ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಯ್ಯಬಾನು ಅಧ್ಯಕ್ಷೆ, ಮುಕುಂದ ಉಪಾಧ್ಯಕ್ಷ

ನರಸಿಂಹರಾಜಪುರ ಪಟ್ಟಣ ಪಂಚಾಯಿತಿ: ಅವಿರೋಧ ಆಯ್ಕೆ
Last Updated 8 ನವೆಂಬರ್ 2020, 5:04 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಇಲ್ಲಿನ ಪಟ್ಟಣ ಪಂಚಾಯಿತಿಯ ಅಧ್ಯಕ್ಷೆಯಾಗಿ ಕಾಂಗ್ರೆಸ್‌ನ ಸುರಯ್ಯಬಾನು ಹಾಗೂ ಉಪಾಧ್ಯಕ್ಷರಾಗಿ ಎನ್.ಎಲ್.ಮುಕುಂದ ಅವಿರೋಧವಾಗಿ ಆಯ್ಕೆಯಾದರು.

ಇಲ್ಲಿನ ಪಟ್ಟಣ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಶನಿವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಪಟ್ಟಣ ಪಂಚಾಯಿತಿಯ 11 ಸದಸ್ಯರಲ್ಲಿ ಕಾಂಗ್ರೆಸ್ 9 ಹಾಗೂ ಬಿಜೆಪಿ 2 ಸದಸ್ಯರನ್ನು ಹೊಂದಿತ್ತು.

ಅಧ್ಯಕ್ಷ ಸ್ಥಾನಕ್ಕೆ ಸುರಯ್ಯಬಾನು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎನ್.ಎಲ್.ಮುಕುಂದ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹಾಗಾಗಿ, ಇವರಿಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಎಸ್.ರೇಣುಕಾ ಘೋಷಿಸಿದರು.

ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಶಾಸಕ ಟಿ.ಡಿ.ರಾಜೇಗೌಡ, ‘ಇಲ್ಲಿನ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಜನರು ಕಾಂಗ್ರೆಸ್‌ಗೆ ನಿರೀಕ್ಷೆಗೂ ಮೀರಿ ಫಲಿತಾಂಶ ನೀಡಿದ್ದಾರೆ, ಅಧಿಕಾರ ಶಾಶ್ವತವಲ್ಲ. ಅಧಿಕಾರವಿದ್ದಾಗ ಜನರು ಶಾಶ್ವತವಾಗಿ ನೆನಪಿಟ್ಟುಕೊಳ್ಳುವ ಕೆಲಸ ಮಾಡಬೇಕು. ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ಸದಸ್ಯರು ಒಟ್ಟಾಗಿ ಅಭಿವೃದ್ಧಿಗೆ ಶ್ರಮಿಸಬೇಕು. ಹಿರಿಯರ ಮಾರ್ಗದರ್ಶನ ಪಡೆದ ಉತ್ತಮ ಆಡಳಿತ ನೀಡಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿ, ‘ಪಟ್ಟಣದ ವ್ಯಾಪ್ತಿಯ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ನೂತನ ಆಡಳಿತ ಮಂಡಳಿ ಮಾಡಬೇಕು’ ಎಂದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ‘ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸುವ ಕೆಲಸ ಮಾಡಬೇಕು. ಮಾದರಿ ಪಟ್ಟಣ ಪಂಚಾಯಿತಿ ರೂಪಿಸಲು ಪ್ರಯತ್ನಿಸಬೇಕು’ ಎಂದರು.

ಪಟ್ಟಣ ಪಂಚಾಯಿತಿ ಸದಸ್ಯ ಪ್ರಶಾಂತ್ ಎಲ್.ಶೆಟ್ಟಿ ಮಾತನಾಡಿ, ‘20 ವರ್ಷಗಳಿಂದ ಪಟ್ಟಣದ ವ್ಯಾಪ್ತಿಯ ವಸತಿ ರಹಿತರಿಗೆ ವಸತಿ ನೀಡುವ ಕೆಲಸವಾಗಿಲ್ಲ. ನೂತನ ಆಡಳಿತ ಮಂಡಳಿ ಪ್ರಥಮ ಆದ್ಯತೆಯಾಗಿ ಇದನ್ನು ಪರಿಗಣಿಸಬೇಕು’ ಎಂದರು.

ನೂತನ ಅಧ್ಯಕ್ಷೆ ಸುರಯ್ಯಬಾನು ಮಾತನಾಡಿ, ‘ತಮ್ಮ ಅಧಿಕಾರದ ಅವಧಿಯಲ್ಲಿ ಎಲ್ಲರ ಸಹಕಾರ ಪಡೆದು, ಜನರು ಒಪ್ಪುವ ಕೆಲಸ ಮಾಡಲಾಗುವುದು’ ಎಂದರು.

ನೂತನ ಉಪಾಧ್ಯಕ್ಷ ಎನ್.ಎಲ್.ಮುಕುಂದ, ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಗೇರುಬೈಲು ನಟರಾಜ್, ಸದಸ್ಯೆ ಜುಬೇದಾ ಮಾತನಾಡಿದರು.

ಪಟ್ಟಣ ಪಂಚಾಯಿತಿ ಸದಸ್ಯರು ಮತ್ತು ಮುಖ್ಯಾಧಿಕಾರಿ ಕುರಿಯಾ ಕೋಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT