ಚಿಕ್ಕಮಗಳೂರು: ತಾಲ್ಲೂಕಿನ ಅತ್ತಿಗುಂಡಿ ಗ್ರಾಮದಲ್ಲಿರುವ ಸರ್ಕಾರಿ ಆಸ್ಪತ್ರೆ ಹೆಸರಿಗಷ್ಟೇ ಇದ್ದು, ವೈದ್ಯರು ಮತ್ತು ನರ್ಸ್‌ಗಳಿಲ್ಲದೆ ಬಳಲುತ್ತಿದೆ. ನಿತ್ಯ ಬಂದು ಬಾಗಿಲು ನೋಡಿ ಹೋಗುವ ರೋಗಿಗಳು ಪರದಾಡುವಂತಾಗಿದೆ.
ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ, ಮಾಣಿಕ್ಯಧಾರ ಜಲಪಾತ ಕಡೆಗೆ ಹೋಗುವ ದಾರಿಯಲ್ಲಿ ಎದುರಾಗುವ ಅತ್ತಿಗುಂಡಿ ಗ್ರಾಮದಲ್ಲಿ 100ಕ್ಕೂ ಹೆಚ್ಚು ಮನೆಗಳಿವೆ. ಸುತ್ತಮುತ್ತಲ ಅಲ್ಲಲ್ಲೇ ಜನವಸತಿಗಳಿವೆ.
ವರ್ಷದಲ್ಲಿ ಮೂರ್ನಾಲ್ಕು ತಿಂಗಳು ಸತತವಾಗಿ ಮಳೆ ಸುರಿಯುವ ಪ್ರದೇಶ ಇದಾಗಿದೆ. ತಿಂಗಳುಗಟ್ಟಲೆ ವಿದ್ಯುತ್ ಸಂಪರ್ಕವೂ ಇಲ್ಲದೆ ನಿವಾಸಿಗಳು ಪರದಾಡುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ಅಭಿನಯದ ಬೆಟ್ಟದ ಹೂವು ಸಿನಿಮಾ ಬಹುತೇಕ ಚಿತ್ರೀಕರಣ ಆಗಿರುವುದು ಇದೇ ಅತ್ತಿಗುಂಡಿ ಗ್ರಾಮದಲ್ಲಿ.
ಅತ್ತಿಗುಂಡಿ ಸೇರಿ ಸುತ್ತಮುತ್ತಲ ಗ್ರಾಮಗಳ ಜನ ಸಣ್ಣ ಆರೋಗ್ಯ ಸಮಸ್ಯೆಗೂ ಚಿಕ್ಕಮಗಳೂರು ನಗರಕ್ಕೇ ಬರಬೇಕು. ಅವರ ಅನುಕೂಲಕ್ಕಾಗಿ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ತೆರೆಯಲಾಗಿದೆ. ಆದರೆ, ಅದು ಬಾಗಿಲು ತೆರೆದಿರುವುದಕ್ಕಿಂತ ಹೆಚ್ಚಾಗಿ ಮುಚ್ಚಿರುವುದೇ ಹೆಚ್ಚು ಎಂದು ಸ್ಥಳೀಯರು ಹೇಳುತ್ತಾರೆ.
ಸುಸಜ್ಜಿತ ಕಟ್ಟಡ, ಕೊಠಡಿಗಳು, ಪೀಠೋಪಕರಣ ಎಲ್ಲವೂ ಇವೆ. ಆದರೆ, ವೈದ್ಯರಿಲ್ಲ, ವೈದ್ಯಕೀಯ ಸಿಬ್ಬಂದಿ ಇಲ್ಲ. ಇಲ್ಲಿಗೆ ನಿಯೋಜನೆಗೊಂಡಿರುವ ವೈದ್ಯರು ಬರುವುದೇ ಅಪರೂಪ. ಬಂದರೂ ಒಂದು ಗಂಟೆ ಕುಳಿತರೆ ಹೆಚ್ಚು. ಅವರು ಹೋದ ಕೂಡಲೇ ನರ್ಸ್ ಕೂಡ ಹೊರಡುತ್ತಾರೆ. ಡಿ. ದರ್ಜೆ ನೌಕರರು ಕೆಲ ಹೊತ್ತು ಕಾಲ ಕಳೆದು ಅವರೂ ಬಾಗಿಲು ಮುಚ್ಚಿ ಹೊರಡುತ್ತಾರೆ ಎಂದು ಗ್ರಾಮಸ್ಥರು ದೂರುತ್ತಾರೆ.
ಪ್ರತಿನಿತ್ಯ ಆಸ್ಪತ್ರೆಗೆ ಬರುವ ರೋಗಿಗಳು ಬಾಗಿಲಿಗೆ ಹಾಕಿರುವ ಬೀಗ ನೋಡಿ ವಾಪಸ್ ತೆರಳುತ್ತಿದ್ದಾರೆ. ಯಾರ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಅವರು ಆರೋಪಿಸಿದರು.
ಕವಿಕಲ್ ಗಂಡಿ ಬಳಿ ರಸ್ತೆ ಕುಸಿದಿದ್ದರಿಂದ ಒಂದು ತಿಂಗಳಿಂದ ಕೆಎಸ್ಆರ್‌ಟಿಸಿ ಬಸ್ ಈ ರಸ್ತೆಯಲ್ಲಿ ಸಂಚರಿಸುತ್ತಿಲ್ಲ. ಸಣ್ಣ ಸಣ್ಣ ಖಾಸಗಿ ವಾಹನಗಳಲ್ಲಿ ಪಟ್ಟಣಕ್ಕೆ ಹೋಗಬೇಕಾದ ಸ್ಥಿತಿ ಇದೆ. ವಾಹನ ಇಲ್ಲದವರು ಅನಾರೋಗ್ಯ ಇದ್ದರೂ ಚಿಕ್ಕಮಗಳೂರು ನಗರಕ್ಕೆ ಹೋಗಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.
ಗ್ರಾಮದಲ್ಲಿರುವ ಆಸ್ಪತ್ರೆ ತೆರೆದಿದ್ದರೆ ಇಲ್ಲೇ ಚಿಕಿತ್ಸೆ ಪಡೆಯಲು ಅವಕಾಶ ಇತ್ತು. ಬರುವ ಪ್ರವಾಸಿಗರಿಗೆ ಸಣ್ಣಪುಟ್ಟ ಆರೋಗ್ಯದ ಸಮಸ್ಯೆಯಾದರೆ ಪ್ರಾಥಮಿಕ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ಇದೆ. ಆದರೆ, ಅದ್ಯಾವುದೂ ಸಾಧ್ಯವಾಗುತ್ತಿಲ್ಲ ಎಂದು ಗ್ರಾಮದ ಮುಖಂಡ ಮೋಹನ್ ದೂರಿದರು.
ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಪ್ರತಿನಿತ್ಯ ಹಾಜರಿರುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು. ಒಂದೆರಡು ಗಂಟೆ ಇದ್ದು ಬಾಗಿಲು ಮುಚ್ಚಿ ಹೊರಡುವ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಥವಾ ಬೇರೆ ವೈದ್ಯರನ್ನು ನಿಯೋಜಿಸಿ ಈ ಭಾಗದ ಜನರ ಆರೋಗ್ಯ ಕಾಪಾಡಬೇಕು ಎಂದು ಅವರು ಒತ್ತಾಯಿಸಿದರು.
ಹಾಜರಾಗದ ವೈದ್ಯರ ವಿರುದ್ಧ ಕ್ರಮ: ಡಿಎಚ್ಒ ಅತ್ತಿಗುಂಡಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಹಾಜರಾಗುತ್ತಿಲ್ಲ ಎಂಬ ದೂರಿದೆ. ಸೋಮವಾರದಿಂದ ಹಾಜರಾಗದಿದ್ದರೆ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥಬಾಬು ತಿಳಿಸಿದರು. ‘ಎಂಬಿಬಿಎಸ್ ಪೂರ್ಣಗೊಳಿಸಿದ ನಂತರ ಒಂದು ವರ್ಷ ಗ್ರಾಮೀಣ ಸೇವೆಯನ್ನು ಕಡ್ಡಾಯವಾಗಿ ಕಿರಿಯ ವೈದ್ಯರು ಮಾಡಬೇಕು. ಅಂತಹ ಒಬ್ಬ ಕಿರಿಯ ವೈದ್ಯರನ್ನು ನಿಯೋಜಿಸಲಾಗಿದೆ. ರಸ್ತೆಯಲ್ಲಿ ಮರ ಬಿದ್ದಿದ್ದರಿಂದ ನಾಲ್ಕು ದಿನ ಹೋಗಿರಲಿಲ್ಲ ಎಂದು ಕಾರಣ ನೀಡಿದ್ದಾರೆ. ಸರಿಯಾಗಿ ಹಾಜರಾಗುತ್ತಿಲ್ಲ ಎಂಬ ದೂರು ಹಲವರಿಂದ ಬಂದಿವೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಕ್ರಮ ವಹಿಸಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.