ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಕ್ಯಾರೆಟ್ ತುಟ್ಟಿ, ಟೊಮೆಟೊ ಅಗ್ಗ

ಸತತ ಮಳೆಗೆ ತರಕಾರಿ ಬೆಳೆ ಹಾನಿ, ಬೆಳೆಗಾರರಿಗಿಲ್ಲ ಲಾಭ
Last Updated 29 ಜುಲೈ 2022, 4:31 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕೆಲ ತರಕಾರಿಗಳ ದರ ಏರುಗತಿಯಲ್ಲಿದೆ. ಕೆ.ಜಿ.ಗೆ ಕ್ಯಾರೆಟ್‌ ₹ 80ರಿಂದ ₹ 100, ಹಿರೇಕಾಯಿ ₹ 50 ರಿಂದ ₹ 60, ಬೀನ್ಸ್‌ ₹ 60ರಿಂದ ₹ 80, ತೊಂಡೆಕಾಯಿ, ಹಾಗಲಕಾಯಿ ₹ 60ಕ್ಕೆ ತಲುಪಿವೆ.

ಮಳೆಯಿಂದಾಗಿ ಕೆಲವೆಡೆ ಬೆಳೆಗಳು ಹಾನಿಯಾಗಿವೆ. ಹೀಗಾಗಿ, ಮಾರುಕಟ್ಟೆಗೆ ಕೆಲ ತರಕಾರಿಗಳ ಆವಕ ಕಡಿಮೆಯಾಗಿದೆ. ಟೊಮೆಟೊ, ಸಾಂಬಾರು ಸೌತೆ, ಸೌತೆಕಾಯಿ ಈ ತರಕಾರಿಗಳ ದರ ಕೆ.ಜಿ ₹ 10ರಿಂದ ₹ 20 ಆಸುಪಾಸಿನಲ್ಲಿವೆ. ಸೊಪ್ಪಿನ ಬೆಲೆಯೂ ತುಸು ಜಾಸ್ತಿಯಾಗಿದೆ. ಕೊತ್ತುಂಬರಿ, ದಂಟು ಸೊಪ್ಪು ಕಟ್ಟಿಗೆ ₹ 6ರಿಂದ ₹ 10 ದರ ಇದೆ.

ನಿಂಬೆಹಣ್ಣು ಒಂದಕ್ಕೆ ₹ 5 ಇದು. ಕೆ.ಜಿ ಹಸಿ ಶುಂಠಿ – ₹ 50ಕ್ಕೆ ತಲುಪಿದೆ. ಹಸಿ ಬಟಾಣಿ ದರ ಒಂದೂವರೆ ತಿಂಗಳಿನಿಂದ ₹ 120 ಇದೆ. ದಪ್ಪ ಮೆಣಸಿನಕಾಯಿ, ನುಗ್ಗೆಕಾಯಿ, ಆಲೂಗಡ್ಡೆ ದರಗಳಲ್ಲಿ ಕೊಂಚ ಏರಿಕೆಯಾಗಿದೆ.

‘ಕ್ಯಾರೆಟ್ ದರ ತುಂಬಾ ಏರಿದೆ. ಮಾಮೂಲಿ ವಾರಕ್ಕೆ ಎರಡು ಕೆ.ಜಿ ಒಯ್ಯತ್ತಿದ್ದೆ. ಈಗ ಒಂದು ಕೆ.ಜಿ ಖರೀದಿಸಿದ್ದೇನೆ. ಬೆಲೆ ಕಡಿಮೆ ಇರುವ ಮೂಲಂಗಿ, ಟೊಮೆಟೊ ಮೊದಲಾದವನ್ನು ಜಾಸ್ತಿ ಕೊಳ್ಳುತ್ತೇವೆ’ ಎಂದು ಗ್ರಾಹಕಿ ಸೀತಾಲಕ್ಷ್ಮಿ ತಿಳಿಸಿದರು.

ಬಯಲು ಸೀಮೆ ಭಾಗದಲ್ಲಿ (ಕಡೂರು, ಸಖರಾಯಪಟ್ಟಣ, ಲಕ್ಯಾ ತರೀಕೆರೆ) ತರಕಾರಿ ಜಾಸ್ತಿ ಬೆಳೆಯುತ್ತಾರೆ. ಪಕ್ಕದ ಹಾಸನ ಜಿಲ್ಲೆಯ ಬೇಲೂರು, ಹಳೇಬೀಡು ಭಾಗದಿಂದಲೂ ಮಾರುಕಟ್ಟೆಗೆ ತರಕಾರಿ ಪೂರೈಕೆಯಾಗುತ್ತದೆ.

‘ಮಳೆಯಿಂದಾಗಿ ಹೊರ ಜಿಲ್ಲೆ, ರಾಜ್ಯಕ್ಕೆ ತರಕಾರಿ ಸಾಗಿಸುತ್ತಿಲ್ಲ. ಹೀಗಾಗಿ, ಬೆಲೆಯಲ್ಲಿ ವಾರದಿಂದ ವಾರಕ್ಕೆ ಏರುಪೇರಾಗುತ್ತಿದೆ. ಜಿಲ್ಲೆಯಿಂದ ಕರಾವಳಿ ಭಾಗಕ್ಕೆ ಜಾಸ್ತಿ ಪೂರೈಕೆಯಾಗುತ್ತದೆ. ಕರಾವಳಿ ಸಂಪರ್ಕ ಮಾರ್ಗದ ರಸ್ತೆಗಳು ತುಂಬಾ ಹದಗೆಟ್ಟಿವೆ. ಹೀಗಾಗಿ ಸಾಗಣೆಯೂ ಸಮಸ್ಯೆಯಾಗಿದೆ’ ಎಂದು ಎಪಿಎಂಸಿ ವರ್ತಕ ಬಸವರಾಜ ತಿಳಿಸಿದರು.

‘ಬೆಲೆ ಇದ್ದರೂ ಬೆಳೆ ಇಲ್ಲ’
‘ಬೀನ್ಸ್‌, ಬೀಟ್ರೂಟ್‌ ಬೆಳೆದಿದ್ದೆ. ಇಷ್ಟೊತ್ತಿಗೆ ಎರಡು ಬೀಡು ಬೀನ್ಸ್‌ ಕಟಾವು ಮಾಡಬೇಕಿತ್ತು. ಮಳೆಯ ಹೊಡೆತಕ್ಕೆ ಬೀನ್ಸ್‌ ಹಾನಿಯಾಗಿದೆ. ಕೆಲ ಅರ್ಧದಷ್ಟು ಬೆಳೆಯೂ ಕೈಗೆ ಸಿಕ್ಕಿಲ್ಲ. ಬೆಲೆ ಏರಿಕೆಯಾಗಿದೆ, ಆದರೆ ಬೆಳೆ ಇಲ್ಲ’ ಎಂದು ಬೀಳೆಕಲ್ಲಹಳ್ಳಿಯ ಬೆಳೆಗಾರ ಬಿ.ಟಿ.ಪಾಂಡುರಂಗಪ್ಪ ಸಂಕಷ್ಟ ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT