ಸೋಮವಾರ, ಜನವರಿ 17, 2022
21 °C
ಅಭಿವೃದ್ಧಿ ಕಾಣದ ಕೆರೆಮನೆ– ತನಿಕೋಡುಗೆ ರಸ್ತೆ: ಗ್ರಾಮಸ್ಥರ ನರಕಯಾತನೆ

ಹದಗೆಟ್ಟ ರಸ್ತೆ: ಸಂಚಾರಕ್ಕೆ ಪ್ರಯಾಸ

ರಾಘವೇಂದ್ರ ಕೆ.ಎನ್. Updated:

ಅಕ್ಷರ ಗಾತ್ರ : | |

Prajavani

ಶೃಂಗೇರಿ: ಕೂತುಗೋಡು ಗ್ರಾಮ ಪಂಚಾಯಿತಿಯ ಕೆರೆಮನೆಯಿಂದ ತನಿಕೋಡುಗೆ ಹೋಗುವ ರಸ್ತೆ ಹದಗೆಟ್ಟಿದ್ದು, ಸಾರ್ವಜನಿಕರು ಮತ್ತು ಶಾಲಾ ಕಾಲೇಜಿಗೆ ತೆರಳುವ ಮಕ್ಕಳ ಸಂಚಾರಿಸಲು ಕಷ್ಟಪಡಬೇಕಾಗಿದೆ.

ಈ ರಸ್ತೆ ಅತ್ತ ಜಲ್ಲಿ ರಸ್ತೆಯೂ ಇಲ್ಲ. ಇತ್ತ ಮಣ್ಣು ರಸ್ತೆಯೂ ಅಲ್ಲ ಎಂಬಂತಿದೆ. 20 ವರ್ಷದ ಹಿಂದೆ ಈ ರಸ್ತೆಯ ಅಭಿವೃದ್ಧಿಗಾಗಿ ಜಲ್ಲಿ ಹಾಕಿಲಾಗಿತ್ತು. ಆದರೆ, ಜಲ್ಲಿ ಎದ್ದು ವಾಹನ ಚಲಾಯಿಸಲು ಮತ್ತು ಜನರು ತಿರುಗಾಡಲು ಪರದಾಡಬೇಕಿದೆ. ರಸ್ತೆಯಲ್ಲಿ ಚರಂಡಿ ಎಲ್ಲಿದೆ ಎಂಬುದನ್ನು ಹುಡುಕಬೇಕಿದೆ.

ಸರಿಯಾದ ನಿರ್ವಹಣೆಯಿಲ್ಲದೆ ಮಳೆಗಾಲದಲ್ಲಿ ಗುಂಡಿ ನಿರ್ಮಾಣವಾಗಿ ಗ್ರಾಮಸ್ಥರು ನಡೆದಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಚರಂಡಿ ಇಲ್ಲದೆ ರಸ್ತೆ ಮೇಲೆ ಮಳೆ ನೀರು ಬಿದ್ದು, ಚರಂಡಿಗೂ, ರಸ್ತೆಗೂ ವ್ಯತ್ಯಾಸವಿಲ್ಲದಂತೆ ನೀರು ಹರಿಯುತ್ತದೆ. ಅಲ್ಲಲ್ಲಿ ಹೊಂಡಗಳು ಬಿದ್ದಿದ್ದರಿಂದ ಜನರು ತಿರುಗಾಡಲು ಕಷ್ಟ ಪಡಬೇಕು. ಪ್ರತಿನಿತ್ಯ ಸಂಚರಿಸುವರಿಗೆ ನರಕಯಾತನೆಯಾಗುತ್ತಿದ್ದು, ಗ್ರಾಮಸ್ಥರ ಗೋಳು ಕೇಳುವರೇ ಇಲ್ಲವಾಗಿದೆ. ರಸ್ತೆ ಹಾಳಾಗುತ್ತಿರುವ ಬಗ್ಗೆ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಅರ್ಜಿ ನೀಡಿ ಒತ್ತಾಯಿಸಿದ್ದರು. ಆದರೆ, ಜನಪ್ರತಿನಿಧಿಗಳು ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.

ಕೆರೆಮನೆ, ಸಿಡ್ಲುಮನೆ, ತೋಟ, ಕುಂಬಾರ್‌ಕೊಪ್ಪದಲ್ಲಿರುವ ಜನರ ಜಮೀನಿಗೆ ರಸಗೊಬ್ಬರ ಕೊಂಡೊ ಯ್ಯಲು ಮತ್ತು ಅಡಿಕೆ, ಭತ್ತದ ಪೈರು ತರಲು ಹರಸಾಹಸ ಪಡಬೇಕು. ತನಿಕೋಡುನಲ್ಲಿ ಸುಮಾರು 8 ಕುಟುಂಬಗಳು ವಾಸಿಸುತ್ತಿದ್ದು, ಸಾಮಾನ್ಯ ಜನರು ಪಟ್ಟಣಕ್ಕೆ ಬರಲು ಕಷ್ಟ ಪಡಬೇಕು. ಲಭ್ಯವಿರುವ ವಾಹನಗಳಲ್ಲಿ ಪೇಟೆಗೆ ಬಂದು ಮನೆಗೆ ಬೇಕಾಗುವ ಆಹಾರ ಸಾಮಗ್ರಿ ಹಾಗೂ ತೋಟಕ್ಕೆ ಬೇಕಾಗಿರುವ ಗೊಬ್ಬರಗಳನ್ನು ಸಾಗಣೆ ಮಾಡುವುದು ಕಷ್ಟಕರ. ನಿತ್ಯವೂ ಓಡಾಡುವವರ ಪಾಡು ಹೇಳಲು ತೀರದಾಗಿದೆ. ಇಲ್ಲಿನ ಜನರು ತುರ್ತು ಚಿಕಿತ್ಸೆ ಪಡೆಯಲು ಅನಿವಾರ್ಯವಾದಾಗ ರೋಗಿಗಳ ಪಾಡು ಹೇಳಲು ಸಾಧ್ಯವಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

‘ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಪ್ರತಿದಿನ ಇದೇ ರಸ್ತೆಯಲ್ಲಿ ಸಂಚರಿಸುವುದು ಕಷ್ಟಕರವಾಗಿದೆ. ಜನರು ಪ್ರತಿ ದಿನವೂ ತಾಲ್ಲೂಕು ಕೇಂದ್ರಕ್ಕೆ ಬರುವ ಅನಿವಾರ್ಯತೆ ಇದ್ದು, ದ್ವಿಚಕ್ರ ವಾಹನ ಸವಾರರು ಸಹಿತ ವಾಹನಗಳ ಸಂಚಾರ, ಕಾಲ್ನಡಿಗೆಗೂ ಕಷ್ಟವಾಗಿದೆ. ಸರ್ಕಾರವು ಇದರ ಕುರಿತು ಹೆಚ್ಚಿನ ಗಮನ ನೀಡಿ ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿ ಮಾಡಲಿ’ ಎಂದು ಗ್ರಾಮಸ್ಥರಾದ ಎಚ್.ಎನ್ ವಿಠಲ್, ಸೀತರಾಮ್ ಭಟ್, ಗೋವಿಂದ್ ಭಟ್, ಕೃಷ್ಣ ಭಟ್, ನಾಗರಾಜ್, ಜಗದೀಶ, ಗಣೇಶ, ಪ್ರಕಾಶ್‌ ಒತ್ತಾಯಿಸಿದ್ದಾರೆ.

‘ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ವೇದಿಕೆಯ ಮೇಲೆ ಭಾಷಣ ಮಾಡುವರು ಗ್ರಾಮೀಣ ರಸ್ತೆಯಲ್ಲಿ ತಮ್ಮ ವಾಹನಗಳಲ್ಲಿ ಬಂದು ಒಮ್ಮೆ ಸಂಚರಿಸಿ ನೋಡಲಿ’ ಎಂದು ತನಿಕೋಡಿನ ಮಹಿಳೆಯರು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.