ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಎಕರೆಯಲ್ಲಿ ಭತ್ತದ ಎಂಟು ತಳಿ: ಕಾರಂಗಿಯ ಕೃಷಿಕ ವಿಭಿನ್ನ ಪ್ರಯೋಗ

ಕಾರಂಗಿಯ ಕೃಷಿಕ ಕೆ.ಎ. ಕೇಶವ ಬಾಯರಿ ವಿಭಿನ್ನ ಪ್ರಯೋಗ
Last Updated 10 ನವೆಂಬರ್ 2021, 4:13 IST
ಅಕ್ಷರ ಗಾತ್ರ

ಕೊಪ್ಪ: ತಾಲ್ಲೂಕಿನ ಭಂಡಿಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಕಾರಂಗಿಯ ಕೃಷಿಕ ಕೆ.ಎ.ಕೇಶವ ಬಾಯರಿ ಅವರು 3 ಎಕರೆ ಪ್ರದೇಶದಲ್ಲಿ ಭತ್ತದ 8 ವಿಭಿನ್ನ ತಳಿಗಳನ್ನು ಕೃಷಿ ಮಾಡಿದ್ದಾರೆ.

ಇವರು 2011 ರಿಂದ ವಿವಿಧ ಭತ್ತದ ತಳಿಗಳನ್ನು ಕೃಷಿಯಲ್ಲಿ ಅಳವಡಿಸಿಕೊಂಡಿದ್ದಾರೆ. ಕಳೆದ ಬಾರಿ 24 ವಿವಿಧ ತಳಿಗಳ ಭತ್ತ ಕೃಷಿ ಮಾಡಿದ್ದರು. ತಮ್ಮ ಜಮೀನಿನಲ್ಲಿ ಪ್ರಾಯೋಗಿಕವಾಗಿ ಬೆಳೆದು, ಮಲೆನಾಡು ಪ್ರದೇಶಕ್ಕೆ ಒಗ್ಗುವ ತಳಿಗಳನ್ನು ಕೃಷಿಯಲ್ಲಿ ಅಳವಡಿಸಿಕೊಂಡಿದ್ದಾರೆ.

ಈ ಬಾರಿ ಕಪ್ಪು ಜೀರಿಗೆಸಾಲೆ (ಬೋರಾ), ಬಾಸುಮತಿ, ಮಣಿರೈಸ್, ರಾಜಮುಡಿ ಭತ್ತ ತಳಿಗಳನ್ನು ಬೆಳೆದಿದ್ದಾರೆ. ಕೇಶವ ಅವರು ತಮ್ಮ ಕೃಷಿ ಚಟುವಟಿಕೆ, ಭತ್ತದ ಗುಣ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಕಪ್ಪು ಜೀರಿಗೆಸಾಲೆ ಭತ್ತ: 110 ದಿನಕ್ಕೆ ಇಳುವರಿ ಬರುತ್ತದೆ. ಇದು ಸುವಾಸನೆಯುಕ್ತ, ಔಷಧ ಗುಣ ಹೊಂದಿರುವ ಭತ್ತ. ಸಿಹಿ ಪದಾರ್ಥ ಮಾಡಲು ಯೋಗ್ಯ ಅಕ್ಕಿಯಾಗಿದೆ. ಭತ್ತದ ಸಸಿ 4 ರಿಂದ 5 ಅಡಿ ಎತ್ತರ ಬೆಳೆಯುತ್ತದೆ. ಎಕರೆಯೊಂದಕ್ಕೆ 8ರಿಂದ 10 ಕ್ವಿಂಟಲ್ ಭತ್ತ ಸಿಗುತ್ತದೆ. ಈ ಅಕ್ಕಿಗೆ ಪಾಶ್ಚಾತ್ಯ ದೇಶಗಳಲ್ಲಿ ಕೆ.ಜಿ.ಯೊಂದಕ್ಕೆ ₹ 400 ಬೆಲೆ ಇದೆ.

ಬಾಸುಮತಿ ಭತ್ತ: 120 ದಿನಕ್ಕೆ ಇಳುವರಿ ಸಿಗುತ್ತದೆ. ಮಲೆನಾಡಿನ ಭಾಗದಲ್ಲಿ ಮುಂಗಾರು ಬೆಳೆಯಾಗಿ ಉತ್ತಮ ಫಸಲು ಸಿಗುತ್ತದೆ. 2 ರಿಂದ 3 ಅಡಿ ಎತ್ತರ ಬೆಳೆಯುವ ಸಸಿಯಿಂದ ಎಕರೆಗೆ 12ರಿಂದ 15 ಕ್ವಿಂಟಲ್ ಇಳುವರಿ ಬರುತ್ತದೆ. ಛತ್ತೀಸಘಡ ಭಾಗದಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಇದಕ್ಕೆ ಕೆ.ಜಿಯೊಂದಕ್ಕೆ ₹ 100 ರಿಂದ 120 ದರ ಇದೆ.

ಮಣಿರೈಸ್: 120 ದಿನಕ್ಕೆ ಇಳುವರಿ ಬರುತ್ತದೆ. ಈ ಭತ್ತದ ತಳಿಯ ಅಕ್ಕಿಯು ಉರುಟು ಆಕಾರವಾಗಿರುತ್ತದೆ. ಎಕರೆಗೆ 8 ರಿಂದ 10 ಕ್ವಿಂಟಲ್ ಇಳುವರಿ ಸಿಗುತ್ತದೆ. ಸಸಿಯು 4 ರಿಂದ 5 ಅಡಿ ಎತ್ತರ ಬೆಳೆಯುತ್ತದೆ. ಕುಚಲಕ್ಕಿಯಂತೆ ಗಂಜಿ ಮಾಡಲು ಉತ್ತಮ ತಳಿಯಾಗಿದೆ.

ರಾಜಮುಡಿ: ಇಳುವರಿ ಬರಲು 150 ದಿನಗಳು ಹಿಡಿಯುತ್ತವೆ. ಅಕ್ಕಿ ಕೆಂಪು ಬಣ್ಣದಿಂದ ಕೂಡಿದೆ. ಎಕರೆಗೆ 16 ರಿಂದ 18 ಕ್ವಿಂಟಲ್ ಇಳುವರಿ ಸಿಗುತ್ತದೆ. 5 ರಿಂದ 6 ಅಡಿ ಎತ್ತರ ಸಸಿ ಬೆಳೆಯುವುದರಿಂದ ಹಸುಗಳಿಗೆ ಮೇವು ಹೆಚ್ಚಾಗಿ ಸಿಗುತ್ತದೆ. ಮೇವಿನ ಸಮಸ್ಯೆ ನಿವಾರಿಸಲು ಸಾಧ್ಯವಿದೆ. ಈ ಅಕ್ಕಿಯ ಅನ್ನ ಊಟ ಮಾಡುವುದರಿಂದ ಆ್ಯಸಿಡಿಟಿಯನ್ನು ತಡೆಯಬಹುದು.

ಕೇಶವ ಮಾತನಾಡಿ, ‘ಕಳೆದ ಬಾರಿ ‘ಅಂಬೆಮೊಹರಿ’ ಎಂಬ ಭತ್ತದ ತಳಿ ಬೆಳೆದಿದ್ದೆ. ಎಕರೆಗೆ 14 ರಿಂದ 15 ಕ್ವಿಂಟಲ್ ಇಳುವರಿ ಬಂದಿತ್ತು. 5 ರಿಂದ 6 ಅಡಿ ಎತ್ತರ ಸಸಿ ಬೆಳೆಯುತ್ತದೆ. ಇಳುವರಿ ಪಡೆಯಲು 130 ರಿಂದ 140 ದಿನಗಳು ಬೇಕಾಗುತ್ತದೆ. ಮಹಾರಾಷ್ಟ್ರ ಭಾಗದಲ್ಲಿ ಈತಳಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ’ ಎಂದರು.

‘ಈ ಬಾರಿಯೂ ಪ್ರಯೋಗಿಕವಾಗಿ ಬ್ಲಾಕ್ ರೈಸ್(1), ಬ್ಲಾಕ್ ರೈಸ್(2), ಸೋಮಸಾಲೆ ಎಂಬ ತಳಿಯ ಭತ್ತವನ್ನು ಬೆಳೆಯಲಾಗಿದೆ. ಬ್ಲಾಕ್ ರೈಸ್(1) ತಳಿ ಇಳುವರಿಗೆ 90 ರಿಂದ 100 ದಿನಗಳು ಬೇಕು. ಇದು ಸುವಾಸನೆಯುಕ್ತ ಸಣ್ಣ ಅಕ್ಕಿಯಾಗಿದೆ. ಬ್ಲಾಕ್ ರೈಸ್(2) ಇದು ಔಷಧ ಗುಣವಿರುವ ಅಕ್ಕಿ. ಸಸಿ 5 ಅಡಿ ಎತ್ತರ ಬೆಳೆಯುತ್ತದೆ. ನೇರಳೆ ಬಣ್ಣ, ದಪ್ಪ ಅಕ್ಕಿಯಾಗಿದೆ. ಸೋಮಸಾಲೆ ಭತ್ತ ಇಳುವರಿ ಪಡೆಯಲು 160 ದಿನ ಹಿಡಿಯುತ್ತದೆ. ದಪ್ಪ ಭತ್ತ, ಸಸಿ 5 ಅಡಿ ಎತ್ತರ ಬೆಳೆಯುತ್ತದೆ. ಕೆಂಪು ಅಕ್ಕಿಯಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT