ಭಾನುವಾರ, ನವೆಂಬರ್ 28, 2021
21 °C
ಕೂಡಲೇ ದುರಸ್ತಿ ಮಾಡಲು ಆಗ್ರಹ

ಹದಗೆಟ್ಟ ಹಾಂದಿ- ಬಸ್ಕಲ್ ಸಂಪರ್ಕ ರಸ್ತೆ: ಬಾಳೆಗಿಡ ನೆಟ್ಟು ಗ್ರಾಮಸ್ಥರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡಿಗೆರೆ: ತಾಲ್ಲೂಕಿನ ಹಾಂದಿ- ಬಸ್ಕಲ್ ಸಂಪರ್ಕ ರಸ್ತೆಯನ್ನು ಕೂಡಲೇ ದುರಸ್ತಿ ಪಡಿಸುವಂತೆ ಒತ್ತಾಯಿಸಿ ಸೋಮವಾರ ಆಟೊ ಚಾಲಕರು, ವಿದ್ಯಾರ್ಥಿಗಳು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ರಸ್ತೆ ಮಧ್ಯೆಯ ಗುಂಡಿಗಳಿಗೆ ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಿದರು.

ಜೆಡಿಎಸ್ ಜಿಲ್ಲಾ ಘಟಕದ ಮಾಜಿ ಉಪಾಧ್ಯಕ್ಷ ರೆಹಮಾನ್ ಇಂದ್ರವಳ್ಳಿ ಮಾತನಾಡಿ, ‘ಹಾಂದಿಯಿಂದ ಬಸ್ಕಲ್ ಮೂಲಕ ಬೇಲೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಪ್ರತಿನಿತ್ಯ ಒಂದೂವರೆ ಸಾವಿರಕ್ಕೂ ಅಧಿಕ ವಾಹನಗಳು ಸಂಚರಿಸುತ್ತವೆ. ಆದರೆ, ರಸ್ತೆಯಲ್ಲಿ ಮಾರುದ್ದ ಗುಂಡಿ ಬಿದ್ದು ಎರಡು ವರ್ಷ ಕಳೆದರೂ ಇದುವರೆಗೂ ದುರಸ್ತಿ ಮಾಡಿಲ್ಲ. ಇದರಿಂದಾಗಿ ಸಂಪರ್ಕ ರಸ್ತೆಯ ಸುತ್ತಮುತ್ತಲಿನ ಗ್ರಾಮಗಳ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ರಸ್ತೆ ಗುಂಡಿ ಬಿದ್ದಿರುವುದರಿಂದ ಬಾಡಿಗೆ ವಾಹನಗಳು ಗ್ರಾಮಕ್ಕೆ ಬರಲು ಹಿಂದೇಟು ಹಾಕುತ್ತಾರೆ. ಮಹಿಳೆಯರು, ಮಕ್ಕಳು, ವೃದ್ದರು, ರೋಗಿಗಳು ಪಟ್ಟಣಕ್ಕೆ ಬರಲು ಪರದಾಡುವಂತಾಗಿದೆ. ಕೂಡಲೇ ರಸ್ತೆ ದುರಸ್ತಿ ಮಾಡಬೇಕು’ ಎಂದು ಒತ್ತಾಯಿಸಿದರು.

ಆಟೊ ಸಂಘದ ಅಧ್ಯಕ್ಷ ಮಹೇಶ್ ಮಾತನಾಡಿ, ‘ಗುಂಡಿ ಬಿದ್ದ ರಸ್ತೆಯಿಂದಾಗಿ ಆಟೊ ಚಾಲನೆ ಕಷ್ಟವಾಗಿದೆ. ನಿತ್ಯವೂ ವಾಹನಗಳು ರಿಪೇರಿಗೆ ಬರುತ್ತಿವೆ. ಮಳೆ ಬಂದರೆಂತೂ ಗುಂಡಿಗಳಲ್ಲಿ ನೀರು ನಿಲ್ಲುವುದರಿಂದ ವಾಹನ ಚಲಾಯಿಸುವುದೇ ಸಾಹಸವಾಗುತ್ತದೆ. ಹಲವು ಬಾರಿ ರಸ್ತೆ ದುರಸ್ತಿಗೊಳಿಸುವಂತೆ ಒತ್ತಾಯಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ರಸ್ತೆಯಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವುದರಿಂದ ಗುಂಡಿ ತಪ್ಪಿಸಲು ಹೋಗಿ ಪದೇ ಪದೇ ಅಪಘಾತಕ್ಕೊಳಗಾಗುತ್ತಾರೆ. ಈ ರಸ್ತೆಯಿರುವ ಭಾಗವು ಗಂಡಿ ಪ್ರದೇಶವಾಗಿರುವುದರಿಂದ ರಸ್ತೆ ರಿಪೇರಿಗೆ ಹಿಂದೇಟು ಹಾಕುತ್ತಿದ್ದು, ಜಿಲ್ಲಾಡಳಿತವು ವಿಶೇಷ ಆದ್ಯತೆ ನೀಡಿ ರಸ್ತೆ ದುರಸ್ತಿಗೆ ಮುಂದಾಗಬೇಕು’ ಎಂದು ಒತ್ತಾಯಿಸಿದರು.

ವಿದ್ಯಾರ್ಥಿ ಶರತ್ ಮಾತನಾಡಿ, ‘ಬಸ್ಕಲ್ – ಹಾಂದಿ ಮಾರ್ಗದಲ್ಲಿ ಕೆಎಸ್ಆರ್‌ಟಿಸಿ ಬಸ್ ಸಂಚರಿಸುತ್ತಿತ್ತು. ರಸ್ತೆ ಗುಂಡಿ ಬಿದ್ದ ಬಳಿಕ ಕೋವಿಡ್ ಪೂರ್ವದಲ್ಲಿಯೇ ಬಸ್ ಸಂಚಾರ ಸ್ಥಗಿತಗೊಳಿಸಲಾಯಿತು. ಇದರಿಂದ ವಿದ್ಯಾರ್ಥಿಗಳು ಖಾಸಗಿ ವಾಹನಗಳ ಮೂಲಕ ಹಾಂದಿ ಅಥವಾ ಬಸ್ಕಲ್‌ಗೆ ಬಂದು ಅಲ್ಲಿಂದ ಚಿಕ್ಕಮಗಳೂರು, ಮೂಡಿಗೆರೆಗೆ ತೆರಳಬೇಕಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಯಾಗುತ್ತಿದ್ದು, ಹಲವರು ಶಾಲೆಯನ್ನೇ ಬಿಟ್ಟಿದ್ದಾರೆ. ಸರ್ಕಾರವು ರಸ್ತೆಗುಂಡಿ ಮುಚ್ಚುವ ಬದಲು ಬಸ್ ಸಂಚಾರವನ್ನೇ ರದ್ದು ಪಡಿಸಿರುವುದು ಎಷ್ಟು ಸರಿ?’ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಪ್ರತಿಭಟನೆಯಲ್ಲಿ ರಮೇಶ್, ಉಮೇಶ್, ರಘು, ಇಶಾಂ, ರಮ್ಯ ಇಂದ್ರವಳ್ಳಿ, ಹಸನಬ್ಬ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು