ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರು | ಬರಪರಿಹಾರ ಅರ್ಹರಿಗೆ ತಲಪಬೇಕು: ಶಾಸಕ ತಮ್ಮಯ್ಯ

Published 26 ಡಿಸೆಂಬರ್ 2023, 14:34 IST
Last Updated 26 ಡಿಸೆಂಬರ್ 2023, 14:34 IST
ಅಕ್ಷರ ಗಾತ್ರ

ಕಡೂರು: ಬರ ಪರಿಹಾರ ಅರ್ಹ ರೈತರಿಗೆ ತಲುಪಬೇಕು. ಆದ್ದರಿಂದ ಬರ ಪರಿಹಾರ ವಿತರಣೆಯಲ್ಲಿ ಯಾವುದೇ ಲೋಪಗಳು ಆಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ಕಡೂರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಖರಾಯಪಟ್ಟಣ ಹೋಬಳಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕುಡಿಯುವ ನೀರು, ಮೇವಿನ ಕೊರತೆಯಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು. ಜಾನುವಾರುಗಳಿಗೆ ನೀರು ಒದಗಿಸಲು ತೊಟ್ಟಿ ಅಥವಾ ಗೋಕಟ್ಟೆಗಳನ್ನು ನಿರ್ಮಾಣ ಮಾಡಿ, ರೈತರಿಗೆ ಬರ ಪರಿಹಾರ ಪಡೆಯಲು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಕಡ್ಡಾಯವಾಗಿರುತ್ತದೆ. ಹಾಗಾಗಿ ಅಧಿಕಾರಿಗಳು ರೈತರ ಮನೆ ಬಾಗಿಲಿಗೆ ತೆರಳಿ ನೋಂದಣಿ ಮಾಡಿಸಬೇಕು. ಎನ್.ಆರ್.ಇ.ಜಿ. ಶೇ 5ಕ್ಕಿಂತ ಕಡಿಮೆ ಸಾಧನೆ ಮಾಡಿರುವ ನಿಡಘಟ್ಟ, ಚಿಕ್ಕದೇವನೂರು, ಹುಲಿಕೆರೆ, ನಾಗೇನಹಳ್ಳಿ ಮತ್ತು ಜೋಡಿ ಹೋಚಿಹಳ್ಳಿ ಗ್ರಾಮ ಪಂಚಾಯಿತಿಗಳು ಜನವರಿ ಅಂತ್ಯದೊಳಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶೇ 80ರಷ್ಟು ಸಾಧನೆ ಮಾಡಬೇಕು ಎಂದು ಸೂಚಿಸಿದರು.

ಕುಡಿಯುವ ನೀರಿನ ಸಮಸ್ಯೆಯಿರುವ ಕಡೆ ಕೊಳವೆ ಬಾವಿಗಳ ರಿಡ್ರಿಲ್‌ಗೆ ಮೊದಲ ಆದ್ಯತೆ ನೀಡಬೇಕು. ಇದರಿಂದ ಸಮಸ್ಯೆ ಪರಿಹಾರ ಸಾಧ್ಯವಾಗದಿದ್ದರೆ ಖಾಸಗಿಯವರ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ಕುಡಿಯುವ ನೀರು ಒದಗಿಸಲು ಪ್ರಯತ್ನಿಸಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಇಸ್ವತ್ತು ನೀಡಲು ಸತಾಯಿಸುತ್ತಿದ್ದಾರೆ ಎಂಬ ದೂರು ಕೇಳಿ ಬಂದಿದ್ದು, ಮುಂದಿನ ದಿನಗಳಲ್ಲಿ ಈ ರೀತಿ ದೂರು ಬರದಂತೆ ಎಚ್ಚರವಹಿಸಬೇಕು. ಬಡವರಿಗೆ ಸರ್ಕಾರದ ಸವಲತ್ತುಗಳನ್ನು ದೊರಕಿಸಿಕೊಡುವ ಸಂದರ್ಭದಲ್ಲಿ ಕೇವಲ ನಿಯಮಗಳಿಗೆ ಅಧಿಕಾರಿಗಳು ಅಂಟಿಕೊಳ್ಳದೇ ಮಾನವೀಯ ದೃಷ್ಟಿಯಿಂದ ಕೂಡ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ತಹಶೀಲ್ದಾರ್ ಎಂ.ಪಿ.ಕವಿರಾಜ್ ಮಾತನಾಡಿ, ‘ತಾಲ್ಲೂಕನ್ನು ತೀವ್ರ ಬರ ಪಟ್ಟಿಗೆ ಸೇರಿಸಲಾಗಿದೆ. ಬರವನ್ನು ಎದುರಿಸಲು ಸರ್ಕಾರದ ನಿರ್ದೇಶನದಂತೆ ತಾಲ್ಲೂಕು ಮಟ್ಟದ ಟಾಸ್ಕ್ ಪೋರ್ಸ ಕಮಿಟಿಯ ಜತೆಗೆ ಹೋಬಳಿವಾರು ಟಾಸ್ಕ್ ಪೋರ್ಸ ಸಮಿತಿಗಳನ್ನು ರಚಿಸಲಾಗಿದೆ. ಹೋಬಳಿ ಟಾಸ್ಕ್ ಪೋರ್ಸ ಸಮಿತಿಯವರು ಪ್ರತಿ ಹಳ್ಳಿಯ ಮೇಲೆ ನಿಗಾ ವಹಿಸುತ್ತಾರೆ ಮತ್ತು ಸಮಸ್ಯೆಗಳು ಎದುರಾದರೆ ಕೂಡಲೆ ಗಮನಕ್ಕೆ ತರುವಂತಹ ವ್ಯವಸ್ಥೆ ಮಾಡಲಾಗಿದೆ’ ಎಂದರು.

ದೊಡ್ಡ ಹಿಡುವಳಿದಾರರು, ಪೌತಿ ಖಾತೆ ಮಾಡಿಸಿಕೊಳ್ಳದವರು ಮತ್ತು ತಾಲ್ಲೂಕಿನಲ್ಲಿ ಜಮೀನು ಹೊಂದಿ ಬೇರೆ ಕಡೆ ವಾಸವಾಗಿರುವವರು ಫೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳಲು ಮುಂದೆ ಬರುತ್ತಿಲ್ಲ. ಹಾಗಾಗಿ ಶೇ 100ರಷ್ಟು ಫ್ರೂಟ್ಸ್ ನೋಂದಣಿ ಮಾಡುವುದು ಸಾಧ್ಯವಾಗುತ್ತಿಲ್ಲ. ಆದರೂ ಶೇ 100ರಷ್ಟು ನೋಂದಣಿ ಮಾಡಿಸಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.

ಸಖರಾಯಪಟ್ಟಣ ಹೋಬಳಿಯ 15 ಗ್ರಾಮಗಳಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್ ಸಭೆಗೆ ಮಾಹಿತಿ ನೀಡಿದರು.

ಪಶು ಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಎಸ್.ಬಿ.ಉಮೇಶ್ ಮಾತನಾಡಿ, ‘ತಾಲ್ಲೂಕಿನಲ್ಲಿ 18 ವಾರಕ್ಕಾಗುವಷ್ಟು ಮೇವಿನ ಇದೆ. ಸಖರಾಯಪಟ್ಟಣ ಹೋಬಳಿಯಲ್ಲಿ 28 ವಾರಗಳಿಗೆ ಸಾಕಾಗುವಷ್ಟು ಮೇವಿನ ದಾಸ್ತಾನಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಬ್ಬರೂ ರೈತರನ್ನು ಗುರುತಿಸಿದ್ದು ಅವರಿಗೆ ಮೇವು ಬೆಳೆಯಲು ಪ್ರೋತ್ಸಾಹಿಸಲಾಗುತ್ತಿದೆ. ಈ ರೈತರೂ ಬೆಳೆದ ಮೇವನ್ನು ಇಲಾಖೆ ಖರೀದಿಸಲಿದೆ’ ಎಂದು ಹೇಳಿದರು.

ತಾಲ್ಲೂಕು ಟಾಸ್ಕ್ ಫೋರ್ಸ್ ನೋಡಲ್ ಅಧಿಕಾರಿ, ಎಎಚ್.ಎಲ್.ಸುಜಾತಾ, ತಾಲ್ಲೂಕು ಪಂಚಾಯಿತಿ ಇಒ ಸಿ.ಆರ್.ಪ್ರವೀಣ್ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT