ಗುರುವಾರ , ನವೆಂಬರ್ 26, 2020
20 °C
ಗಿರಿ ಶ್ರೇಣಿ ಮಾರ್ಗ; ಪ್ರವಾಸಿ ವಾಹನಗಳ ದಾಂಗುಡಿ

ರಸ್ತೆ ಅಂಚಿನಲ್ಲಿ ವಾಹನ ನಿಲುಗಡೆ; ಸಂಚಾರ ಸಂಕಷ್ಟ

ಸಿ.ಎಸ್‌. ಅನಿಲ್‌ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ತಾಲ್ಲೂಕಿನ ಗಿರಿ ಶ್ರೇಣಿ ಮಾರ್ಗದಲ್ಲಿ ಪ್ರವಾಸಿ ವಾಹನಗಳ ದಾಂಗುಡಿ, ಯರ್ರಾಬಿರ್ರಿ ನಿಲುಗಡೆಯಿಂದ ಸಂಚಾರ ತಾಪತ್ರಯ ಹೇಳತೀರದಾಗಿದೆ.

ಮುಳ್ಳಯ್ಯನ ಗಿರಿಯ ಮುಳ್ಳಪ್ಪ ದೇಗುಲ ಸನಿಹದಲ್ಲಿ ವಾಹನ ನಿಲುಗಡೆಗೆ (ಪಾರ್ಕಿಂಗ್‌) ಜಾಗ ಇದೆ. ಅಲ್ಲಿ ಸ್ಥಳಾವಕಾಶ ಇದ್ದರೂ ವಾಹನಗಳನ್ನು ನಿಲ್ಲಿಸುವವರು ಬಹಳ ಕಡಿಮೆ. ಮುಳ್ಳಯ್ಯನ ಗಿರಿ ಬಳಿ (ಒಂದು ಕಿ.ಮೀ ಅಂತರ) ರಸ್ತೆ ಅಂಚಿನಲ್ಲೇ ಸಾಲಾಗಿ ವಾಹನ ನಿಲುಗಡೆ ಮಾಡುತ್ತಾರೆ. ಪ್ರವಾಸಿಗರ ಈ ಪರಿಪಾಟ ಸಂಕಷ್ಟ ತಂದೊಡ್ಡಿದೆ.

ರಸ್ತೆ ಅಂಚಿನಲ್ಲಿ ನಿಂತಿರುವ ವಾಹನಗಳು ಮತ್ತು ಸಂಚಾರ ದಟ್ಟಣೆ ನಡುವೆ ಸಾಗುವುದೇ ಸವಾಲಾಗಿದೆ. ಇಕ್ಕಟ್ಟಿನ ನಡುವೆ ವಾಹನ ಚಲಾಯಿಸಲು ಚಾಲಕರು ಗೋಳಾಡಬೇಕು.

ರಾಜ್ಯದ ಅತಿ ಎತ್ತರದ ಗಿರಿ ಪ್ರದೇಶ ಇದು. ಮಾರ್ಗದ ಕೆಲವೆಡೆ ಲೋಹದ ತಡೆಗೋಡೆ ಇದೆ. ಮಳೆಯಿಂದಾಗಿ ರಸ್ತೆಯ ಕೆಲವಡೆ ಕೊರಕಲಾಗಿದೆ. ರಸ್ತೆಯಲ್ಲಿ ಕಂದಕಗಳಾಗಿವೆ. ಸಾಗುವಾಗ ಆಯ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ರಸ್ತೆ ಅಂಚಿನಲ್ಲಿ ಒಬ್ಬರು ವಾಹನ ನಿಲ್ಲಿಸಿದ್ದರೆ ಅದರ ಹಿಂದೆ ನೂರಾರು ಸಾಲುಗಟ್ಟುತ್ತವೆ. ವಾಹನಗಳ ಸಾಲು ನೋಡಿ ಎಷ್ಟೋ ಮಂದಿ ಮುಂದಕ್ಕೆ ತೆರಳದೆ ಅರ್ಧ ದಾರಿಯಿಂದಲೇ ವಾಹನ ತಿರುಗಿಸಿಕೊಂಡು ಹಿಂತಿರುಗಿದ ನಿದರ್ಶನಗಳು ಇವೆ.

ಸಾಲು ರಜೆ ದಿನಗಳು, ವಾರಾಂತ್ಯದಲ್ಲಿ ಪ್ರವಾಸಿಗರ ದಂಡು ಹೆಚ್ಚು ಇರುತ್ತದೆ. ಇಂಥ ದಿನಗಳಲ್ಲಿ ರಸ್ತೆ ಅಂಚಿನಲ್ಲಿ ಮಾರ್ನಾಲ್ಕು ಕಿ.ಮೀ ಉದ್ದಕ್ಕೆ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ.

‘ಗಿರಿ ಶ್ರೇಣಿಯಲ್ಲಿ ಕಳೆದ ವಾರ 10 ಸೆಂ. ಮೀ ಮಳೆ ಬಿದ್ದಿದೆ. ಇದು ಸೂಕ್ಷ್ಮ ಪ್ರದೇಶ. ಇಲ್ಲಿನ ಮಣ್ಣು ಬೇಗ ಕುಸಿಯುತ್ತದೆ, ತಾಳಿಕೆ ಸಾಮರ್ಥ್ಯ ಕಡಿಮೆ. ರಸ್ತೆ ಅಂಚಿನಲ್ಲಿ ವಾಹನ ನಿಲುಗಡೆ ಮಾಡುವುದಕ್ಕೆ ಕಡಿವಾಣ ಹಾಕಬೇಕು ಮತ್ತು ಈ ಪ್ರದೇಶದಲ್ಲಿ ನಿಗಾಕ್ಕೆ ಹೆಚ್ಚು ಪೊಲೀಸರನ್ನು ನಿಯೋಜಿಸಲು ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ’ ಎಂದು ಮುಳ್ಳಯ್ಯನಗಿರಿ ತಪ್ಪಲು ರಕ್ಷಣಾ ವೇದಿಕೆ ಸಂಚಾಲಕ ಕೆ.ಎಸ್‌.ಗುರುವೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೀತಾಳಯ್ಯನ ಗಿರಿಯಲ್ಲಿಯೇ ಪ್ರವಾಸಿಗರ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕು. ಮುಳ್ಳಯ್ಯನ ಗಿರಿಗೆ ಕಾಲ್ನಡಿಗೆಯಲ್ಲಿ ಸಾಗುವಂತೆ ಮಾಡಬೇಕು.ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.