ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಲಿಂಡರ್ ಸ್ಫೋಟ: ನಾಲ್ಕು ಮನೆಗಳಿಗೆ ಹಾನಿ

ಎರಡು ಹುಲ್ಲಿನ ಬಣವೆ ನಾಶ– ಸಮುದಾಯ ಭವನದಲ್ಲಿ ಸಂತ್ರಸ್ತರಿಗೆ ಆಶ್ರಯ
Last Updated 5 ಮಾರ್ಚ್ 2021, 14:24 IST
ಅಕ್ಷರ ಗಾತ್ರ

ಬೀರೂರು: ಸಮೀಪದ ದೊಡ್ಡಘಟ್ಟ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಸಿಲಿಂಡರ್ ಸ್ಫೋಟದ ಪರಿಣಾಮ ನಾಲ್ಕು ಮನೆಗಳು ಮತ್ತು ಎರಡು ಹುಲ್ಲಿನ ಬಣವೆಗಳು ಸಂಪೂರ್ಣ ನಾಶವಾಗಿದೆ. ಎರಡು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಸಂತ್ರಸ್ತ ಕುಟುಂಬಗಳಿಗೆ ತಾತ್ಕಾಲಿಕವಾಗಿ ಗ್ರಾಮದ ಸಮುದಾಯ ಭವನದಲ್ಲಿ ವಸತಿ ಕಲ್ಪಿಸಲಾಗಿದೆ.

ಮನೆ ಕಳೆದುಕೊಂಡ ನಾಲ್ಕೂ ಕುಟುಂಬಗಳ ಸದಸ್ಯರು ಕೂಲಿಯಿಂದ ಜೀವನ ನಿರ್ವಹಣೆ ಮಾಡುತ್ತಿರುವವರು. ವಾಸಪ್ಪ, ಗಂಗರೇವಮ್ಮ, ಬಿ.ಎಲ್.ರೇಣುಕಾ, ಬಸವರಾಜ್ ಎನ್ನುವವರ ಮನೆಗಳು ಸಂಪೂರ್ಣ ಸುಟ್ಟುಹೋಗಿವೆ. ಯಲ್ಲವ್ವ, ರಂಗನಾಥ ಎನ್ನುವವರ ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ. ಕರಿಯಪ್ಪ ಮತ್ತು ಯಲ್ಲಪ್ಪ ಎನ್ನುವವರಿಗೆ ಸೇರಿದ ಬಣವೆಗಳು ಬೆಂಕಿಗೆ ಭಸ್ಮವಾಗಿವೆ.

ಅನಾಹುತ ಸಂಭವಿಸಿದ ಸಮಯದಲ್ಲಿ ಮನೆಯಲ್ಲಿ ಸದಸ್ಯರು ಇರದಿದ್ದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ. ಆದರೂ ಗಂಗರೇವಮ್ಮ ಎನ್ನುವವರ ಮನೆಯಲ್ಲಿ ತೊಟ್ಟಿಲಿನಲ್ಲಿದ್ದ 1 ವರ್ಷದ ಮಗು ಶಶಾಂಕ್ ಎಂಬಾತನನ್ನು ರಕ್ಷಿಸಿದ ಶೇಖರಪ್ಪ ಅವರ ಬೆನ್ನಿಗೆ ಸುಟ್ಟ ಗಾಯಗಳಾಗಿದೆ. ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಾಸಪ್ಪ ಎನ್ನುವವರ ಪತ್ನಿ ಭಾಗ್ಯಮ್ಮಾ ಅಡುಗೆ ಮಾಡುವ ಸಲುವಾಗಿ ಸ್ಟೌವ್‍ನಲ್ಲಿ ನೀರು ಕಾಯಲು ಇಟ್ಟು ಅಕ್ಕಿ ತೊಳೆಯಲು ಹೊರಗೆ ಬಂದಿದ್ದ ಸಂದರ್ಭದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಅಕ್ಕಪಕ್ಕದವರನ್ನು ಸಹಾಯಕ್ಕೆ ಕರೆಯುವಷ್ಟರಲ್ಲಿ ರೆಗ್ಯುಲೇಟರ್ ಬಳಿ ಬೆಂಕಿ ಕಾಣಿಸಿಕೊಂಡು ಮನೆಯನ್ನು ವ್ಯಾಪಿಸಿದೆ. ಗ್ರಾಮಸ್ಥರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಸಿಲಿಂಡರ್ ಸ್ಫೋಟಿಸಿದ್ದಲ್ಲದೆ ಪಕ್ಕದ ಮನೆಗೂ ಬೆಂಕಿ ವ್ಯಾಪಿಸಿ ಅಲ್ಲಿಯೂ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಗಳ ರಕ್ಷಣೆ ಸಾಧ್ಯವಾಗಿಲ್ಲ.

ಗೃಹೋಪಯೋಗಿ ಸಾಮಗ್ರಿ, ದಿನಸಿ, ಬಟ್ಟೆ, ಪಾತ್ರೆ ಸೇರಿದಂತೆ ಎಲ್ಲ ವಸ್ತುಗಳೂ ನಷ್ಟವಾಗಿದೆ. ಸಂತ್ರಸ್ತರು ಅಕ್ಷರಶಃ ಉಟ್ಟಬಟ್ಟೆಯಲ್ಲಿ ಬೀದಿಗೆ ಬೀಳುವಂತಾಗಿದೆ. ಬೆಳಿಗ್ಗೆ 11 ಗಂಟೆಗೆ ಘಟನೆಯ ವಿವರ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಮನೆಗಳು ಮತ್ತು ಬಣವೆ ಬಹುತೇಕ ನಾಶವಾಗಿದ್ದವು.

ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಮಾಜಿ ಶಾಸಕ ವೈ.ಎಸ್.ವಿ.ದತ್ತ, ಸಂತ್ರಸ್ತ ಕುಟುಂಬಗಳಿಗೆ ವೈಯಕ್ತಿಕವಾಗಿ ತಲಾ ₹ 5ಸಾವಿರ ಧನ ಸಹಾಯ ನೀಡಿ, ತಾಲ್ಲೂಕು ಆಡಳಿತ ಮತ್ತು ಪೆಟ್ರೋಲಿಯಂ ಕಾರ್ಪೊರೇಷನ್ ಅಧಿಕಾರಿಗಳೊಂದಿಗೆ ಮಾತನಾಡಿ ಬಡ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ಒದಗಿಸಲು ನೆರವಾಗುವಂತೆ ಮನವಿ ಮಾಡಿದರು.

ಮಧ್ಯಾಹ್ನ ಬೀರೂರು ಪುರಸಭೆ ಅಧ್ಯಕ್ಷ ಎಂ.ಪಿ.ಸುದರ್ಶನ್ ಮತ್ತು ಬೀರೂರು ನಾಡಕಚೇರಿ ಕಂದಾಯ ಅಧಿಕಾರಿ ಕಿರಣ್‍ಕುಮಾರ್ ಜತೆಯಲ್ಲಿ ಸ್ಥಳಕ್ಕೆ ಬಂದ ಜಿಲ್ಲಾ ಪಂಚಾಯಿತಿ ಸದಸ್ಯ ಮಹೇಶ್ ಒಡೆಯರ್, ‘ಅಧಿವೇಶನದ ಹಿನ್ನೆಲೆಯಲ್ಲಿ ಶಾಸಕರು ಬೆಂಗಳೂರಿನಲ್ಲಿದ್ದು, ದೂರವಾಣಿ ಮೂಲಕ ತಾಲ್ಲೂಕು ಪಂಚಾಯಿತಿ ಇಒ ಮತ್ತು ಕಂದಾಯಾಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಗ್ರಾಮ ಪಂಚಾಯಿತಿ ಪಿಡಿಒ ಶೀಘ್ರ ವರದಿ ತಯಾರಿಸಿ ಬಸವ ವಸತಿ ಯೋಜನೆಯಲ್ಲಿ ಸಂತ್ರಸ್ತ ಕುಟುಂಬಗಳಿಗೆ ಶೀಘ್ರ ಮನೆ ಕಟ್ಟಿಕೊಡಲು ಮುಂದಾಗುವಂತೆ ಸೂಚಿಸಿದ್ದಾರೆ. ಅವರು ಕ್ಷೇತ್ರಕ್ಕೆ ಬಂದ ತಕ್ಷಣ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ನಮ್ಮೊಂದಿಗೆ ಅಡುಗೆ ಅನಿಲ ವಿತರಕರೂ ಬಂದಿದ್ದು, ಕಂಪನಿ ವತಿಯಿಂದ ವಿಮಾಹಣ ಕೊಡಿಸಲು ವರದಿ ನೀಡಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಅಗ್ನಿಶಾಮಕ ದಳದ ಜಿಲ್ಲಾಧಿಕಾರಿ ಕೆ.ಪಿ.ಶಶಿಧರ್, ಕಡೂರು ಅಗ್ನಿಶಾಮಕ ಠಾಣಾಧಿಕಾರಿ ಬಸವರಾಜು ಮತ್ತು ಸಿಬ್ಬಂದಿ ಬಂದು ಬೆಂಕಿ ನಂದಿಸಲು ಸಹಕರಿಸಿದರು. ಘಟನೆಯಿಂದ ₹ 19 ಲಕ್ಷ ಹಾನಿ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಶಾಸಕರ ಪರವಾಗಿ ಅವರ ಆಪ್ತ ಸಹಾಯಕ ಶಾಮಿಯಾನ ಚಂದ್ರು ಸಂತ್ರಸ್ತ ಕುಟುಂಬಗಳಿಗೆ ಧನಸಹಾಯ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT