ಬುಧವಾರ, ಮಾರ್ಚ್ 29, 2023
30 °C
94ಸಿ ಅಡಿ 20 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ

‘ಹಕ್ಕುಪತ್ರ ನೀಡಲು ಕಾನೂನು ಅಡ್ಡಿ’:ಶಾಸಕ ಟಿ.ಡಿ.ರಾಜೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನರಸಿಂಹರಾಜಪುರ: ‘ಅರಣ್ಯ ಇಲಾಖೆ ಒಪ್ಪಿಗೆ ಪಡೆದ ನಂತರವೇ ಹಕ್ಕು ಪತ್ರ ನೀಡಬೇಕೆಂದು ಸರ್ಕಾರವೇ ಜಿಲ್ಲಾಧಿಕಾರಿ ಮೂಲಕ ತಹಶೀಲ್ದಾರ್‌ಗೆ ಆದೇಶ ನೀಡಿದೆ’ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ 94ಸಿ ಅಡಿ 20 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

‘ಅರಣ್ಯ ಇಲಾಖೆ ಒಪ್ಪಿಗೆ ಪಡೆಯದೆ ಹಕ್ಕು ಪತ್ರ ನೀಡಿದರೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಆದೇಶದಲ್ಲಿದೆ. ಒಪ್ಪಿಗೆ ಪಡೆಯದೆ ಹಕ್ಕು ಪತ್ರ ನೀಡಿದರೆ ಸರ್ಕಾರಿ ಆದೇಶದ ಪ್ರಕಾರ ತಹಶೀಲ್ದಾರ್ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತಾರೆ. ಇತ್ತ ಬಿಜೆಪಿ ಮುಖಂಡರು ನಾನು ಹಕ್ಕು ಪತ್ರ ನೀಡುತ್ತಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ’ ಎಂದರು.  

‘ಜನರ ಗಮನಕ್ಕೆ ಬಾರದೆ ನೂರಾರು ಎಕರೆ ಭೂಮಿ ಅರಣ್ಯ ಎಂದು ಅಧಿಸೂಚನೆಯಾಗಿದೆ. ಮಹಾರಾಜರ ಕಾಲದಿಂದಲೂ ಗೋಮಾಳ ಎಂದು ನಮೂದಾಗಿದ್ದ ಜಾಗ ಈಗ ಅರಣ್ಯವಾಗಿದೆ. ಅರಣ್ಯ ಇಲಾಖೆಯ ಒಪ್ಪಿಗೆ ಇಲ್ಲದೆ ಹಿಂದಿನಂತೆ ಹಕ್ಕು ಪತ್ರ ನೀಡಬಹುದು ಎಂದು ಸರ್ಕಾರ ಹೊಸ ಆದೇಶ ಮಾಡಲಿ, ಎಲ್ಲರಿಗೂ ಹಕ್ಕು ಪತ್ರ ಕೊಡಲು ಸಿದ್ಧನಿದ್ದೇನೆ’ ಎಂದರು. 

ವಿಧಾನ ಪರಿಷತ್ ಸದಸ್ಯ ಪ್ರಾಣೇಶ್‌ 4 ಹೋಬಳಿಗೆ ಅಕ್ರಮ ಸಕ್ರಮ ಸಮಿತಿಗೆ ಅಧ್ಯಕ್ಷರಾಗಿದ್ದಾರೆ. ನಾನು 4 ಹೋಬಳಿಗೆ ಅಧ್ಯಕ್ಷನಾಗಿದ್ದೇನೆ. ಪ್ರಾಣೇಶ್ ಅವರು ಕಾನೂನು ಮೀರಿ ಹಕ್ಕು ಪತ್ರ ನೀಡುತ್ತಾರೆಯೇ ಎಂದು ಪ್ರಶ್ನಿಸಿದರು.

ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಹಲವು ಕಡತಗಳು ಕಾಣೆಯಾಗಿದೆ ಎಂದು ಜನರು ದೂರಿದ್ದಾರೆ. ಇದಕ್ಕೆ ಸಂಬಂಧಿಸಿ ಅಣ್ಣಪ್ಪ ಎಂಬ ಅಧಿಕಾರಿಯು ಶೃಂಗೇರಿಗೆ ವರ್ಗಾವಣೆಗೊಂಡಿದ್ದಾರೆ. ಅವರನ್ನು 8 ದಿನಕ್ಕೆ ಇಲ್ಲಿನ ತಾಲ್ಲೂಕು ಕಚೇರಿಗೆ ನಿಯೋಜಿಸಲಾಗುವುದು. ಆ ಸಂದರ್ಭದಲ್ಲಿ ಎಲ್ಲಾ ಕಡತಗಳನ್ನು ಕೊಡದಿದ್ದರೆ ಅವರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ, ಗ್ರಾಮ ಪಂಚಾಯಿತಿ ಸದಸ್ಯರಾದ ಗೇರ್ ಬೈಲು ನಟರಾಜ್, ಸುನಿಲ್ ,ಸಾಜು, ಮುಖಂಡರಾದ ಉಪೇಂದ್ರ, ಪಿ.ಆರ್. ಸದಾಶಿವ ಮೊದಲಾದವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು