ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋಷ ಸರಿಪಡಿಸಿ, ಇರುವ ಪಠ್ಯ ಉಳಿಸಿಕೊಳ್ಳುವುದು ಅಪಾಯಕಾರಿ: ಶಿವಾಚಾರ್ಯ ಸ್ವಾಮೀಜಿ

Last Updated 8 ಜುಲೈ 2022, 9:40 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಪರಿಷ್ಕರಣೆ ಪಠ್ಯದಲ್ಲಿನ ದೋಷಗಳನ್ನು ಸರಿಪಡಿಸಿ, ಇರುವ ಪಠ್ಯ ಉಳಿಸಿಕೊಳ್ಳುತ್ತೇವೆ ಎಂದು ಸರ್ಕಾರ ಹೇಳಿದೆ. ಇರುವ ಪಠ್ಯ ಉಳಿಸಿಕೊಳ್ಳುವುದು ಅಪಾಯಕಾರಿ’ ಎಂದು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ವಿವಿಧ ಸಂಘಟನೆಗಳ ವತಿಯಿಂದ ಕಡೂರು ತಾಲ್ಲೂಕಿನ ಎಸ್‌.ಕೊಪ್ಪಲಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಸಾಮರಸ್ಯದ ನಡಿಗೆ– ಜನಸಾಮಾನ್ಯರೆಡೆಗೆ’ ಜನ ಜಾಗೃತಿ ಪಾದಯಾತ್ರೆಯಲ್ಲಿ ಮಾತನಾಡಿದರು. ‘ಇರುವ ಪಠ್ಯದಲ್ಲೂ ಅನೇಕ ಅವಾಂತರಗಳು ಇವೆ. ಈಗ ಹೊಸ ಪಠ್ಯ ರಚಿಸುವುದು ಕಷ್ಟ. ಮಕ್ಕಳಿಗೆ ಸರಿಯಾದ ಇತಿಹಾಸ, ಚಾರಿತ್ರ್ಯ ತಿಳಿಸುವ ನಿಟ್ಟಿನಲ್ಲಿ ಶಿಕ್ಷಣ ತಜ್ಞರು, ರಾಜಕೀಯ ನೇತಾರರು ಗಂಭೀರವಾಗಿ ಯೋಚನೆ ಮಾಡಬೇಕು. ದೂರದೃಷ್ಟಿ ಇಟ್ಟುಕೊಂಡು ಸಮಾಜಮುಖಿ ವಸ್ತುವಿಷಯ ನೀಡುವ ಪ್ರಯತ್ನ ಮಾಡಬೇಕು’ ಎಂದು ಸಲಹೆ ನೀಡಿದರು.

‘ಶಾಲಾಕಾಲೇಜುಗಳು ಇರುವುದು ಅಕ್ಷರ ಕಲಿಸುವುದಕ್ಕೆ ಮಾತ್ರವಲ್ಲ. ಸಾಮಾಜಿಕ ಹೊಣೆಗಾರಿಕೆ, ಜಾಗೃತಿ, ದೇಶದ ಚಿಂತನೆ ಮೂಡಿಸುವುದು ಅವುಗಳ ಕೆಲಸ.ಪಠ್ಯದಲ್ಲಿ ಈ ವಿಷಯಗಳು ಇಲ್ಲದಿದ್ದರೆ ಮುಂದೆ ಏನಾದಿತು ಎಂದು ಯೋಚನೆ ಮಾಡಬೇಕು’ ಎಂದು ಹೇಳಿದರು.

‘ಪಠ್ಯಪುಸ್ತಕದಲ್ಲಿನ ಗೊಂದಲಗಳ ಬಗ್ಗೆ ಅನೇಕ ಪ್ರಜ್ಞಾವಂತರು ಧ್ವನಿ ಎತ್ತಿದ್ದಾರೆ. ಆರಂಭದಲ್ಲಿ ಸರ್ಕಾರವು ಪಠ್ಯಪುಸ್ತಕ ಪರಿಷ್ಕರಣೆ ಸರಿ ಇದೆ ಎಂದು ವಾದ ಮಾಡಿತು, ಬಸವಣ್ಣ, ಕನಕದಾಸ, ಅಂಬೇಡ್ಕರ್‌, ಕುವೆಂಪು ಸಹಿತ ಅನೇಕ ಗಣ್ಯರ ಪಠ್ಯದಲ್ಲಿ ಆಗಿರುವ ದೋಷಗಳನ್ನು ಸರಿಪಡಿಸಬೇಕು ಎಂದು ಸರ್ಕಾರದ ಗಮನಕ್ಕೆ ತರಲಾಗಿದೆ. ದೋಷಗಳನ್ನು ಸರಿಪಡಿಸುತ್ತೇವೆ ಎಂದು ಸರ್ಕಾರ ಆದೇಶ ಹೊರಡಿಸಿದೆ’ ಎಂದರು.

‘ಅನ್ಯಾಯ ಕಂಡಾಗ ಹೋರಾಡುವ ಮನಸ್ಥಿತಿ ಮೈಗೂಡಿಸಿಕೊಳ್ಳಬೇಕು. ಹೋರಾಟಗಾರರನ್ನು ಅನುಮಾನದಿಂದ ನೋಡುವ, ಸಂದರ್ಭ ಬಂದಾಗ ಅವಮಾನ ಮಾಡುವ ಸ್ಥಿತಿ ಇದೆ. ಕೊನೆಗೆ ಹತ್ಯೆ ಅವರನ್ನು ಮಾಡುವುದನ್ನು ಕಾಣುತ್ತಿದ್ದೇವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ನಾಡಿನಲ್ಲಿ ಜಾತಿ, ಧರ್ಮ, ರಾಜಕೀಯ ಕಾರಣಕ್ಕೆ ಸಂಘರ್ಷಗಳು ಹೆಚ್ಚುತ್ತಿವೆ. ಎಲ್ಲ ಕ್ಷೇತ್ರಗಳಲ್ಲೂ ಕೊಳಕು ತುಂಬಿಕೊಳ್ಳುತ್ತಿದೆ. ಕೊಳಕು ಸ್ವಚ್ಛಗೊಳಿಸುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದರು.

‘ಈ ಹಿಂದೆ ಸಣ್ಣ ದುರ್ಘಟನೆಗಳು ನಡೆದಾಗ ಹೋರಾಟ ಮಾಡಿ ನ್ಯಾಯ ಒದಗಿಸಲಾಗುತ್ತಿತ್ತು. ಆದರೆ, ಇವತ್ತು ಇಂಥ ಅಪಾಯಕಾರಿ ದುರ್ಘಟನೆಗಳು ನಡೆದಾಗಲೂ ಹೋರಾಟ ಮಾಡುವ ಮನಸ್ಥಿತಿಯೇ ಇಲ್ಲವಾಗಿದೆ. ರಾಜೀ ಮನೋಭಾವ ಮೂಡಿದೆ. ರಾಜೀ ಮನೋಭಾವ ಅಪಾಯಕಾರಿ’ ಎಂದು ಆತಂಕ ವ್ಯಕ್ತಪಡಿಸಿದರು.

‘ಧಾರ್ಮಿಕ ಸಂಘರ್ಷಗಳು ಹೆಚ್ಚುತ್ತಿವೆ. ಸಂಬಂಧಗಳಿಗೆ ಕಿಚ್ಚು ಇಡುವ ವಾತಾವರಣ ಇದೆ. ಈ ವಾತಾವರಣ ಹೋಗಲಾಡಿಸಲು ಹೋರಾಟಗಳು ನಡೆಯಬೇಕು. ಈ ಹೋರಾಟ ಯಾವುದೇ ಪಕ್ಷ, ವ್ಯಕ್ತಿ, ಧರ್ಮದ ವಿರುದ್ಧ ಅಲ್ಲ. ಅನ್ಯಾಯದ ವಿರುದ್ಧದ ಪ್ರತಿಭಟನೆ. ಪ್ರಗತಿಪರರು, ಸಾಮಾಜಿಕ ಕಳಕಳಿ ಇರುವವರು, ವೈಚಾರಿಕ ಮನೋಭಾವದವರು ಮುಂದೆ ಬರದಿದ್ದರೆ ನಾಡನ್ನು ರಕ್ಷಣೆ ಮಾಡಲು ಸಾಧ್ಯ ಇಲ್ಲ’ ಎಂದು ಹೇಳಿದರು.

ಪಾದಯಾತ್ರೆ: ಎಸ್‌.ಕೊಪ್ಪಲಿನಿಂದ ಬೆಳಿಗ್ಗೆ 10 ಗಂಟೆಗೆ ಪಾದಯಾತ್ರೆ ಹೊರಟಿತು. ಪಂಡಿತರಾಧ್ಯ ಸ್ವಾಮೀಜಿ ಅವರು ಸ್ವಲ್ಪ ದೂರ ಸಾಗಿ ಅನ್ಯ ಕಾರ್ಯ ನಿಮಿತ್ತ ತೆರಳಿದರು. ಪಾದಯಾತ್ರೆಯು ದೇವನೂರು ಮಾರ್ಗವಾಗಿ ಹಾದು ನಿಡಘಟ್ಟದ ಗಾಂಧೀಜಿ ಗುಡಿ ಆವರಣ ತಲುಪಿದೆ.

ಕ್ಯಾತನಬೀಡು ಪ್ರತಿಷ್ಠಾನದ ರವೀಶ್‌ ಬಸಪ್ಪ, ಬಸವಕುಮಾರಸ್ವಾಮೀಜಿ, ತಿಪ್ಪೇರುದ್ರ ಸ್ವಾಮೀಜಿ, ಸಾಹಿತಿ ಎಸ್‌.ಜಿ.ಸಿದ್ದರಾಮಯ್ಯ, ಬಿ.ಚಂದ್ರೇಗೌಡ, ಲೇಖಕ ಶ್ರೀಪಾದಭಟ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT