ಕಡೂರು: ಕೇವಲ ಎರಡೂವರೆ ವರ್ಷದ, ಹಾಲುಗಲ್ಲದ ಮಗು ನಿಕೇತನ್ ತನ್ನ ಆಗಾಧ ಸ್ಮರಣ ಶಕ್ತಿಯಿಂದ ಎಲ್ಲರನ್ನೂ ವಿಸ್ಮಯಗೊಳಿಸಿದ್ದಾನೆ. ಈ ಪುಟ್ಟ ವಯಸ್ಸಿಗೇ ಮೂರು ಪ್ರತಿಷ್ಟಿತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾನೆ.
ತಾಲ್ಲೂಕಿನ ಶ್ರೀರಾಂಪುರದ ಮಧುಶ್ರೀ- ಬಸವರಾಜು ದಂಪತಿಗಳ ಎರಡೂವರೆ ವರ್ಷದ ಮಗು ನಿಕೇತನ್.
ಈ ವಯಸ್ಸಿಗೇ 68 ಪ್ರಾಣಿಗಳು, 20 ಪಕ್ಷಿಗಳು, 30 ತರಕಾರಿಗಳು, 23 ಹಣ್ಣುಗಳು, 28 ವಾಹನಗಳು, 10 ಹೂವುಗಳು, 5 ಆಕೃತಿಗಳು, 5 ಬಣ್ಣಗಳು, 8 ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರು, 6 ಗಣಿತದ ಚಿಹ್ನೆಗಳು, 18 ವೃತ್ತಿಪರರ ಹೆಸರು, 18 ಕ್ರಿಯಾಪದಗಳು, ಇಂಗ್ಲಿಷ್ ಅಕ್ಷರಗಳ ಪದಗಳು, ಕನ್ನಡದ ಅ ಯಿಂದ ಅಃ ವರೆಗಿನ ಪದಗಳು, 10 ಪ್ರಸಿದ್ಧ ವ್ಯಕ್ತಿಗಳ ಹೆಸರು, 12 ಕೀಟಗಳ ಹೆಸರು, 11 ವಿದ್ಯುತ್ ಉಪಕರಣಗಳ ಹೆಸರು, 20 ಮಾನವನ ದೇಹದ ಭಾಗಗಳು, 15 ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಉತ್ತರ, 8 ಮರಗಳು, 50 ಸುತ್ತಮುತ್ತಲಿನ ವಸ್ತುಗಳು, 5 ಸಾಮಾಜಿಕ ಜಾಲತಾಣಗಳ ಹೆಸರು, 5 ಕ್ರೀಡೆಗಳು, 6 ಸಂಗೀತ ವಾದ್ಯಗಳು, 7 ಆಭರಣಗಳು, 7 ದೇವರುಗಳ ಹೆಸರು, 30 ಆಹಾರಗಳ ಹೆಸರು, 10 ಪ್ರಾಣಿ ಪಕ್ಷಿಗಳ ಧ್ವನಿ ಅನುಕರಣೆ ಜೊತೆಗೆ ಪದ್ಯಗಳು, ಸಂಖ್ಯೆಗಳು, ವಾರಗಳು, ವರ್ಷಗಳು ಗುರುತಿಸುವುದು ಇವೆಲ್ಲವನ್ನೂ ಬಿಡುವು ಕೊಡದಂತೆ ಹೇಳುತ್ತಾನೆ!.
ಇಂತಹ ಅದ್ಭುತ ನೆನಪಿನ ಶಕ್ತಿಯಿರುವ ನಿಕೇತನ್‌ಗೆ ಇರುವ ಪ್ರತಿಭೆಯನ್ನು ಪ್ರೋತ್ಸಾಹಿಸಿ ಬೆಳೆಸಿದ ತಂದೆ ಬಸವರಾಜು ಎಂಎ ಪದವೀಧರ. ಪ್ರಸ್ತುತ ಕೃಷಿ ಕಾಯಕ. ತಾಯಿ ಮಧುಶ್ರೀ ಎಂಎಸ್ಸಿ, ಬಿಎಡ್ ಪಧವೀಧರೆ. ಮಗುವಿಗೆ ಹೇಳಿಕೊಡುವಾಗ ಅದಕ್ಕೆ ಹಿಂಸೆಯಾಗದಂತೆ ಎಚ್ಚರ ವಹಿಸಿ ಅತೀವ ತಾಳ್ಮೆಯಿಂದ ಆಟವಾಡಿಸುತ್ತಲೇ ಪಾಠವನ್ನೂ ಹೇಳಿಕೊಡುತ್ತಾರೆ. ಮನೆಯೇ ಮೊದಲ ಪಾಠಶಾಲೆ- ಜನನಿ ತಾನೆ ಮೊದಲ ಗುರುವು ಎಂಬ ಮಾತು ಇಲ್ಲಿ ಸಾಕಾರಗೊಂಡಿದೆ. ಮಗುವಿಗೆ ಸಂಸ್ಕಾರ ಕಲಿಸುವಲ್ಲಿ ಅತ್ತೆ ಗಂಗಮ್ಮ ಮತ್ತು ಮಾವ ಮಲ್ಲೇಶಪ್ಪ ಅವರ ಸಹಕಾರವನ್ನು ಸ್ಮರಿಸುತ್ತಾರೆ ಮಧುಶ್ರೀ.
ನಿಕೇತನ್ ಪ್ರತಿಭೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. ಚೆನೈ ಮೂಲದ ಕಲಾಂ ವರ್ಡ್ ರೆಕಾರ್ಡ್‌ನವರು ಅತ್ಯುತ್ತಮ ಗ್ರಹಿಕಾ ಶಕ್ತಿಯ ಮಗು ಎಂದು ಗುರುತಿಸಿ ಪ್ರಶಸ್ತಿ ನೀಡಿದೆ. ದೆಹಲಿ ಮೂಲದ ಮ್ಯಾಜಿಕ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯ ಕ್ಯಾಸೆಲ್ ಆಫ್ ಆರ್ಟ್ ಥಿಯೇಟರ್ ಸಂಸ್ಥಾಪಕ, ವಿಶ್ವ ಖ್ಯಾತ ಜಾದೂಗಾರ ಡಾ. ಸಿ.ಪಿ.ಯಾದವ್ ಬ್ರಿಲಿಯಂಟ್ ಕಿಡ್-2023 ಪ್ರಶಸ್ತಿ ನೀಡಿ ಪ್ರಶಂಸಿಸಿದ್ದಾರೆ. ಪುಟ್ಟ ವಯಸ್ಸಿನ ಮಗುವಿನ ಸಾಧನೆ ಎಲ್ಲರನ್ನೂ ವಿಸ್ಮಿತಗೊಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.