ತರೀಕೆರೆ: ತಾಲ್ಲೂಕಿನ ನಂದಿ ಬಟ್ಟಲು ಹಾಗೂ ತಿಗಡ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ಹಾಗೂ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದು, ಸರ್ಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ಹಿಂದುಳಿದಿರುವ ಕಾರಣ ಜಿ.ಎಚ್. ಶ್ರೀನಿವಾಸ್ ಜನಹಿತ ಸೇವಾ ಟ್ರಸ್ಟ್ ಮೂಲಕ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ನಂದಿಬಟ್ಟಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬುಬಕರ್ ಕುಟ್ಟಿ ಹೇಳಿದರು.
ತರೀಕೆರೆ ಜಿ.ಎಚ್. ಶ್ರೀನಿವಾಸ್ ಜನಹಿತ ಸೇವಾ ಟ್ರಸ್ಟ್ ಮತ್ತು ನಂದಿ ಬಟ್ಟಲು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ನಡೆದ ಸಾಮಾಜಿಕ ಭದ್ರತಾ ಯೋಜನೆಗಳ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಲಿಂಗದಹಳ್ಳಿ ಹೋಬಳಿ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕಾರ್ಮಿಕರಾಗಿ ದುಡಿದು, ವಯಸ್ಸಾದ ನಂತರ ಈ ಭಾಗದ ಗ್ರಾಮಗಳಲ್ಲಿ ವಾಸಿಸುತ್ತಿರುವವರಿಗೆ ವಿಧವಾ ವೇತನ, ಅಂಗವಿಕಲ ವೇತನ, ವೃದ್ದಾಪ್ಯ ವೇತನ, ಮನಸ್ವಿನಿ ಸೇರಿದಂತೆ ವಿವಿಧ ಮಾಸಾಶನಗಳನ್ನು ಮಾಡಿಸಿಕೊಡಲು ಸಂಬಂಧ ಪಟ್ಟ ಇಲಾಖೆಗಳಿಗೆ ಹೋಗಲು ತಿಳಿಯುತ್ತಿಲ್ಲ. ಅವರು ಮಧ್ಯವರ್ತಿಗಳಿಗೆ ಸಾವಿರಾರು ರೂಪಾಯಿ ನೀಡುತ್ತಿದ್ದನ್ನು ಗಮನಿಸಿ ಅರ್ಹರಿಗೆ ಸರ್ಕಾರದ ಸೌಲಭ್ಯಗಳನ್ನು ಮನೆ ಬಾಗಿಲಿನಲ್ಲಿ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಜನಹಿತ ಸೇವಾ ಟ್ರಸ್ಟ್‌ನ ರಚನಾ ಶ್ರೀನಿವಾಸ್ ಮಾತನಾಡಿ, ಅರ್ಹರು ಅಗತ್ಯ ದಾಖಲೆ ತಂದರೆ, ಸರ್ಕಾರದ ಸೌಲಭ್ಯ ಒದಗಿಸಲು ಕ್ರಮವಹಿಸಲಾಗುವುದು ಎಂದರು. ಸಾಮಾಜಿಕ ಭದ್ರತಾ ಯೋಜನೆಯ ಮೂಲಕ 150 ಫಲಾನುಭವಿಗಳನ್ನು ನೋಂದಣಿ ಮಾಡಿಕೊಳ್ಳಲಾಯಿತು.
ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ತಣಿಗೆಬೈಲು ರಮೇಶ್ ಗೋವಿಂದೇಗೌಡ, ಬಗರ್ ಹುಕುಂ ಸಮಿತಿ ಸದಸ್ಯ ಮೊಹಮ್ಮದ್ ಅಕ್ಬರ್, ನಂದಿಬಟ್ಟಲು ಪಿಡಿಒ ಎನ್.ಎಸ್. ನಾಗರಾಜಪ್ಪ, ಸದಸ್ಯರಾದ ವಾಣಿ ರಾಜೇಶ್, ತುಂಗಬಾಯಿ, ಕೃಷ್ಣನಾಯ್ಕ, ಲಂಬಾಣಿ ಸಮಾಜದ ಮುಖಂಡ ಆರ್. ಸತ್ಯಪ್ಪ ಹಾಜರಿದ್ದರು.