ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿನಿ ಅಸಹಜ ಸಾವು– ಭಗ್ನಪ್ರೇಮಿ ಬಂಧನ

ವಿದ್ಯಾರ್ಥಿಗಳ ಮೌನ ಪ್ರತಿಭಟನೆ: ಸಮಗ್ರ ತನಿಖೆಗೆ ಒತ್ತಾಯ
Last Updated 5 ಫೆಬ್ರುವರಿ 2020, 15:54 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನ ಬಾನಳ್ಳಿ ಗ್ರಾಮದ ವಿದ್ಯಾರ್ಥಿನಿ ರಶ್ಮಿ (19) ಅಸಹಜ ರೀತಿಯಲ್ಲಿ ಮಂಗಳವಾರ ಮೃತಪಟ್ಟಿದ್ದು, ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿರುವ ಮೂಡಿಗೆರೆ ಪೊಲೀಸರು, ಆಟೊ ಚಾಲಕ ಚೇತನ್ ಎಂಬಾತನನ್ನು ಬುಧವಾರ ಬಂಧಿಸಿದ್ದಾರೆ.

ಘಟನೆಯ ವಿವರ: ಬಾನಳ್ಳಿ ಗ್ರಾಮದ ಶೈಲಾ ಹಾಗೂ ರಮೇಶ್ ದಂಪತಿಯ ಪುತ್ರಿಯಾದ ರಶ್ಮಿ ಪಟ್ಟಣದ ಡಿ.ಎಸ್. ಬಿಳೀಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದರು. ಇದೇ ಗ್ರಾಮದ ಆಟೊ ಚಾಲಕ ಚೇತನ್ ತನ್ನನ್ನು ಪ್ರೀತಿಸುವಂತೆ ರಶ್ಮಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

‘ಮಂಗಳವಾರ ಮಧ್ಯಾಹ್ನ ಕಾಲೇಜು ಮುಗಿಸಿ ಬಂದ ರಶ್ಮಿಯು ಬಸ್ಸಿನಲ್ಲಿ ಬಾನಳ್ಳಿಗೆ ತೆರಳಲು ಹೋಗುವಾಗ ಚೇತನ್ ತನ್ನ ಆಟೊದಲ್ಲಿ ಆಕೆಯನ್ನು ಕುಳ್ಳಿರಿಸಿಕೊಂಡು ಬಾನಳ್ಳಿಯತ್ತ ಸಾಗಿದ್ದಾನೆ. ಸಂಜೆ ವೇಳೆಗೆ ರಶ್ಮಿ ಅವರ ತಾಯಿ ಶೈಲಾಗೆ ಕರೆ ಮಾಡಿದ ಚೇತನ್, ‘ನಿಮ್ಮ ಮಗಳು ಆಟೊದಿಂದ ಬಿದ್ದು, ಗಾಯಗೊಂಡಿದ್ದು ಹಾಸನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇನೆ’ ಎಂದು ಮಾಹಿತಿ ನೀಡಿದ್ದಾನೆ. ಮಾರ್ಗಮಧ್ಯೆ ಬೇಲೂರಿನಲ್ಲಿ ಚೇತನ್ ತನ್ನ ಸಂಬಂಧಿ ತೀರ್ಥಕುಮಾರ್ ಎಂಬುವವರಿಗೆ ಮಾಹಿತಿ ನೀಡಿ, ಅವರ ಸಹಾಯದಿಂದ ಬೇಲೂರಿನ ಸರ್ಕಾರಿ ಆಸ್ಪತ್ರೆಗೆ ರಶ್ಮಿಯನ್ನು ಕರೆದೊಯ್ದಿದ್ದು, ಆ ವೇಳೆಗಾಗಲೇ ರಶ್ಮಿ ಸಾವನ್ನಪ್ಪಿದ್ದಾರೆ.

‘ತನ್ನನ್ನು ಪ್ರೀತಿಸುವಂತೆ ರಶ್ಮಿಯನ್ನು ಪೀಡಿಸುತ್ತಿದ್ದ ಚೇತನ್‌ ಆರು ತಿಂಗಳ ಹಿಂದಷ್ಟೇ ಬಣಕಲ್ ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದುಕೊಟ್ಟಿದ್ದ. ರಶ್ಮಿಯನ್ನು ಆಟೊದಲ್ಲಿ ಕುಳ್ಳಿರಿಸಿಕೊಂಡಿದ್ದ ಚೇತನ್, ಬಸವನಹಳ್ಳಿ ಗ್ರಾಮದ ಬಳಿ ತಳ್ಳಿ ಕೊಲೆ ಮಾಡಿದ್ದಾನೆ’ ಎಂದು ರಶ್ಮಿ ತಾಯಿ ಶೈಲಾ ಮೂಡಿಗೆರೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಆಟೊವನ್ನು ವಶಕ್ಕೆ ಪಡೆದು, ಚೇತನ್‌ನನ್ನು ಬಂಧಿಸಿದ್ದಾರೆ. ಮಂಗಳವಾರ ರಾತ್ರಿಯಿಂದ ಮರಣೋತ್ತರ ಪರೀಕ್ಷೆಗೆ ಒಪ್ಪದ ರಶ್ಮಿ ಪೋಷಕರು, ಆರೋಪಿಯನ್ನು ಬಂಧಿಸಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು.

ರಶ್ಮಿ ಸಾವನ್ನಪ್ಪಿರುವ ಸುದ್ದಿ ಬುಧವಾರ ತಿಳಿಯುತ್ತಿದ್ದಂತೆ ಕಾಲೇಜು ಬಹಿಷ್ಕರಿಸಿ ಆಸ್ಪತ್ರೆ ಆವರಣಕ್ಕೆ ಬಂದ ವಿದ್ಯಾರ್ಥಿಗಳು ಶವಗಾರದಲ್ಲಿದ್ದ ಸಹಪಾಠಿಯ ಮೃತದೇಹವನ್ನು ಕಂಡು ಕಣ್ಣೀರಿಟ್ಟರು. ಬಳಿಕ ಆಸ್ಪತ್ರೆ ಆವರಣದಿಂದ ತಾಲ್ಲೂಕು ಕಚೇರಿಯವರೆಗೂ ರಶ್ಮಿಯ ಭಾವಚಿತ್ರ ಹಿಡಿದು ಮೌನ ಮೆರವಣಿಗೆ ಹೊರಟ ವಿದ್ಯಾರ್ಥಿಗಳು, ತಾಲ್ಲೂಕು ಕಚೇರಿ ಆವರಣದಲ್ಲಿ ಬಹಿರಂಗ ಸಭೆ ನಡೆಸಿ, ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಬಿವಿಪಿ ಸಂಚಾಲಕಿ ಕೀರ್ತನಾ ಮಾತನಾಡಿ, ‘ರಶ್ಮಿ ಕಾಲೇಜಿನಲ್ಲಿ ಸಜ್ಜನ ವಿದ್ಯಾರ್ಥಿನಿಯಾಗಿದ್ದು, ಓದುವುದರಲ್ಲಿಯೂ ಚುರುಕಾಗಿದ್ದಳು. ರಶ್ಮಿ ಸಾವಿನ ಹಿಂದಿರುವ ಆರೋಪಿಗಳಿಗೆ ಶಿಕ್ಷೆಯಾಗಬೇಕು. ರಶ್ಮಿ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು’ ಎಂದು ಆಗ್ರಹಿಸಿದರು.

ವಿದ್ಯಾರ್ಥಿ ಮುಖಂಡ ಇಮ್ರಾನ್ ಮಾತನಾಡಿ, ‘ಹೆಣ್ಣುಮಕ್ಕಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಘಟನೆಯಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಆತಂಕ ಮೂಡುವುದು ಸಹಜವಾಗಿದ್ದು, ಕೃತ್ಯದ ಹಿಂದಿರುವ ಆರೋಪಿಗಳಿಗೆ ಸೂಕ್ತ ಶಿಕ್ಷೆ ನೀಡುವ ಮೂಲಕ ಇಂತಹ ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ತಕ್ಕ ಪಾಠ ಕಲಿಸಬೇಕು’ ಎಂದರು.

ಪ್ರತಿಭಟನೆಯಲ್ಲಿ ವಿಷ್ಣು, ಶಿವಕುಮಾರ್, ಅಕ್ಷಯ್, ಪವಿತ್ರ, ಸಿಂಧು, ಗಾಯನ, ಶಶಾಂಕ್, ರವಿ, ಪ್ರವೀಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT