವಿರುದ್ಧ ಹೋರಾಟ ನಡೆಸಿ ಹುತಾತ್ಮರಾದ ಮಹಾರ್ ಸೈನಿಕರನ್ನು ಎಂದಿಗೂ ಸ್ಮರಣೆ ಮಾಡಬೇಕು. ಅವರ ಶೌರ್ಯ ಸಾಹಸ ಒಗ್ಗಟನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT