ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್‌ ಪ್ರಕರಣ: ನಿವೃತ್ತ ನ್ಯಾಯಾಧೀಶರಿಂದ ತನಿಖೆಯಾಗಲಿ

ಹಾಸನ ಕ್ಷೇತ್ರದ ಮರುಚುನಾವಣೆ ಘೋಷಣೆಗೆ ಒತ್ತಾಯ
Published 3 ಮೇ 2024, 14:09 IST
Last Updated 3 ಮೇ 2024, 14:09 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಮಹಿಳೆಯರ ಮೇಲೆ ನಡೆಸಿದ್ದಾರೆ ಎನ್ನುವ ಲೈಂಗಿಕ ದೌರ್ಜನ್ಯ ಪ್ರಕರಣ ಸಾಮಾನ್ಯವಾದುದಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಯಾವುದೇ ವಿನಾಯಿತಿ ನೀಡದೆ ಉಗ್ರ ಶಿಕ್ಷೆ ವಿಧಿಸಬೇಕು’ ಎಂದು ಬಹುಜನ ಸಮಾಜ ಪಕ್ಷದ(ಬಿಎಸ್‌ಪಿ) ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ ಒತ್ತಾಯಿಸಿದರು.

‘ಚುನಾವಣೆ ಪೂರ್ವದಲ್ಲಿ ಲೈಂಗಿಕ ದೌರ್ಜನ್ಯದ ವಿಡಿಯೊ ಕುರಿತು ಹಾಸನದ ಬಿಜೆಪಿ ಮುಖಂಡರು ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಗಮನಕ್ಕೆ ತಂದಿದ್ದರು. ಇದನ್ನು ನಿರ್ಲಕ್ಷಿಸಿ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್‌ ರೇವಣ್ಣ ಅವರಿಗೆ ಟಿಕೆಟ್ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ‍ಪ್ರಚಾರ ನಡೆಸಿದ್ದರು. ಈಗ ಸಾವಿರಾರು ಮಹಿಳೆಯರನ್ನು ನೀಚಕೃತ್ಯಕ್ಕೆ ಬಳಸಿಕೊಂಡಿದ್ದಾರೆ ಎಂಬ ವಿಡಿಯೊಗಳು ಹರಿದಾಡುತ್ತಿವೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಒತ್ತಾಯಿಸಿದರು.

ಜಾತ್ಯಾತೀತ ಎಂಬ ನಿಲುವು ಎನ್ನುತ್ತಿದ್ದ ಜೆಡಿಎಸ್‌, ಚುನಾವಣೆಯಲ್ಲಿ ಮನುವಾದಿ ನಿಲುವು ಹೊಂದಿರುವ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಆರೋಪಿಯನ್ನು ಬಂಧಿಸಿ ಶಿಕ್ಷೆ ಕೊಡಿಸುವ ಬದಲು ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ಪರಸ್ಪರ ಟೀಕೆಯಲ್ಲಿ ತೊಡಗಿವೆ ಎಂದು ಆಪಾದಿಸಿದರು.

ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯದ ಆರೋಪಿತ ವ್ಯಕ್ತಿ ಪ್ರಜ್ವಲ್ ರೇವಣ್ಣ ತಲೆಮರೆಸಿಕೊಂಡು ವಿದೇಶಕ್ಕೆ ಪಲಾಯನ ಮಾಡಿದ್ದಾರೆ. ಚುನಾವಣಾ ಆಯೋಗವು ಹಾಸನ ಲೋಕಸಭೆಗೆ ನಡೆದ ಚುನಾವಣೆ ರದ್ದುಪಡಿಸಿ ಹೊಸದಾಗಿ ಚುನಾವಣೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಕಾರ್ಯದರ್ಶಿ ಪಿ.ಪರಮೇಶ್ ಮಾತನಾಡಿ, ‘ಪ್ರಜ್ವಲ್ ರೇವಣ್ಣ ಸಂಸದನಲ್ಲ, ಬದಲಾಗಿ ಸೈಕೊ ಇದ್ದಂತೆ. ವಿಕೃತಕಾಮಿ ಉಮೇಶ್ ರೆಡ್ಡಿಗಿಂತ ಕೆಟ್ಟ ಮನಃಸ್ಥಿತಿ ಉಳ್ಳವನು. ಮನೋವೈದ್ಯರ ಆಸ್ಪತ್ರೆಗೆ ದಾಖಲಿಸಬೇಕಾದ ಆತನನ್ನು ಜೆಡಿಎಸ್ ಮತ್ತು ಬಿಜೆಪಿ ಸಂಸತ್ತಿಗೆ ಕಳುಹಿಸಲು ಮುಂದಾಗಿವೆ’ ಎಂದು ಕಿಡಿಕಾರಿದರು.

ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಮಾತನಾಡಿ, ‘ಹಣ ಮತ್ತು ರಾಜಕೀಯ ಅಧಿಕಾರದ ಅಮಲಿನಲ್ಲಿ ದುಷ್ಕೃತ್ಯ ಎಸಗಿರುವ ಆರೋಪಿ ಪ್ರಜ್ವಲ್‌ ರೇವಣ್ಣ ಅವರನ್ನು ಬಂಧಿಸಬೇಕು. ದೇಶದಿಂದ ಗಡಿಪಾರು ಅಥವಾ ಗಲ್ಲುಶಿಕ್ಷೆ ವಿಧಿಸಿ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಕಲ್ಪಿಸಬೇಕು’ ಎಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಕುಮಾರ್, ಮುಖಂಡರಾದ ವಸಂತ್‌ಕುಮಾರ್, ಮಂಜುನಾಥ್‌, ವಿಜಯ್‌, ರತ್ನಾ, ಮಂಜುಳಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT