ಭಾನುವಾರ, ಅಕ್ಟೋಬರ್ 17, 2021
23 °C

ಮಲೆನಾಡಿನ ಆರಾಧ್ಯ ದೈವ ಕಣಿವೆ ಬಸವೇಶ್ವರ

ವಿಶೇಷ ವರದಿ Updated:

ಅಕ್ಷರ ಗಾತ್ರ : | |

Prajavani

ಮೂಡಿಗೆರೆ: ದೇವಾಲಯಗಳಲ್ಲಿ ಕಲ್ಲಿನ ಬಸವನನ್ನು ಕಾಣುವುದು ಸಾಮಾನ್ಯ. ಆದರೆ, ಬಸವ ಕಲ್ಲಾಗಿದೆ ಎಂಬ ನಂಬಿಕೆಯಲ್ಲಿ ಧಾರ್ಮಿಕ ಕೇಂದ್ರವೊಂದು ಸಾವಿರಾರು ಭಕ್basaತರನ್ನು ತನ್ನತ್ತ ಸೆಳೆಯುತ್ತಿದೆ.ಮಲೆನಾಡಿನ ಆರಾಧನಾ ಕೇಂದ್ರವಾಗಿ ಬದಲಾಗಿದೆ.

ತಾಲ್ಲೂಕು ಕೇಂದ್ರದಿಂದ ಕೇವಲ ಆರು ಕಿ.ಮೀ. ದೂರದಲ್ಲಿರುವ ಕೊಲ್ಲಿಬೈಲ್ ಗ್ರಾಮದ ಕಡೆ ಮಾಡ್ಕಲ್ ಸಮೀಪದ ಕಣಿವೆ ಬಸವೇಶ್ವರ ದೇವಾಲಯವು ದಟ್ಟ ಕಾನನದ ನಡುವೆ ಬಟಾಬಯಲಿನಲ್ಲಿ ನಿರ್ಮಾವಾಗಿದ್ದು, ಭಕ್ತರ ನಂಬಿಕೆಯ ಕ್ಷೇತ್ರವಾಗಿದೆ.

ಸಾವಿರಾರು ವರ್ಷಗಳ ಇತಿಹಾಸವಿರುವ ಕಣಿವೆ ಬಸವೇಶ್ವರ ಸ್ವಾಮಿಯನ್ನು ಮಳೆ ದೇವರೆಂದೇ ಕರೆಯಲಾಗುತ್ತದೆ. ಮಳೆಯಿಲ್ಲದೆ ಬರಗಾಲ ಉಂಟಾದರೆ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿದರೆ ಮಳೆಯಾಗುತ್ತದೆ ಎಂಬ ನಂಬಿಕೆಯಿದ್ದು, ಅದು ಪ್ರತಿ ವರ್ಷದ ಉತ್ಸವದಲ್ಲಿಯೂ ಸಾಬೀತಾಗುತ್ತದೆ ಎಂಬುದು ಭಕ್ತರ ನಂಬಿಕೆ. ಅತಿವೃಷ್ಟಿ ಸಂಕಷ್ಟದಲ್ಲಿ ಭಕ್ತಿಯಿಂದ ಕಣಿವೆ ಬಸವೇಶ್ವರನನ್ನು ಪೂಜಿಸಿದರೆ ಮಳೆ ನಿಲ್ಲುತ್ತದೆ ಎಂಬ ನಂಬಿಕೆಯೂ ಸ್ಥಳೀಯರಲ್ಲಿ ಮನೆ ಮಾಡಿದೆ.

ಬೃಹತ್ ಗಾತ್ರದ ಮಾವಿನ ಮರದಡಿಯಲ್ಲಿ ಬಸವನ ರುಂಡ, ಮುಂಡ, ದೇಹದ ಅಂಗಾಂಗಗಳು ಬೇರ್ಪಟ್ಟ ರೀತಿಯಲ್ಲಿರುವ ಬಸವನನ್ನೇ ‘ಕಣಿವೆ ಬಸವೇಶ್ವರ’ ಎಂದು ಆರಾಧಿಸಲಾಗುತ್ತಿದ್ದು, ಈ ದೇವಾಲಯದ ಐತಿಹ್ಯವೇ ಸ್ವಾರಸ್ಯವಾಗಿದೆ.

‘ಪುರಾತನ ಕಾಲದಲ್ಲಿ ಯಲಗುಡಿಗೆ ಗ್ರಾಮದಲ್ಲಿದ್ದ ಬಸವ ಸುತ್ತಮುತ್ತಲ ಗ್ರಾಮಕ್ಕೆ ಬಂದು ರೈತರ ಜಮೀನುಗಳಲ್ಲಿ ಮೇಯುತ್ತಿತ್ತು. ಬಸವ ಮೇಯ್ದ ಜಮೀನುಗಳಲ್ಲಿ ಮುಂದಿನ ವರ್ಷದ ಫಸಲು ಹುಲುಸಾಗಿ ಬೆಳೆಯುತ್ತಿತ್ತು. ಆದರೆ, ದುರಾಸೆಯ ವ್ಯಕ್ತಿಯೊಬ್ಬ ತಾನು ಬೆಳೆದ ಫಸಲನ್ನು ತಿಂದಿದ್ದಕ್ಕಾಗಿ ಬಸವವನ್ನು ಕೊಂದಿದ್ದು, ಅದನ್ನು ಮಾಂಸಕ್ಕಾಗಿ ಉಪಯೋಗಿಸುವ ಸಲುವಾಗಿ ಗ್ರಾಮದ ಕೆಲವು ಸಮುದಾದಯ ಜನರನ್ನು ಕರೆತಂದು ಬಸವನ ದೇಹವನ್ನು ಕತ್ತರಿಸಿದಾಗ, ಗ್ರಾಮಕ್ಕೆ ಬೆಂಕಿ ತಗುಲಿದೆ ಎಂಬ ಸುದ್ದಿ ಬಂದಿತ್ತು. ಬೆಂಕಿ ನಂದಿಸುವ ಸಲುವಾಗಿ ಕಟುಕರು ರಕ್ತದ ಮಡುವಿನಲ್ಲಿದ್ದ ಬಸವನ ಮಾಂಸವನ್ನು ಅಲ್ಲಿಯೇ ಬಿಟ್ಟು ತೆರಳಿ, ಬೆಂಕಿ ನಂದಿಸಿ ಬಂದು ನೋಡುವಷ್ಟರಲ್ಲಿ ಮಾಂಸಕ್ಕಾಗಿ ತುಂಡರಿಸಿದ್ದ ಬಸವನ ದೇಹವು ಮಲ್ಲಿಗೆಯ ರಾಶಿಯಾಗಿತ್ತು. ಇದನ್ನು ಇಡೀ ಊರಿಗೆ ತಿಳಿಸಿ ಗ್ರಾಮಸ್ಥರನ್ನು ಕರೆತರುವಷ್ಟರಲ್ಲಿ ಮಲ್ಲಿಗೆಯ ರಾಶಿಯಾಗಿದ್ದ ದೇಹವು ಕಲ್ಲಾಗಿದ್ದು ಅಂದಿನಿಂದಲೂ ಕಣಿವೆ ಬಸವೇಶ್ವರನೆಂದು ಪೂಜಿಸಲಾಗುತ್ತಿದೆ. ಕಷ್ಟದಲ್ಲಿ ಬಸವನ ಮೊರೆ ಹೋದರೆ ಭಕ್ತರ ಕಷ್ಟವನ್ನು ನೀಗಿಸುವುದು, ಭಕ್ತರ ಹರಕೆ ಪೂರೈಸಿದ ನಿದರ್ಶನಗಳಿವೆ’ ಎನ್ನುತ್ತಾರೆ ಕಣಿವೆ ಬಸವೇಶ್ವರ ಸ್ವಾಮಿ ದೇವಾಲಯದ ಕಾರ್ಯದರ್ಶಿ ಕೆ.ಎಚ್.ವೆಂಕಟೇಶ್.

ಪ್ರತಿ ವರ್ಷ ಕಣಿವೆ ಬಸವೇಶ್ವರ ಸ್ವಾಮಿಯ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯುತ್ತದೆ. ಹರಕೆ ಈಡೇರಿದ ಭಕ್ತರು ಉತ್ಸವದಲ್ಲಿ ಸೇವೆ ಮಾಡಿ ಪುನೀತರಾಗುತ್ತಾರೆ. ದೇವಾಯದ ಬಳಿ ಮೂಲ ಸೌಲಭ್ಯಗಳ ಕೊರತೆಯಿದ್ದು, ಜನಪ್ರತಿನಿಧಿಗಳು, ದಾನಿಗಳು ಸೌಲಭ್ಯಗಳನ್ನು ಕಲ್ಪಿಸಿದರೆ ವಿಶೇಷ ಪ್ರವಾಸಿ ತಾಣವನ್ನಾಗಿ ಬದಲಾಯಿಸಹುದು ಎಂಬುದು ಸ್ಥಳೀಯರ ಮನವಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು