ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು | ಪ್ಲಾಸ್ಟಿಕ್ ನಿಷೇಧ: ಕಟ್ಟುನಿಟ್ಟಿನ ಜಾರಿ

Published 9 ಜೂನ್ 2024, 6:54 IST
Last Updated 9 ಜೂನ್ 2024, 6:54 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಸೇರಿ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿಗೊಳಿಸಿದ್ದ ಜಿಲ್ಲಾಡಳಿತ, ಕೊನೆಗೂ ಕಟ್ಟುನಿಟ್ಟಾಗಿ ಜಾರಿಗೆ ಮುಂದಾಗಿದೆ. ಕೈಮರ ಚೆಕ್‌ಪೋಸ್ಟ್‌ ಬಳಿ ವಾಹನ ತಪಾಸಣೆ ಆರಂಭಿಸಿದ್ದು, ಪ್ಲಾಸ್ಟಿಕ್ ಬಾಟಲಿ ವಶಪಡಿಸಿಕೊಳ್ಳಲಾಗುತ್ತಿದೆ.

ಚಂದ್ರದ್ರೋಣ ಪರ್ವತ ಶ್ರೇಣಿಯ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಝರಿ ಫಾಲ್ಸ್, ಹೊನ್ನಮ್ಮನಹಳ್ಳ, ಮಾಣಿಕ್ಯಧಾರದಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧಕ್ಕೆ ಏಪ್ರಿಲ್ 14ರಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.

4.99 ಲೀಟರ್‌ ತನಕ ನೀರು ಸಂಗ್ರಹಿಸಬಹುದಾದ ಪ್ಲಾಸ್ಟಿಕ್ ಬಾಟಲಿ, ಗುಟ್ಕಾ, ಚಿಪ್ಸ್ ಮತ್ತು ಇತರ ತಿನಿಸುಗಳ ಪ್ಯಾಕೇಟ್‌ಗಳನ್ನು ಗಿರಿ ಪ್ರದೇಶಕ್ಕೆ ಕೊಂಡೊಯ್ಯುವುದು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಉಲ್ಲಂಘಿಸಿದವರ ವಿರುದ್ಧ ಐಪಿಸಿ 188 ಅಡಿಯಲ್ಲಿ ಕ್ರಮ ಕೈಗೊಳ್ಳಲು ಅವಕಾಶ ಇದೆ ಎಂದು ಆದೇಶದಲ್ಲಿ ತಿಳಿಸಿದ್ದರು.

ಅಲ್ಲಂಪುರ ಬಳಿ ಪ್ಲಾಸ್ಟಿಕ್ ತಪಾಸಣಾ ಚೆಕ್‌ಪೋಸ್ಟ್ ತೆರೆದು ನಿರ್ವಹಿಸಬೇಕು ಮತ್ತು ಈ ಸಂಬಂಧ ಪ್ರತಿ ತಿಂಗಳು 5ರೊಳಗೆ ವರದಿ ಸಲ್ಲಿಸಬೇಕು ಎಂದು ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದರು.

ಪ್ಲಾಸ್ಟಿಕ್ ನಿಷೇಧಿತ ಪ್ರದೇಶದ ವ್ಯಾಪ್ತಿಯಲ್ಲಿನ ಎಲ್ಲಾ ಹೋಂಸ್ಟೆ, ರೆಸಾರ್ಟ್‌ಗಳಲ್ಲಿ ಕಡ್ಡಾಯವಾಗಿ ಸೂಚನಾ ಫಲಕಗಳನ್ನು ಅಳವಡಿಸಲು ಪ್ರವಾಸೋದ್ಯಮ ಇಲಾಖೆ ಕ್ರಮ ವಹಿಸಬೇಕು. ವೈಜ್ಞಾನಿಕವಾಗಿ ಕಸ ವಿಂಗಡಿಸಿ ವಿಲೇವಾರಿ ಮಾಡುತ್ತಿರುವ ಬಗ್ಗೆ ಕಾಲಕಾಲಕ್ಕೆ ಪರಿಶೀಲಿಸಬೇಕು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ನಿರ್ದೇಶನ ನೀಡಿದ್ದರು.

ಚುನಾವಣೆ ನೀತಿ ಸಂಹಿತೆ ಪೂರ್ಣಗೊಂಡ ಬಳಿಕ ಪ್ಲಾಸ್ಟಿಕ್ ನಿಷೇಧ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ. ಕೈಮರ ಚೆಕ್‌ಪೋಸ್ಟ್‌ ಬಳಿಯೇ ವಾಹನಗಳನ್ನು ತಡೆದು ತಪಾಸಣೆ ನಡೆಸಲಾಗುತ್ತಿದೆ. ಪ್ರವಾಸಿ ಮಿತ್ರ ಸೇರಿದಂತೆ ಪೊಲೀಸರ ನೇತೃತ್ವ ದಲ್ಲಿ ಕಾರ್ಯಾಚರಣೆ ಆರಂಭಿಸಿದ್ದು, ಮೂರು ದಿನಗಳಿಂದ ಈ ಕಾರ್ಯವನ್ನು ಆರಂಭಿಸಲಾಗಿದ್ದು, ಚೆಕ್‌ಪೋಸ್ಟ್‌ ಬಳಿ ಪ್ಲಾಸ್ಟಿಕ್ ಬಾಟಲಿಯ ರಾಶಿಯೇ ಬಿದ್ದಿದೆ. 

ಗಿರಿ ಪ್ರದೇಶದಲ್ಲಿರುವ ಸ್ಥಳೀಯ ಅಂಗಡಿಗಳಲ್ಲಿ ಐದು, ಹತ್ತು, ಇಪ್ಪತ್ತು ಲೀಟರ್ ನೀರಿನ ಬಾಟಲಿಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಜತೆಗೆ ಪ್ಲಾಸ್ಟಿಕ್ ಕವರ್ ಇರುವಂತಹ ಚಿಪ್ಸ್, ಬಿಸ್ಕೆಟ್ ಸೇರಿದಂತೆ ಇನ್ನಿತರೆ ವಸ್ತುಗಳ ಮಾರಾಟ ನಿಷೇಧಿಸಲಾಗಿದೆ. 

ಮದ್ಯ, ಗುಟ್ಕಾ, ಚಿ‍‍ಪ್ಸ್‌ಗೂ ತಡೆ

ಗಿರಿಭಾಗಕ್ಕೆ ಮದ್ಯದ ಬಾಟಲಿ ಕೊಂಡೊಯ್ಯುವುದನ್ನೂ ತಡೆಯಲಾಗುತ್ತಿದೆ. ವಾಹನಗಳಲ್ಲಿ ಮದ್ಯದ ಬಾಟಲಿ ಸಿಕ್ಕಿದರೆ ಅದನ್ನು ಅಲ್ಲಿಯೇ ಇರಿಸಲು ಲಾಕರ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಲಾಕರ್‌ನಲ್ಲಿ ಇರಿಸಿ ಟೋಕನ್ ಪಡೆದು ಹೋಗುವ ಪ್ರವಾಸಿಗರು ಮತ್ತು ವಾಪಸ್ ಬರುವಾಗ ಬಾಟಲಿ ಪಡೆದುಕೊಂಡು ಹೋಗಬಹುದು ಎಂದು ಚೆಕ್‌ಪೋಸ್ಟ್ ಸಿಬ್ಬಂದಿ ಹೇಳುತ್ತಾರೆ. ‘ಚೆಕ್‌ಪೋಸ್ಟ್‌ ದಾಟಿದ ಬಳಿಕ 10 ಮೀಟರ್ ಸಾಗಿದರೆ ಮದ್ಯದ ಅಂಗಡಿ ಸಿಗುತ್ತದೆ. ಚೆಕ್‌ಪೊಸ್ಟ್ ಇದ್ದರೂ ಮದ್ಯ ಕೊಂಡೊಯ್ಯುವ ಪ್ರವಾಸಿಗರಿಗೆ ಅಡ್ಡಿಯಾಗುತ್ತಿಲ್ಲ’ ಎಂದು ಮುಳ್ಳಯ್ಯನಗಿರಿ ತಪ್ಪಲು ರಕ್ಷಣ ವೇದಿಕೆ ಸಂಚಾಲಕ ಗುರುವೇಶ್ ಹೇಳಿದರು.

ಶುದ್ಧ ಕುಡಿಯುವ ನೀರಿನ ಘಟಕ

ಗಿರಿ ಭಾಗದಲ್ಲಿ ಎರಡು ಕಡೆ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲಾಗುತ್ತಿದೆ. ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಮತ್ತು ಸೀತಾಳಯ್ಯನಗಿರಿ ಬಳಿ ಈ ಘಟಕಗಳನ್ನು ತೆರೆಯಲಾಗಿದೆ.ಪ್ಲಾಸ್ಟಿಕ್ ಬಾಟಲಿ ನಿಷೇಧ ಮಾಡಿದರೆ ಪ್ರವಾಸಿಗರಿಗೆ ಕುಡಿಯುವ ನೀರಿನ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ಹೆಚ್ಚುವರಿ ಚೆಕ್‌ಪೋಸ್ಟ್: ಸಭೆ ನಾಳೆ

ಗಿರಿಭಾಗಕ್ಕೆ ತೆರಳುವ ವಾಹನಗಳ ತಪಾಸಣೆಗೆ ಇನ್ನೂ ಮೂರು ಕಡೆ ಚೆಕ್‌ಪೋಸ್ಟ್‌ಗಳನ್ನು ತೆರೆಯಲು ಜಿಲ್ಲಾಡಳಿತ ಮುಂದಾಗಿದೆ. ಅಲ್ಲಂಪುರ, ಕೈಮರ, ಹಿರೇಕೊಳಲೆ ಕಡೆಯಿಂದ ಬರುವ ರಸ್ತೆ ಮುಳ್ಳಯ್ಯನಗಿರಿ ರಸ್ತೆಗೆ ಸಂಪರ್ಕಿಸುವ ಸ್ಥಳದಲ್ಲೂ ಚೆಕ್‌ಪೋಸ್ಟ್ ತೆರೆಯಲು ಯೋಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಪ್ಲಾಸ್ಟಿಕ್ ನಿಷೇಧ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲಿಸಲು ಸೋಮವಾರ ಅಧಿಕಾರಿಗಳ ಸಭೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT