ಚಿಕ್ಕಮಗಳೂರು: ಮುಂಗಾರು ಆರಂಭದಲ್ಲಿ ಮಳೆ ಕೊರತೆಯಿಂದ ತೊಂದರೆ ಅನುಭವಿಸಿದ್ದ ಬಯಲು ಸೀಮೆಯ ರೈತರು ಕಳೆದೊಂದು ತಿಂಗಳಿಂದ ಮಳೆ ಹೆಚ್ಚಳದಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಆರಂಭದಲ್ಲಿ ಭರವಸೆ ಮೂಡಿಸಿದ್ದ ಈರುಳ್ಳಿ, ಆಲೂಗಡ್ಡೆ ಬೆಳೆಗೆ ಅತಿಯಾದ ಮಳೆ ಆತಂಕ ತಂದೊಡ್ಡಿದೆ.

ಈ ವರ್ಷ 8,635 ಹೆಕ್ಟೇರ್ನಲ್ಲಿ ಬಿತ್ತನೆಯ ಗುರಿಯನ್ನು ತೋಟಗಾರಿಕೆ ಇಲಾಖೆ ಹೊಂದಿತ್ತು. ಆದರೆ, 7,880 ಹೆಕ್ಟೇರ್ನಲ್ಲಿ ಈರುಳ್ಳಿ ಬಿತ್ತನೆಯಾಗಿದೆ. ಅಜ್ಜಂಪುರ ತಾಲ್ಲೂಕಿನಲ್ಲಿ ಹೆಚ್ಚಿನದಾಗಿ ಈರುಳ್ಳಿ ಬೆಳೆಯಲಾಗುತ್ತಿದ್ದು, ಕಡೂರು, ಚಿಕ್ಕಮಗಳೂರು ಮತ್ತು ತರೀಕೆರೆ ತಾಲ್ಲೂಕಿನಲ್ಲಿ ಅಲ್ಲಲ್ಲಿ ರೈತರು ಈರುಳ್ಳಿ ಬೆಳೆಯುತ್ತಿದ್ದಾರೆ.

ಮೊದಲ ಮಳೆಗೆ ಉತ್ಸಾಹ ತೋರಿ ಭೂಮಿ ಹಸನು ಮಾಡಿಕೊಂಡ ರೈತರು, ಬಿತ್ತನೆ ಆರಂಭಿಸಿದರು. ಎರಡರಿಂದ ಮೂರು ತಿಂಗಳಲ್ಲಿ ಬೆಳೆ ಕೈ ಸೇರುವುದರಿಂದ ರೈತರು ಹೆಚ್ಚು ಆಸಕ್ತಿ ವಹಿಸುತ್ತಾರೆ. ಮುಂಗಾರು ಆರಂಭದಲ್ಲಿ ಮಳೆ ಕೊರತೆಯಿಂದ ಈರುಳ್ಳಿ ನೆಲದಲ್ಲೇ ಉಳಿಯುವ ಆತಂಕ ಇತ್ತು.

ಬಿತ್ತನೆಯಾದ ಬಳಿಕ ನಿರಂತರವಾಗಿ ಮಳೆ ಸುರಿದಿದ್ದರಿಂದ ತೇವಾಂಶ ಹೆಚ್ಚಾಗಿ ಈರುಳ್ಳಿ ಬೆಳೆ ನೆಲದಲ್ಲೇ ಕಮರಿ ಹೋಗುತ್ತಿದೆ. ಹೊಲದಲ್ಲಿ ನಿಂತಿರುವ ನೀರಿನಲ್ಲಿರುವ ಬೆಳೆ ಬಿಳಿ ಬಣ್ಣಕ್ಕೆ ತಿರುಗುತ್ತಿದ್ದು, ರೈತರಲ್ಲಿ ಆತಂಕ ತರಿಸಿದೆ.

‘ದುಬಾರಿ ಬಿತ್ತನೆ ಬೀಜ, ಬಿತ್ತನೆ ಖರ್ಚು, ಕಳೆ ತಗೆಸುವುದು, ಔಷಧಿ ಸಿಂಪಡಣೆ ಮಾಡುವುದು ಸೇರಿ ಎಕರೆಗೆ ಕನಿಷ್ಠ ₹25-30 ಸಾವಿರ ಖರ್ಚು ಮಾಡಿದ್ದೇವೆ. ಬಿತ್ತಿದ ಈರುಳ್ಳಿ ಬೆಳೆಯೊಳಗೆ ನೀರು ನಿಂತು ಕೊಳೆ ರೋಗದ ಆತಂಕ ಕಾಡುತ್ತಿದೆ. ಮಳೆ ಇದೇ ರೀತಿ ಮುಂದುವರಿದರೆ ಬೆಳೆ ಬಿಳಿ ಬಣ್ಣಕ್ಕೆ ತಿರುಗಿ ಮಜ್ಜಿಗೆ ರೋಗ, ನುಲಿಗೆ ರೋಗ ಕಾಣಿಸಿಕೊಳ್ಳಲಿದೆ’ ಎಂದು ಶಿವನಿ ಗ್ರಾಮದ ರೈತ ಪ್ರಕಾಶ್ ಅಳಲು ತೋಡಿಕೊಂಡರು.

ರಾಗಿ ಬಿತ್ತನೆಗೆ ಬಿಡುವು ನೀಡದ ಮಳೆ:

ರಾಗಿ ಬಿತ್ತನೆಗೆ ಹೊಲ ಹಸನು ಮಾಡಿಕೊಂಡಿದ್ದ ರೈತರು ಒಂದು ತಿಂಗಳಿಂದ ಕಾದು ಕುಳಿತಿದ್ದಾರೆ. ‘ಬಿತ್ತನೆ ಬೀಜ ಗೊಬ್ಬರ ತಂದು ಮನೆಯಲ್ಲಿ ಇಟ್ಟಿದ್ದೇವೆ. ಪ್ರತಿ ದಿನವೂ ಮಳೆ ಸುರಿಯುತ್ತಿರುವುದರಿಂದ ಉಳುಮೆ ಮಾಡಿ ಬಿಟ್ಟಿದ್ದ ಹೊಲ ಸತತ ಮಳೆಯಿಂದ ಹಸಿರು ಬೆಳೆದು ನಿಂತಿದೆ’ ಎಂದು ಅಜ್ಜಂಪುರ ತಾಲ್ಲೂಕಿನ ಚೀರನಹಳ್ಳಿ ಗ್ರಾಮದ ರೈತ ಮಧು ಹೇಳಿದರು. ‘ಮಳೆ ಬಿಡುವು ನೀಡಿ ಬಿಸಿಲು ಬಂದರೆ ಶೀತಾಂಶ ಕಡಿಮೆಯಾಗಲು ಕನಿಷ್ಠ ಒಂದು ವಾರ ಬೇಕಾಗಲಿದೆ. ಬಿತ್ತನೆಗೆ ಮುನ್ನ ಮತ್ತೊಮ್ಮೆ ಉಳುಮೆ ಮಾಡಿ ಹೊಲ ಹಸನು ಮಾಡಬೇಕಾಗುತ್ತದೆ. ವಾತಾವರಣ ನೋಡಿದರೆ ಮಳೆ ಬಿಡುವು ನೀಡುವ ಲಕ್ಷಣ ಇಲ್ಲ. ಈ ಬಾರಿ ರಾಗಿ ಬಿತ್ತನೆ ಸಾಧ್ಯವಾಗುವುದೋ ಇಲ್ಲವೋ ಎಂಬ ಚಿಂತೆ ಕಾಡುತ್ತಿದೆ’ ಎಂದರು. ‘ಒಂದು ತಿಂಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಶೀತಾಂಶ ಜಾಸ್ತಿಯಾಗಿ ಹೊಲದಲ್ಲಿರುವ ಆಲೂಗಡ್ಡೆ ಬೆಳೆ ಕೂಡ ಹಾಳಾಗುವ ಆತಂಕ ಇದೆ. ಆಲೂಗಡ್ಡೆ ಹೂವು ಅರಳಿದ್ದು ಇದೇ ರೀತಿ ಮಳೆ ಸುರಿದರೆ ನೆಲದಲ್ಲೇ ಆಲೂಗಡ್ಡೆ ಕೊಳೆಯಲಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.