ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರಿನಲ್ಲಿ ನಿರಂತರ ಮಳೆ: ನೆಲಕಚ್ಚಿದ ಬೆಳೆ

ಜಿಲ್ಲೆಯಲ್ಲಿ ಕಾಫಿ, ಕಾಳುಮೆಣಸು, ಅಡಿಕೆ, ಭತ್ತ, ವಿವಿಧ ಬೆಳೆಗಳಿಗೆ ಹಾನಿ
Last Updated 16 ನವೆಂಬರ್ 2021, 4:16 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಸೋಮವಾರವೂ ಭಾರಿ ಮಳೆಯಾಗಿದೆ. ನಿರಂತರ ಮಳೆಯಿಂದಾಗಿ ಕಾಫಿ, ಕಾಳುಮೆಣಸು, ಅಡಿಕೆ, ಭತ್ತ ಸೇರಿದಂತೆ ವಿವಿಧ ಬೆಳೆಗಳು ಹಾನಿಗೀಡಾಗಿವೆ.

ನಗರ ಮತ್ತು ಸುತ್ತಲಿನ ಪ್ರದೇಶದಲ್ಲಿ ನಿರಂತರ ಮಳೆ ಸುರಿಯಿತು. ಹಲವೆಡೆ ರಸ್ತೆಗಳ ಗುಂಡಿಗೊಟರುಗಳಲ್ಲಿ ನೀರು ತುಂಬಿಕೊಂಡು ಕೆಸರುಮಯವಾಗಿದೆ.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂದಿನ ಆಟೊ ರಿಕ್ಷಾ ನಿಲ್ದಾಣದ ಪಕ್ಕದ ರಸ್ತೆಯ ತಗ್ಗಿನಲ್ಲಿ ನೀರು ನಿಂತಿದೆ. ಮಣ್ಣಿನ ರಸ್ತೆಗಳು ಕೆಸರಿನ ರಾಡಿಯಾಗಿವೆ.

ಗಿರಿ ಶ್ರೇಣಿ ಭಾಗದ ಝರಿಗಳು, ಹಳ್ಳಗಳಲ್ಲಿ ಹರಿವು ಹೆಚ್ಚಾಗಿದೆ. ಕೆಲವೆಡೆ ತೋಟಗಳಲ್ಲಿ ನೀರು ನಿಂತಿದೆ.
‘ನಿರಂತರ ಮಳೆಯಿಂದಾಗಿ ಕಾಫಿ ಕಾಯಿಗಳು ಉದುರಿವೆ. ಕಾಳು ಮೆಣಸು ನೆಲಕಚ್ಚಿದೆ. ಪೈರು ಕೈಗೆ ಸಿಗದಂತಾಗಿದೆ. ಮಳೆಯಿಂದಾಗಿ ವಿಪರೀತ ಬೆಳೆ ಹಾನಿಯಾಗಿದೆ’ ಎಂದು ಕೈಮರದ ರೈತ ಚಂದ್ರೇಗೌಡ ಬೇಸರ ವ್ಯಕ್ತಪಡಿಸಿದರು.

ಕೊಪ್ಪ– 7.5, ಮಳಲೂರು– 6.3, ಹರಿಹರಪುರ– 6.2, ಜಯಪುರ– 4.3, ಎನ್‌.ಆರ್‌.ಪುರ– 5.4, ಶಿವನಿ– 3.5, ಆಲ್ದೂರು– 3.3, ಅತ್ತಿಗುಂಡಿ– 3.2 ಸೆಂ.ಮೀ ಮಳೆಯಾಗಿದೆ.

ಸಾಧಾರಣ ಮಳೆ

ಕೊಪ್ಪ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಸೋಮವಾರ ಸಾಧಾರಣ ಮಳೆಯಾಗಿದೆ.

