ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯ ಪ್ರಾಣೇಶ್‌ಗೆ ಪ್ರಯಾಸದ ಗೆಲುವು

ಕಾಂಗ್ರೆಸ್‌ಗೆ ಅಭ್ಯರ್ಥಿ ಗಾಯತ್ರಿಗೆ ವಿರೋಚಿತ ಸೋಲು
Last Updated 15 ಡಿಸೆಂಬರ್ 2021, 3:02 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕಾಫಿನಾಡಿನ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಎಂ.ಕೆ.ಪ್ರಾಣೇಶ್‌ ಅವರು ಆರು ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಅತ್ಯಂತ ಪ್ರಯಾಸದ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್‌ನ ಅಭ್ಯರ್ಥಿ ಎ।.ವಿ. ಗಾಯತ್ರಿ ಶಾಂತೇಗೌಡ ಅವರು ಕೂದಲೆಳೆ ಅಂತರದಲ್ಲಿ ಪರಾಜಿತರಾಗಿದ್ದಾರೆ. 400 ಹೆಚ್ಚು ಮತಗಳ ಅಂತರದಲ್ಲಿ ಗೆಲುವು ದಾಖಲಿಸುತ್ತೇವೆ ಎಂಬ ಬಿಜೆಪಿ ನಾಯಕರ ‘ಅತಿ ವಿಶ್ವಾಸ’ದ ಲೆಕ್ಕಾಚಾರ ಹುಸಿಯಾಗಿದೆ.

ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಪ್ರಾಣೇಶ್‌ ಮತ್ತು ಗಾಯತ್ರಿ ಇಬ್ಬರೂ ರಾಜಕಾರಣದಲ್ಲಿ ಪಳಗಿದವರೇ. ಎದುರಾಳಿಯ ತಂತ್ರಕ್ಕೆ ಪ್ರತಿತಂತ್ರ ರೂಪಿಸುವುದರಲ್ಲಿ ಇಬ್ಬರೂ ನಿಸ್ಸೀಮರು.

ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು1400ಕ್ಕೂ ಹೆಚ್ಚು ಮಂದಿ ಇದ್ದಾರೆ ಎಂಬುದು ಆ ಪಕ್ಷದ ಲೆಕ್ಕಾಚಾರವಾಗಿತ್ತು. ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಸಂಸದರು ಬಿಜೆಪಿಯವರೇ. ಈ ಚುನಾವಣೆಯಲ್ಲಿ ಅನಾಯಾಸವಾಗಿ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ ಎಂಬ ಲೆಕ್ಕ ಬಿಜೆಪಿಯದಾಗಿತ್ತು.

ಕಾಂಗ್ರೆಸ್‌ ಅಭ್ಯರ್ಥಿ ಗಾಯತ್ರಿ ಅವರಿಗೆ ವಿಧಾನ ಪರಿಷತ್‌ ಚುನಾವಣೆಯಲ್ಲಿ ಒಮ್ಮೆ ಗೆದ್ದ ಮತ್ತು ಒಮ್ಮೆ ಸೋತ ಅನುಭವ ಇತ್ತು. ಕಾಂಗ್ರೆಸ್‌ ಪಕ್ಷದ ಮುಖಂಡರು ಎಲ್ಲರೂ ಒಗ್ಗೂಡಿ ಅವರ ಬೆನ್ನಿಗೆ ನಿಂತಿದ್ದರು.

ಜೆಡಿಎಸ್‌ ಕಣದಿಂದ ದೂರ ಉಳಿದಿತ್ತು. ಪಕ್ಷದ ಬೆಂಬಲ ಇಂಥವರಿಗೆ ಎಂದು ಪ್ರಕಟಿಸಲೇ ಇಲ್ಲ. ಜೆಡಿಎಸ್‌ ತಟಸ್ಥ ನಿಲುವಿನ ಪ್ರಯೋಜನವನ್ನು ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳು ಪಡೆದವು.

ಕಾಂಗ್ರೆಸ್ ಮತ್ತು ಬಿಜೆಪಿ ಎರಡಕ್ಕೂ ಈ ಕ್ಷೇತ್ರವು ಪ್ರತಿಷ್ಠೆಯ ಕಣವಾಗಿತ್ತು. ಮತದಾರರ ನಾಡಿಮಿಡಿತ ಹಿಡಿಯುವ ನಿಟ್ಟಿನಲ್ಲಿ ಎರಡೂ ಪಕ್ಷಗಳವರು ‘ಸೇರು –ಸವ್ವಾ ಸೇರು’ ಅಸ್ತ್ರ ಪ್ರಯೋಗಿಸಿದರು.

‘ಒಳ ಏಟು’ ಬೀಳಲ್ಲ, ಪಕ್ಷದಲ್ಲಿ ‘ಅಸಮಾಧಾನ’, ‘ಅತೃಪ್ತಿ’ ಇಲ್ಲ ಎಂಬುದು ಬಿಜೆಪಿಯ ಬಲವಾದ ನಂಬಿಕೆಯಾಗಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪಡೆದ ಮತಗಳು ಮತ್ತು ನೀಡಿದ ಬಹುತೇಕ ಸಮಬಲದ ಪೈಪೋಟಿಯು ಬಿಜೆಪಿಗೆ ಎದುರಾಳಿ ಪಕ್ಷದ (ಕಾಂಗ್ರೆಸ್‌) ಸಾಮರ್ಥ್ಯದ ಅರಿವು ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT