ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶವಸಂಸ್ಕಾರದ ಸಹಾಯಧನ ಹೆಚ್ಚಳ

ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಧಾರ
Last Updated 2 ಜುಲೈ 2022, 4:35 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಪಟ್ಟಣದ ವ್ಯಾಪ್ತಿಯಲ್ಲಿ ಬಡ ಕುಟುಂಬಗಳಿಗೆ ಶವಸಂಸ್ಕಾರಕ್ಕಾಗಿ ನೀಡಲಾಗುತ್ತಿದ್ದ ಸಹಾಯಧನವನ್ನು ₹3 ಸಾವಿರಕ್ಕೆ ಹೆಚ್ಚಿಸಲು ಪಟ್ಟಣ ಪಂಚಾಯಿತಿಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಇದುವರೆಗೆ ಶವಸಂಸ್ಕಾರಕ್ಕೆ ₹ 2 ಸಾವಿರ ಸಹಾಯಧನ ನೀಡಲಾಗುತ್ತಿದ್ದು, ಅದನ್ನು ಹೆಚ್ಚಿಸಬೇಕೆಂದು ಸಲಹೆ ನೀಡಿದರು. ಇದಕ್ಕೆ ಸಭೆ ಅನುಮೋದನೆ ನೀಡಿತು.

ನಿರ್ಮಲ ಗಂಗಾ ಯೋಜನೆಯಡಿ ನಲ್ಲಿ ಸಂಪರ್ಕ ಪಡೆದು, ನೀರಿನ ಶುಲ್ಕ ಪಾವತಿಸದಿರುವ ಫಲಾನುಭವಿಗಳ ಪಟ್ಟಿ ತಯಾರಿಸಿ ವಸೂಲಿ ಮಾಡಬೇಕು. ಅನಧಿಕೃತವಾಗಿ ನಲ್ಲಿ ಸಂಪರ್ಕ ಪಡೆ ದವರನ್ನು ಗುರುತಿಸಿ ತೆರಿಗೆ ವಸೂಲಿ ಮಾಡಬೇಕು, ಇಲ್ಲವೇ ಸಂಪರ್ಕ ಕಡಿತ ಮಾಡುವಂತೆ ಸಭೆ ಸೂಚಿಸಿತು. ನೀರಿನ ಕಂದಾಯ ಬಾಕಿ ಇರುವ ಇಲಾಖೆಗಳಿಂದ ವಸೂಲಾತಿ ಮಾಡಲು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.

ಜ್ವಾಲಾಮಾಲಿನಿ ವೃತ್ತದಲ್ಲಿ ಈ ಹಿಂದೆ ಅನಧಿಕೃತವಾಗಿ ಸ್ಥಾಪಿಸಿದ್ದ ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆಯನ್ನು ತೆರವುಗೊಳಿಸಿ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಇರಿಸಿದ್ದು, ಈ ಪ್ರತಿಮೆಯನ್ನು ಪಟ್ಟಣ ಪಂಚಾಯಿತಿ ಉದ್ಯಾನದಲ್ಲಿಯೇ ಪ್ರತಿಷ್ಠಾಪಿಸಲು ಹಾಗೂ ಪುನೀತ್ ರಾಜ್‌ಕುಮಾರ್ ಅವರ ಪ್ರತಿಮೆಯನ್ನೂ ಪ್ರತಿಷ್ಠಾಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಶೌಚಾಲಯ ಇರುವವರಿಗೆ ಶೌಚಾಲಯಕ್ಕೆ ಸಹಾಯಧನ, ಮನೆ ಇಲ್ಲದವರಿಗೆ ಮನೆ ದುರಸ್ತಿಗೆ ಸಹಾಯಧನ ನೀಡಲಾಗಿದೆ ಎಂದು ನಾಮನಿರ್ದೇಶಿತ ಸದಸ್ಯ ಚಂದ್ರಪ್ಪ ಮತ್ತು ಅರುಣ್ ಕುಮಾರ್ ಆರೋಪಿಸಿದರು. ಈ ವಿಚಾರದ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷದವರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಮಧ್ಯ ಪ್ರವೇಶಿಸಿದ ಪ್ರಶಾಂತ್ ಶೆಟ್ಟಿ, 2008ರಿಂದಲೂ ತನಿಖೆ ನಡೆಸುವಂತೆ ಆಗ್ರಹಿಸಿದರು.

ಪಟ್ಟಣ ವ್ಯಾಪ್ತಿಯಲ್ಲಿ ಹಳೆಯ ವಿದ್ಯುತ್ ಪರಿವರ್ತಕಗಳನ್ನು ಬದಲಾಯಿ ಸಲು ಹಾಗೂ ರಸ್ತೆ ಬದಿಯ ಮರಗಳ ಕೊಂಬೆಗಳನ್ನು ತೆರವುಗೊಳಿಸಲು ಮೆಸ್ಕಾಂ ಎಂಜಿನಿಯರ್‌ಗೆ ಸಭೆ ಸೂಚಿಸಿದರು.

ಪಟ್ಟಣ ಪಂಚಾಯಿತಿ ವಾಣಿಜ್ಯ ಮಳಿಗೆಗಳ ಬಾಡಿಗೆ ಬಾಕಿ ಇರಿಸಿಕೊಂಡ ವರಿಗೆ ಕಾನೂನು ರೀತಿ ಬಾಡಿಗೆ ವಸೂಲಿಗೆ ಕ್ರಮ ಕೈಗೊಳ್ಳಬೇಕು ಎಂದು ಸಭೆ ತೀರ್ಮಾನಿಸಿತು.

ಪಟ್ಟಣದ ವಾರ್ಡ್ ನಂ. 1ರ ವ್ಯಾಪ್ತಿಯ ಕೆರೆಯ ದಂಡೆಯಲ್ಲಿ ವ್ಯಕ್ತಿಯೊಬ್ಬರು ಶೌಚಾಲಯ ಗುಂಡಿ ಮಾಡಿರುವುದು ಕಂಡು ಬಂದಿರುವ ಬಗ್ಗೆ ಅಧ್ಯಕ್ಷೆ ಜುಬೇದಾ ಸಭೆಯ ಗಮನಕ್ಕೆ ತಂದರು. ಸಂಬಂಧಪಟ್ಟ ವ್ಯಕ್ತಿ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.

ಪಂಚಾಯಿತಿ ಅಧ್ಯಕ್ಷೆ ಜುಬೇದಾ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಉಪಾಧ್ಯಕ್ಷ ಉಮಾ ಕೇಶವ, ಮುಖ್ಯಾಧಿಕಾರಿ ಚಂದ್ರಕಾಂತ್, ಲಕ್ಷ್ಮಣ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT