ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ರಸ್ತೆಯಲ್ಲಿ ಸಂಚಾರ ದುಸ್ತರ

ತಮ್ಮಡವಳ್ಳಿ, ವಗಳೆ ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರ ಒತ್ತಾಯ
Last Updated 21 ಡಿಸೆಂಬರ್ 2021, 3:22 IST
ಅಕ್ಷರ ಗಾತ್ರ

ಕೊಪ್ಪ: ತಾಲ್ಲೂಕಿನ ಅಸಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿ ತಮ್ಮಡವಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಜನರ ಓಡಾಟಕ್ಕೆ ಸಮಸ್ಯೆಯಾಗಿದೆ.

ಗ್ರಾಮದ ತಮ್ಮಡವಳ್ಳಿ, ವಗಳೆ, ಬೆಳೆಗದ್ದೆ ಜನ ವಸತಿ ಪ್ರದೇಶದಲ್ಲಿ 250ಕ್ಕೂ ಹೆಚ್ಚು ಮನೆಗಳಿವೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ತಮ್ಮಡವಳ್ಳಿಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿದೆ. ಸ್ಥಳೀಯ ಮಕ್ಕಳು ಇದೇ ಶಾಲೆಗೆ ಓದಲು ಬರುತ್ತಾರೆ. ಪಟ್ಟಣ ಪ್ರದೇಶದ ಶಾಲೆಗಳಿಗೆ ಹೋಗುವ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದೇ ಹದಗೆಟ್ಟ ರಸ್ತೆಯನ್ನು ಬಳಸಬೇಕಿರುವುದು ಅನಿವಾರ್ಯವಾಗಿದೆ.

‘ತುಂಗಾ ನದಿಯಿಂದ ಮರಳು ಕೊಂಡೊಯ್ಯಲು ಇದೇ ಹಾದಿಯನ್ನು ಬಳಸಲಾಗುತ್ತಿತ್ತು. ಇದೀಗ ಅಲ್ಲಿ ಮರಳು ಎತ್ತುತ್ತಿಲ್ಲ, ವಾಹನಗಳು ಓಡಾಡುತ್ತಿಲ್ಲ. ಕೋಟ್ಯಂತರ ರೂಪಾಯಿ ಆದಾಯ ತರುತ್ತಿದ್ದ ಈ ಗ್ರಾಮದ ರಸ್ತೆ ಡಾಂಬರು ಕಂಡು ದಶಕಗಳೇ ಕಳೆದಿವೆ’ ಎಂದು ಸ್ಥಳೀಯರು ಹೇಳಿದ್ದಾರೆ.

‘ಹೆಬ್ರುಗಂಡಿ ಎಂಬಲ್ಲಿ ತುಂಗಾನದಿಯಿಂದ ಈ ಗ್ರಾಮಕ್ಕೆ ನೀರು ಪೂರೈಕೆಯಾಗುತ್ತದೆ. ಪರ್ಯಾಯವಾಗಿ ನೀರಿನ ವ್ಯವಸ್ಥೆ ಇಲ್ಲದ್ದರಿಂದ ಮೋಟಾರು ಕೆಟ್ಟಾಗ ಕೆಲವು ದಿನಗಳು ನೀರಿನ ಕೊರತೆ ಎದುರಿಸಬೇಕಾಗುತ್ತದೆ’ ಎಂಬುದಾಗಿ ಗ್ರಾಮದ ಸುಂದರ, ಸತೀಶ, ರಮೇಶ ಎಂಬುವರು ತಿಳಿಸಿದ್ದಾರೆ.

‘ಗ್ರಾಮದಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಿದ್ದಾರೆ. ಇಲ್ಲಿನ ಮನೆಗಳ ಹತ್ತಿರ ಅಗತ್ಯವಿದ್ದ ಕಡೆಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಿಲ್ಲ. ಸಮೀಪದ ಗೋಗಲ್ ಎಂಬಲ್ಲಿ 8 ಮನೆಗಳಿದ್ದು, ಅಲ್ಲಿಯೂ ನೀರಿನ ಕೊರತೆ ಎದುರಿಸುತ್ತಿದ್ದಾರೆ. ಗ್ರಾಮದ ರಸ್ತೆ ಅಭಿವೃದ್ಧಿ ಮಾಡದಿದ್ದರೆ ಚುನಾವಣೆಗೆ ಮತದಾನವನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ’ ಎಂಬುದಾಗಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಗ್ರಾಮದ ರಸ್ತೆ ಅಭಿವೃದ್ಧಿಗೆ ₹ 70 ಲಕ್ಷ ಅನುದಾನ ಇರಿಸಿದ್ದಾರೆ, ಟೆಂಡರ್ ಪ್ರಕ್ರಿಯೆಯೂ ಮುಗಿದಿದೆ ಎಂದೂ ಹೇಳಲಾಗುತ್ತಿದೆ. ಆದರೆ, ಈವರೆಗೂ ರಸ್ತೆ ಕೆಲಸ ಪ್ರಾರಂಭಿಸಿಲ್ಲ’ ಎಂದು ಸ್ಥಳೀಯ ವ್ಯಕ್ತಿಯೊಬ್ಬರು ತಿಳಿಸಿದರು.

‘ವಗಳೆಯಲ್ಲಿ ನೀರಿನ ಕೊರತೆ ಅಷ್ಟಿಲ್ಲ. ಮೋಟಾರು ಹಾಳಾದಾಗ, ಕರೆಂಟ್ ಇಲ್ಲದಿದ್ದಾಗ ಕೆಲವೊಮ್ಮೆ ನೀರು ಪೂರೈಕೆಯಲ್ಲಿ ವ್ಯತ್ಯಾಸವಾಗುತ್ತದೆ. ಆದರೆ, ಬೀದಿ ದೀಪಗಳು ಆಗಮ್ಮೆ ಈಗೊಮ್ಮೆ ಉರಿಯುತ್ತವೆ. ಕಾಲೊನಿ ರಸ್ತೆ ಚೆನ್ನಾಗಿದೆ, ಆದರೆ, ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವಲ್ಲಿ ಸಂಚರಿಸಲು ಆಗದ ಸ್ಥಿತಿ ಇದೆ’ ಎಂದು ವೃದ್ಧೆಯೊಬ್ಬರು ಮಾಹಿತಿ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT