ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಬ್ಬ ತಹಶೀಲ್ದಾರ್ ವಿರುದ್ಧ ಪ್ರಕರಣ; ಕಂದಾಯ ನಿರೀಕ್ಷಕ ಸೇರಿ ಇಬ್ಬರ ಬಂಧನ

ಅಕ್ರಮ ಭೂಮಂಜೂರಾತಿ ಪ್ರಕರಣ
Published 25 ಸೆಪ್ಟೆಂಬರ್ 2023, 15:48 IST
Last Updated 25 ಸೆಪ್ಟೆಂಬರ್ 2023, 15:48 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನಲ್ಲಿ ನಡೆದಿರುವ ಅಕ್ರಮ ಭೂಮಂಜೂರಾತಿ ಪ್ರಕರಣದಲ್ಲಿ ಮತ್ತೊಬ್ಬ ತಹಶೀಲ್ದಾರ್ ಸೇರಿ ನಾಲ್ವರ ‌ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಕಂದಾಯ ನಿರೀಕ್ಷಕ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಕಂದಾಯ ಕಾಯ್ದೆಯ ನಿಯಮಗಳನ್ನು ಪಾಲಿಸದೆ ಮನಸೋಇಚ್ಛೆ ಕಂದಾಯ ಭೂಮಿ ಮಂಜೂರು ಮಾಡಿದ ಆರೋಪದಲ್ಲಿ ಕಂದಾಯ ನಿರೀಕ್ಷಕ ಎನ್‌.ಎನ್‌. ಗಿರೀಶ್‌, ಗ್ರಾಮ ಲೆಕ್ಕಾಧಿಕಾರಿ ನೇತ್ರಾವತಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ತಹಶೀಲ್ದಾರ್ ಆಗಿದ್ದ ಎಚ್‌.ಎಂ.ರಮೇಶ್ ಮತ್ತು ಹಿಂದಿನ ಶಿರಸ್ತೇದಾರ್ ಪಾಲಯ್ಯ ವಿರುದ್ಧ ಪ್ರಕರಣ ದಾಖಲಾಗಿದೆ. ಗ್ರಾಮ ಲೆಕ್ಕಾಧಿಕಾರಿಯಾಗಿರುವ ಗಿರೀಶ್‌ ಹೆಚ್ಚುವರಿಯಾಗಿ ಕಂದಾಯ ನಿರೀಕ್ಷಕರ ಹುದ್ದೆ ನಿಭಾಯಿಸುತ್ತಿದ್ದರು.

ಅಕ್ರಮ ಭೂಮಂಜೂರಾತಿ ಬಗ್ಗೆ ವಿಚಾರಣೆ ನಡೆಸುತ್ತಿದ್ದ ಚಿಕ್ಕಮಗಳೂರು ಉಪವಿಭಾಗಾಧಿಕಾರಿ, ಅಕ್ರಮವಾಗಿ ಏಳು ಜನರ ಹೆಸರಿಗೆ ಮಾಡಿದ್ದ ಖಾತೆಗಳನ್ನು ರದ್ದುಪಡಿಸಿ ಆದೇಶಿಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಅಧಿಕಾರಿ ಮತ್ತು ನೌಕರರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದರು. ಅದರಂತೆ ತಹಶೀಲ್ದಾರ್ ತಿಪ್ಪೇಸ್ವಾಮಿ ಭಾನುವಾರ ದೂರು ನೀಡಿದ್ದು, ನಾಲ್ವರ ಮೇಲೆ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.

‘ಭೂಮಂಜೂರಾತಿ ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ಕಂದಾಯ ಕಾಯ್ದೆ ಪ್ರಕಾರ ಶಾಸಕರ ಅಧ್ಯಕ್ಷತೆಯ ಬಗರ್ ಹುಕುಂ ಸಮಿತಿ ಮುಂದೆ ಮಂಡಿಸಿ ಅನುಮೋದನೆ ಪಡೆಯಬೇಕು. ಅದ್ಯಾವುದನ್ನೂ ಮಾಡದೆ ನೇರವಾಗಿ ವ್ಯಕ್ತಿಗಳ ಹೆಸರಿನಲ್ಲಿ ಭೂಮಿ ಮಂಜೂರು ಮಾಡಿರುವುದು ಕಂಡು ಬಂದಿದೆ’ ಎಂದು ದೂರಿನಲ್ಲಿ ವಿವರಿಸಿದ್ದಾರೆ. ತಹಶೀಲ್ದಾರ್ ಮತ್ತು ಶಿರಸ್ತೇದಾರ್ ತಲೆಮರೆಸಿಕೊಂಡಿದ್ದು, ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT