ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು: ಮಾವು ಇಳುವರಿ ಕುಸಿತ, ಬೇಡಿಕೆ ಹೆಚ್ಚಳ

ರಘು ಕೆ.ಜಿ.
Published 17 ಮೇ 2024, 7:10 IST
Last Updated 17 ಮೇ 2024, 7:10 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ತರಕಾರಿ ಬೆಲೆಯ ಜೊತೆಗೆ ಮಾರುಕಟ್ಟೆಯಲ್ಲಿ ಹಣ್ಣುಗಳ ದರವೂ ಹೆಚ್ಚಿದೆ. ಅಕಾಲಿಕ ಮಳೆ ಹಾಗೂ ಹವಾಮಾನ ವೈಪರೀತ್ಯದ ಪರಿಣಾಮ ಇಳುವರಿ ಕುಂಠಿತವಾಗಿದ್ದು, ಮಾರುಕಟ್ಟೆಗೆ ಆವಕ ಕಡಿಮೆ ಇದೆ. ಆದರೂ ಈ ಋತುವಿನಲ್ಲಿ ಹಣ್ಣುಗಳ ದರ್ಬಾರು ಹೆಚ್ಚಿದೆ.

ಸದ್ಯ ಮಾರುಕಟ್ಟೆಯಲ್ಲಿ ಹಣ್ಣುಗಳ ರಾಜ ಮಾವಿಗೆ ಬಲು ಬೇಡಿಕೆ ಇದೆ. ಜಿಲ್ಲೆಯಲ್ಲಿ 2023ನೇ ಸಾಲಿನಲ್ಲಿ ಸುಮಾರು 1,623 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆ ಇತ್ತು. ಸಕಾಲಕ್ಕೆ ಮಳೆ ಬಾರದಿರುವುದು ಮತ್ತು ಈಚೆಗೆ ಸುರಿದ ಆಲಿಕಲ್ಲು ಮಳೆಯಿಂದಾಗಿ ಮಾವು ಫಸಲು ಕುಸಿದಿದೆ. ವ್ಯಾಪಾರಿಗಳು ಹೊರ ರಾಜ್ಯಗಳಿಂದ ವಿವಿಧ ತಳಿಯ ಮಾವಿನ ಹಣ್ಣುಗಳನ್ನು ತಂದು ಮಾರಾಟ ಮಾಡುತ್ತಿದ್ದು, ಬೆಲೆಯ ಜತೆಗೆ ಗ್ರಾಹಕರಿಂದ ಬೇಡಿಕೆಯೂ ಹೆಚ್ಚಿದೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ರಸಪುರಿ ಮಾವು ಪ್ರತಿ ಕೆ.ಜಿಗೆ ₹140, ಮಲ್ಲಿಕಾ ₹180, ಸಕ್ಕರೆ ಮಾವು ₹240, ಆಲ್ಫಾನ್ಸೊ ₹280, ಸಿಂಧೂರ ₹100, ಬಾದಾಮಿ ₹160ರಿಂದ ₹200 ದರದಲ್ಲಿ ಮಾರಾಟವಾಗುತ್ತಿದೆ. ಜಿಲ್ಲೆಯಲ್ಲಿ ಸ್ಥಳೀಯವಾಗಿ ಮಾವಿನ ಇಳುವರಿ ಕಡಿಮೆ ಇದೆ. ಹಾಗಾಗಿ ಬೆಂಗಳೂರು, ಮಹಾರಾಷ್ಟ್ರ, ಆಂಧ್ರ ಪ್ರದೇಶದಿಂದ ಹಣ್ಣುಗಳನ್ನು ತರಿಸಲಾಗುತ್ತದೆ ಎಂದು ನಗರದ ಎಂ.ಜಿ ರಸ್ತೆಯ ಎ.ಎಸ್‌.ಫ್ರೂಟ್‌ ಮಳಿಗೆಯ ಮೋಹನ್‌ಕುಮಾರ್ ಹೇಳಿದರು.

ಸೇಬು ಕೆ.ಜಿಗೆ ₹220ರಿಂದ ₹260, ದಾಳಿಂಬೆ ₹220, ದ್ರಾಕ್ಷಿ ₹120, ಬಾಳೆಹಣ್ಣು ₹70 ದರ ಇದೆ. ಕರ್ಬೂಜ ₹60, ಅನಾನಸ್ ₹80, ಕಲ್ಲಂಗಡಿ ಕೆ.ಜಿಗೆ ₹30 ಇದ್ದು, ಡ್ರ್ಯಾಗನ್‌ ಮತ್ತು ಕಿವಿ ಹಣ್ಣು ದರ ದುಬಾರಿಯಾಗಿದೆ. ಹಣ್ಣುಗಳ ದರ ಹೆಚ್ಚಾದರೂ ಗ್ರಾಹಕರಿಂದ ಉತ್ತಮ ಸ್ಪಂದನೆ ಇದೆ, ವ್ಯಾಪಾರವೂ ಚೆನ್ನಾಗಿದೆ ಎಂದು ಅವರು ಹೇಳುತ್ತಾರೆ. ಚಿಕ್ಕಮಗಳೂರಿನ ಲಕ್ಯಾ, ತರೀಕೆರೆ, ಅಜ್ಜಂಪುರ, ಕಡೂರು ಭಾಗದಲ್ಲಿ ಗಣನೀಯ ಪ್ರಮಾಣದಲ್ಲಿ ಮಾವು ಬೆಳೆಯುತ್ತಾರೆ. ಆದರೆ, ವಿವಿಧ ಕಾರಣದಿಂದ ಮಾವು ಬೆಳೆಯ ವಿಸ್ತೀರ್ಣ ಕಡಿಮೆಯಾಗಿದೆ. ರೈತರು ಮಾವು ಬದಲಾಗಿ ಅಡಿಕೆ ಬೆಳೆಗೆ ಒತ್ತು ನೀಡುತ್ತಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ತಿಳಿಸಿದರು.

ಜಿಲ್ಲೆಯಲ್ಲಿ ಮಾವು, ಸಪೋಟ ಹಾಗೂ ನೀರಾವರಿ ಆಶ್ರಿತ ಕಲ್ಲಂಗಡಿ ಹಣ್ಣು ಬೆಳೆಯುತ್ತಾರೆ. ಆಯಾ ಋತುವಿನಲ್ಲಿ ಸಕಾಲಕ್ಕೆ ಮಳೆಯಾಗದಿದ್ದಾಗ ಫಸಲು ಕುಸಿತವಾಗಿ ರೈತರು ನಷ್ಟ ಅನುಭವಿಸಬೇಕಾದ ಸನ್ನಿವೇಶ ಎದುರಾಗಬಹುದು. ಹಾಗಾಗಿ ಬಹು ವಾರ್ಷಿಕ ಬೆಳೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ ಎಂದರು.

‘ಸಾವಯವ ಮಾರುಕಟ್ಟೆ ಬೇಕು’

3 ರಿಂದ 4 ಎಕರೆ ಜಾಗದಲ್ಲಿ ಸಾವಯವ ಕೃಷಿಯಲ್ಲಿ ಮಾವು ಬೆಳೆ ಬೆಳೆದಿದ್ದೇನೆ. ಆದರೆ ಮಾರಾಟಕ್ಕೆ ಮಾರುಕಟ್ಟೆ ಕೊರತೆ ಇದೆ. ಮಧ್ಯವರ್ತಿಗಳು ಕಡಿಮೆ ಬೆಲೆಗೆ ಕೇಳುತ್ತಾರೆ. ಮಾವು ಬೆಳೆಗಾರರು, ಸಾವಯವ ಕೃಷಿಕರಿಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಸಾವಯವ ಮಾರುಕಟ್ಟೆ ಕೇಂದ್ರ ತೆರೆಯಬೇಕು ಎಂದು ಮಾವು ಬೆಳೆಗಾರ ಕೆ.ಸುಂದರಗೌಡ ಒತ್ತಾಯಿಸಿದರು.

‘ರಾಸಾಯನಿಕ ಬಳಸಿ ಮಾವುಗಳನ್ನು ಬೇಗ ಹಣ್ಣಾಗಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದು ಆರೋಗ್ಯಕ್ಕೆ ಹಾನಿಕಾರಕ. ಗ್ರಾಹಕರು ರಾಸಾಯನಿಕ ಬದಲು ಸಾವಯವ ಹಣ್ಣು, ತರಕಾರಿ ಬಳಸಬೇಕು. ಈ ನಿಟ್ಟಿನಲ್ಲಿ ತಮ್ಮ ತಂಡದೊಂದಿಗೆ ಸಾವಯವ ವಸ್ತುಗಳ ಮಾರಾಟ ಕೇಂದ್ರ ತೆರೆಯುವ ಚಿಂತನೆ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT