ಚಿಕ್ಕಮಗಳೂರು: ‘ಸರ್ಕಾರಿ ಭೂಮಿ ಕೊರತೆ ಇರುವುದರಿಂದ ಹೊಸ ಮಂಜೂರಾತಿಗೆ ಅವಕಾಶ ನೀಡಬಾರದು. ಈಗಾಗಲೇ ಸಾಗುವಳಿ ಮಾಡುತ್ತಿದ್ದರೆ ಒಂದು ಬಾರಿಗೆ ಅವಕಾಶ ನೀಡಿ ವಾರ್ಷಿಕ ಕೃಷಿ ಗುತ್ತಿಗೆಗೆ ನೀಡಬಹುದು’ ಎಂದು ತನಿಖಾ ತಂಡ ಸರ್ಕಾರಕ್ಕೆ ಸಲಹೆ ನೀಡಿದೆ.
ಕಡೂರು-ಮೂಡಿಗೆರೆ ಅಕ್ರಮ ಭೂಮಂಜೂರಾತಿ ಬಗ್ಗೆ ತನಿಖೆ ನಡೆಸಿರುವ 13 ತಹಶೀಲ್ದಾರ್‌ಗಳ ತನಿಖಾ ತಂಡ, ಅಕ್ರಮ ಭೂಮಂಜೂರಾತಿ ಮಾಡಿರುವ ತಪ್ಪಿತಸ್ಥರ ಪಟ್ಟಿ ನೀಡುವ ಜತೆಗೆ ಮುಂದಿನ ದಿನಗಳಲ್ಲಿ ಅಕ್ರಮ ತಡೆಗೆ ಕೈಗೊಳ್ಳಬಹುದಾದ ಕ್ರಮಗಳನ್ನು ಶಿಫಾರಸು ಮಾಡಿದೆ.
‘ಅಕ್ರಮ ಮಂಜೂರಾತಿಯನ್ನು ಸಕ್ರಮಗೊಳಿಸಲು ಸರ್ಕಾರ ಆಗಾಗ ತಿದ್ದುಪಡಿಗಳನ್ನು ಜಾರಿಗೆ ತರುತ್ತಿದೆ. ಇದರಿಂದ ಸರ್ಕಾರಿ ಭೂಮಿ ಒತ್ತುವರಿ ನಮ್ಮ ಹಕ್ಕು ಎಂದು ಜನ ಪರಿಗಣಿಸಿದ್ದಾರೆ. ಇದರಿಂದ ಸರ್ಕಾರಿ ಭೂಮಿ ಕಾಪಾಡುವುದು ಕಂದಾಯ ಇಲಾಖೆಗೆ ಕಷ್ಟವಾಗಿದೆ. ಹೊಸ ಒತ್ತುವರಿಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಒತ್ತುವರಿ ತಡೆಗಟ್ಟಲು ತಹಶೀಲ್ದಾರ್‌ಗಳಿಗೆ ಹೆಚ್ಚಿನ ಅಧಿಕಾರ ನೀಡಬಹುದು’ ಎಂದು ವರದಿಯಲ್ಲಿ ತಿಳಿಸಿದೆ.
‘ಈಗಾಗಲೇ ಕಾನೂನು ಬದ್ಧವಾಗಿ ಮಂಜೂರಾತಿ ನೀಡಿರುವ ಜಮೀನುಗಳ ಮಾಹಿತಿಯನ್ನು ಉಪಗ್ರಹ ಆಧಾರಿತ ಕೃತಕ ಬುದ್ಧಿಮತ್ತೆ ಬಳಿಸಿ ಜಿಯೊಪೆನ್ಸಿಂಗ್ ಮಾಡಿ ಅದನ್ನು ತಂತ್ರಾಂಶದಲ್ಲಿ ಅಳವಡಿಸಬಹುದು. ಉದ್ದೇಶ ಬದಲಾವಣೆಯಾದ ಕೂಡಲೇ ಸಂಬಂಧಿಸಿದ ಅಧಿಕಾರಿಗೆ ಸ್ವಯಂ ಚಾಲಿತವಾಗಿ ಮಾಹಿತಿ ರವಾನೆಯಾಗುವಂತೆ ಮಾಡಬಹುದು. ಅರಣ್ಯದಲ್ಲಿ ಬೆಂಕಿ ಕಂಡುಹಿಡಿಯಲು ಈಗಾಗಲೇ ಈ ವಿಧಾನವನ್ನು ಅನುಸರಿಸಲಾಗುತ್ತಿದೆ. ಕಂದಾಯ ಇಲಾಖೆಯಲ್ಲಿ ಹೊಸ ಒತ್ತುವರಿ ಗುರುತಿಸಲು ಇದರಿಂದ ಸಾಧ್ಯವಾಗಲಿದೆ’ ಎಂದು ಹೇಳಿದೆ.
ಸಂಪೂರ್ಣ ಗಣಕೀಕೃತವಾಗಬೇಕು: ‘ಮಂಜೂರಾತಿ ಪ್ರಕ್ರಿಯೆಯನ್ನು ಸಂಪೂರ್ಣ ಗಣಕೀಕೃತ ಮಾಡಬೇಕು. ಅಭಿಲೇಖಾಲಯದ ನಿರ್ವಹಣೆಯನ್ನು ವೈಜ್ಞಾನಿಕವಾಗಿ ಮಾಡಬೇಕು. ಗಣಕೀಕೃತ ಮಾಡಿದರೆ ತಂತ್ರಾಂಶದಲ್ಲಿ ಲಭ್ಯವಿರುವ ಅರ್ಜಿಗಳ ಮೇಲೆ ಮಾತ್ರ ಕ್ರಮ ವಹಿಸಲು ಅವಕಾಶ ಇರಬೇಕು’ ಎಂದು ತಿಳಿಸಿದೆ.
ಅರಣ್ಯ, ಗೋಮಾಳ ಸೇರಿ ಯಾವುದೇ ಕಾಯ್ದಿರಿಸಿದ ಜಮೀನು ಮಂಜೂರಾತಿಗೆ ತಂತ್ರಾಂಶವೇ ಅವಕಾಶ ಕೊಡದಂತೆ ಅಭಿವೃದ್ಧಿಪಡಿಸಬೇಕು. ಲೋಪವಾದಾಗ ಸ್ವಯಂ ಚಾಲಿತವಾಗಿ ಮೇಲಾಧಿಕಾರಿಗಳಿಗೆ ವರದಿ ಹೋಗುವಂತಹ ತಂತ್ರಾಂಶ ಇರಬೇಕು ಎಂಬುದು ಸೇರಿ ಹಲವು ಸಲಹೆಗಳನ್ನು ತನಿಖಾ ತಂಡ ನೀಡಿದೆ.
ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗದ ಗಡಿ ಗುರುತಿಸಿಕೊಂಡು ಪಕ್ಕಾ ಪೋಡಿಗೆ ಕ್ರಮ ವಹಿಸಬೇಕು. ಅರಣ್ಯ ಇಲಾಖೆ ಕೂಡ ತಮ್ಮ ಜಾಗಕ್ಕೆ ಬೇಲಿ ಅಥವಾ ಕಂದಕ ನಿರ್ಮಿಸಿ ಅತಿಕ್ರಮಣ ಆಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದೆ.
‘ಕೇಂದ್ರ ಮಾದರಿ ಭತ್ಯೆ ನೀಡಬೇಕು’
ಕಂದಾಯ ಇಲಾಖೆಯೇ ಮಾತೃ ಇಲಾಖೆ ಆಗಿರುವುದರಿಂದ ಪ್ರಕೃತಿ ವಿಕೋಪ, ಬೆಳೆ ಸರ್ವೆ, ಗಣತಿ, ಚುನಾವಣೆ ಸೇರಿ ಎಲ್ಲಾ ರೀತಿಯ ತುರ್ತು ಕೆಲಸಗಳಿಗೂ ಈ ಇಲಾಖೆಯ ಸಿಬ್ಬಂದಿಯೇ ಮುಂಚೂಣಿ ವಹಿಸಬೇಕಿದೆ. ಆದ್ದರಿಂದ ಸಿಬ್ಬಂದಿ ಕೊರತೆ ಆಗದಂತೆ ಕಾಲಕಾಲಕ್ಕೆ ನೇಮಕಾತಿ ನಡೆಸಬೇಕು ಎಂದು ವರದಿಯಲ್ಲಿ ತನಿಖಾ ತಂಡ ಅಭಿಪ್ರಾಯಪಟ್ಟಿದೆ.
‘ಸರ್ಕಾರ ಈಗ ನೀಡುತ್ತಿರುವ ಮನೆ ಬಾಡಿಗೆ ದರದಲ್ಲಿ ರಾಜ್ಯದ ಯಾವುದೇ ಊರಿನಲ್ಲೂ ಬಾಡಿಗೆ ಮನೆ ಪಡೆಯುವುದು ಅಸಾಧ್ಯ. ಆದ್ದರಿಂದ ಕೇಂದ್ರ ಸರ್ಕಾರದ ಮಾದರಿಯಲ್ಲಿ ವೇತನ ಮತ್ತು ಭತ್ಯೆಗಳನ್ನು ನೀಡಬೇಕು. ಕ್ಷೇತ್ರ ಸಿಬ್ಬಂದಿಗೆ ಪೊಲೀಸ್ ಮಾದರಿಯಲ್ಲಿ ವಿಶೇಷ ಹಣ ಬಿಡುಗಡೆ ಮಾಡಬೇಕು’ ಎಂದು ತಿಳಿಸಿದೆ.
‘ಒಬ್ಬ ಸಿಬ್ಬಂದಿ ಒಂದೇ ತಾಲ್ಲೂಕಿನಲ್ಲಿ 3ರಿಂದ 5ವರ್ಷಕ್ಕಿಂತ ಹೆಚ್ಚಿಗೆ ನಿರಂತರವಾಗಿ ಕಾರ್ಯನಿರ್ವಹಿಸಲು ಅವಕಾಶ ಇರಬಾರದು. ಕನಿಷ್ಠ 5 ವರ್ಷಗಳಿಗೊಮ್ಮೆ ತರಬೇತಿ ನೀಡಬೇಕು. ಬಡ್ತಿ ನೀಡುವ ಮುನ್ನ ತರಬೇತಿ ಕಡ್ಡಾಯಗೊಳಿಸಬೇಕು’ ಎಂದೂ ಸಲಹೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.