ಪಟ್ಟಣದಲ್ಲಿ ಮಧ್ಯಾಹ್ನ ಆರಂಭಗೊಂಡ ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿಯಿತು. ನಂತರ ಸಾಧಾರಣ ಮಳೆ ಸಂಜೆ ವರೆಗೆ ಮುಂದುವರಿದಿತ್ತು. ಸಂಜೆ ಬಳಿಕ ಮೋಡ ಕವಿದ ವಾತಾವರಣ ಇತ್ತು.

ಅಕಾಲಿಕ ಮಳೆಯಿಂದಾಗಿ ಅಡಿಕೆ ಕೊಯಿಲು ಮಾಡಲು ಅಡ್ಡಿಯುಂಟು ಮಾಡಿದೆ. ರೈತರು ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ. ಸುಲಿದ ಅಡಿಕೆಯನ್ನು ಒಣಗಿಸಲು ಕಟ್ಟಿಗೆ ಒಲೆಯ ಮೇಲೆ ಟ್ರೇ ಇಟ್ಟು ಅದರ ಮೇಲೆ ಹರಡುತ್ತಿದ್ದಾರೆ.

ಧಾರಾಕಾರ ಮಳೆ

ಶೃಂಗೇರಿ: ತಾಲ್ಲೂಕಿಲ್ಲಿ ಸೋಮವಾರ ಒಂದು ಗಂಟೆ ಧಾರಾಕಾರವಾಗಿ ಮಳೆ ಸುರಿಯಿತು. ಮಳೆಯಿಂದ ತುಂಗಾ ನದಿಯ ನೀರಿನ ಮಟ್ಟ ಏರಿಕೆಯಾಗಿದೆ.

ತೆಕ್ಕೂರು, ಕೊಚ್ಚವಳ್ಳಿ, ಕುಂಚೇಬೈಲು, ಅಡ್ಡಗದ್ದೆ, ಮೆಣಸೆ, ಹಾಲಂದೂರು, ಕಿಕ್ರೆ, ಬೇಗಾರು, ಮೀಗಾ, ಕೆರೆಕಟ್ಟೆ, ಹಾದಿ, ತ್ಯಾವಣ. ನೆಮ್ಮಾರ್ ಮುಂತಾದ ಕಡೆ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ.

ನಂತರ ತುಂತುರು ಮಳೆ ಮುಂದುವರಿದಿದೆ. ಮಳೆಯಿಂದ ಅಡಿಕೆ ಕೊಯಿಲು ಮಾಡಿದ ರೈತರು ಒಣಗಿಸಲು ಆಗದೆ ಪರದಾಡುತ್ತಿದ್ದಾರೆ. ಮರದಿಂದ ತೆಗೆದು ಗೊನೆ ಮನೆಯಲ್ಲಿ ಕೊಳೆಯುತ್ತಿದೆ. ತೋಟದಲ್ಲಿ ಅಡಿಕೆ ಹಣ್ಣಾಗಿ ಉದುರುತ್ತಿದೆ. ಒಟ್ಟಾರೆ ರೈತರು ಮಳೆಯಿಂದ ಕಂಗೆಟ್ಟಿದ್ದಾರೆ.

ರಸ್ತೆ ಜಲಾವೃತ

ನರಸಿಂಹರಾಜಪುರ: ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಸೋಮವಾರ ಸಂಜೆ ಗುಡುಗು ಸಹಿತ ಭಾರಿ ಮಳೆ ಸುರಿಯಿತು.

ಸಂಜೆ 4 ಗಂಟೆಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಿತು. ಪಟ್ಟಣದ ಮಿನಿವಿಧಾನ ಸೌಧದ ಬಳಿ ರಸ್ತೆಯಲ್ಲಿ ನೀರು ತುಂಬಿ ಹರಿದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿವುಂಟಾಯಿತು. ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಿದವು.

ಪಟ್ಟಣದ ಜೀವನ್ ಜ್ಯೋತಿ ಪ್ರೌಢಶಾಲೆಯ ಸಮೀಪ ಚರಂಡಿ ನೀರು ಹರಿಯದೆ ರಸ್ತೆ ಜಲಾವೃತವಾಗಿತ್ತು. ಭಾನುವಾರ ರಾತ್ರಿಯೂ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT