ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಸ | ಹೆಜ್ಜೆಗೊಂದು ಗುಂಡಿ; ಹೆದ್ದಾರಿ ದುಸ್ಥಿತಿಗೆ ಜನರು ಹೈರಾಣು

Published 28 ಮೇ 2024, 7:10 IST
Last Updated 28 ಮೇ 2024, 7:10 IST
ಅಕ್ಷರ ಗಾತ್ರ

ಕಳಸ: ತಾಲ್ಲೂಕಿನ ಪ್ರಮುಖ ಹೆದ್ದಾರಿಯಾದ ಕಳಸ-ಕುದುರೆಮುಖ-ಎಸ್.ಕೆ.ಬಾರ್ಡರ್ ಮಾರ್ಗ ಸಂಪೂರ್ಣ ಹದಗೆಟ್ಟಿದ್ದು, ದುರಸ್ತಿ ಮರೀಚಿಕೆಯಾಗಿಯೇ ಉಳಿದಿದೆ. ಹೆದ್ದಾರಿಯಲ್ಲಿ ಹೆಜ್ಜೆಗೊಂದರಂತೆ ಗುಂಡಿ ಬಿದ್ದಿದ್ದು, ವಾಹನ ಸವಾರರು, ಪ್ರವಾಸಿಗರು ಈ ಮಾರ್ಗದ ದುಸ್ಥಿತಿ ಕಂಡು ಬೆಚ್ಚಿ ಬೀಳುತ್ತಿದ್ದಾರೆ. ಮಳೆಗಾಲದಲ್ಲಂತೂ ರಸ್ತೆ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ.

ಕಳಸದಿಂದ ಕುದುರೆಮುಖ ಮೂಲಕ ಎಸ್.ಕೆ. ಬಾರ್ಡರ್ ತಲುಪಲು 42 ಕಿ.ಮೀ ದೂರ ಇದೆ. ಇದರಲ್ಲಿ ಸುಮಾರು 20 ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಅತಿ ಹೆಚ್ಚು ಮಳೆ ಬೀಳುವ ಈ ಪ್ರದೇಶದಲ್ಲಿ ರಸ್ತೆ ಮತ್ತು ಚರಂಡಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ, ರಸ್ತೆಗೆ ಭಾರಿ ಹಾನಿ ಆಗಿದೆ ಎಂದು ರಸ್ತೆ ಬಳಕೆದಾರರು ದೂರುತ್ತಾರೆ. ಈ ರಸ್ತೆಯಲ್ಲಿ ದೊಡ್ಡ ಗುಂಡಿಗಳು ಸೃಷ್ಟಿಯಾಗಿದ್ದು, ಅದರಲ್ಲಿ ಮಳೆನೀರು ತುಂಬಿಕೊಂಡಿವೆ. ಪ್ರವಾಸಿಗರ ವಾಹನಗಳು ಗುಂಡಿಯಲ್ಲಿ ಬಿದ್ದು  ಅಪಾಯ– ಅಪಘಾತಕ್ಕೆ ಸಿಲುಕುವುದು ಸಾಮಾನ್ಯವಾಗಿದೆ.

ಹೆದ್ದಾರಿಯ 8 ಕಿ.ಮೀ ಮಾರ್ಗದ ಕಾಮಗಾರಿ ಆಮೆವೇಗದಲ್ಲಿ ನಡೆದಿದೆ. ‘ಗುತ್ತಿಗೆದಾರ ನಿಗದಿತ ಸಮಯದಲ್ಲಿ ಕೆಲಸ ಪೂರ್ಣಗೊಳಿಸದ ಕಾರಣ, ಟೆಂಡರ್ ರದ್ದುಪಡಿಸಲು ಕೋರಿ ಪತ್ರ ಬರೆದಿದ್ದೇನೆ’ ಎಂದು ಮೂಡಿಗೆರೆ ಸಹಾಯಕ ಕಾರ್ಯನಿರ್ವಹಣಾ ಎಂಜಿನಿಯರ್ ಚನ್ನಕೇಶವ ಹೇಳಿದರು.  ‘ರಾಷ್ಟ್ರೀಯ ರಸ್ತೆ ಅಭಿವೃದ್ಧಿ ನಿಧಿಯಿಂದ ರಸ್ತೆ ಅಭಿವೃದ್ಧಿಗೆ ಅನುದಾನ ಕೇಳಿದ್ದೇವೆ. ಈಗಾಗಲೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. 10 ಕಿ.ಮೀ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಆಗುವ ನಿರೀಕ್ಷೆ ಇದೆ’ ಎಂದೂ ಎಂಜಿನಿಯರ್ ಹೇಳಿದರು.

‘ಪ್ರವಾಸಿಗರು ಸೇರಿದಂತೆ  ನಿತ್ಯ ಅಪಾರ ಸಂಖ್ಯೆಯ ಜನರು ಸಂಚರಿಸುವ ಈ ಹೆದ್ದಾರಿಯ ದುರವಸ್ಥೆಗೆ ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳು ಸಮಾನ ಕಾರಣರಾಗಿದ್ದಾರೆ. ಕಳೆದ 10 ವರ್ಷದಿಂದ ಈ ಹೆದ್ದಾರಿ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಈ ದುಸ್ಥಿತಿ ಬಂದಿದೆ. ರಸ್ತೆ ದುರಸ್ತಿ ಬಗ್ಗೆ ಹಲವು ಬಾರಿ ಪ್ರತಿಭಟನೆ ನಡೆಸಿದರೂ ಪ್ರಯೋಜನ ಆಗಿಲ್ಲ’ ಎಂದು ಕುದುರೆಮುಖ ರಸ್ತೆಗಾಗಿ ಹಲವು ಹೋರಾಟಗಳನ್ನು ಸಂಘಟಿಸಿದ ರವಿ ರೈ ಬೇಸರದಿಂದ ಹೇಳಿದರು.

ಮಲೆನಾಡಿಗೆ ಕರಾವಳಿ ಜೊತೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ ಇದು. ಆದರೆ ಈ ರಸ್ತೆ ಅಭಿವೃದ್ಧಿ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯ ವಹಿಸಿರುವುದು ಆಶ್ಚರ್ಯ ಮೂಡಿಸುತ್ತದೆ
ತೇಜಸ್ ನೆಲ್ಲಿಬೀಡು
ಆಂಬುಲೆನ್ಸ್‌ ಪ್ರಯಾಣ ಸವಾಲು
ಕಳಸ ತಾಲ್ಲೂಕಿನ ನೂರಾರು ವಿದ್ಯಾರ್ಥಿಗಳು ಮೂಡುಬಿದರೆ ಕಾರ್ಕಳ ನಿಟ್ಟೆ ಮಂಗಳೂರು ಉಜಿರೆ ಉಡುಪಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಪೋಷಕರು ಕೂಡ ಈ ಊರುಗಳಿಗೆ ಆಗಾಗ್ಗೆ ಹೋಗಬೇಕಾಗುತ್ತದೆ. ಆದರೆ ಹೆದ್ದಾರಿ ದುರವಸ್ಥೆ ಅವರನ್ನು ಕಂಗೆಡಿಸಿದೆ. ಕಳಸ ತಾಲ್ಲೂಕಿನ ರೋಗಿಗಳು ಕಾರ್ಕಳ ಮಂಗಳೂರು ಆಸ್ಪತ್ರೆಗಳನ್ನೇ ನೆಚ್ಚಿಕೊಂಡಿದ್ದಾರೆ. ರೋಗಿಗಳಿಗೆ ಈ ಹೆದ್ದಾರಿಯ ಪಯಣ ಅತ್ಯಂತ ವೇದನೆ ಕೊಡುತ್ತಿದೆ. ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್‌ನಲ್ಲಿ ರೋಗಿಗಳನ್ನುಆಸ್ಪತ್ರೆಗೆ ಕರೆದೊಯ್ಯುವುದು ಸವಾಲು ಆಗಿದೆ ಎಂದು ಹಿರೇಬೈಲಿನ ನಾಗರಿಕ ಸೇವಾ ಸಮಿತಿ ಆಂಬುಲೆನ್ಸ್ ಚಾಲಕ ಶರೀಫ್ ಹೇಳುತ್ತಾರೆ.
‘ಪ್ರಯತ್ನ ನಡೆದಿದೆ’
ಈ ರಸ್ತೆಯ ಸಮಗ್ರ ಅಭಿವೃದ್ಧಿಗೆ ₹40 ಕೋಟಿಯಷ್ಟು ದೊಡ್ಡ ಮೊತ್ತ ಬೇಕಿದೆ. ಹಿಂದೆ ಇಲ್ಲಿ ಸಂಸದೆಯಾಗಿದ್ದವರು ಈ ಬಗ್ಗೆ ಗಮನ ಹರಿಸಲಿಲ್ಲ. ರಾಜ್ಯ ಸರ್ಕಾರ ಮತ್ತು ಕೇಂದ್ರದಿಂದಲೂ ಅನುದಾನ ಸಿಕ್ಕರೆ ರಸ್ತೆ ಅಭಿವೃದ್ಧಿ ಸುಲಭವಾಗಲಿದೆ. ಈ ಬಗ್ಗೆ ಪ್ರಯತ್ನ ನಡೆದಿದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT