ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಎಂ ಹಾಸ್ಟೆಲ್‌ನ 33ವಿದ್ಯಾರ್ಥಿನಿಯರಿಗೆ ವಾಂತಿಭೇದಿ

Last Updated 13 ಫೆಬ್ರುವರಿ 2019, 14:24 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಹಾಸ್ಟೆಲ್‌ನಲ್ಲಿ ಪುಳಿಯೋಗರೆ ಸೇವಿಸಿ, ಶಾಲೆಯಲ್ಲಿ ಹಾಲು ಕುಡಿದ ನಂತರ ಅಸ್ವಸ್ಥರಾಗಿದ್ದ ತಾಲ್ಲೂಕಿನ ಶಿರವಾಸೆಯ ಬಿಸಿಎಂ ಬಾಲಕಿಯರ ಹಾಸ್ಟೆಲ್‌ನ 33ವಿದ್ಯಾರ್ಥಿನಿಯರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ವಿವೇಕಾನಂದ ಶಾಲೆಯಲ್ಲಿ ಬುಧವಾರ ಬೆಳಿಗ್ಗೆ 11.30ರ ಹೊತ್ತಿಗೆ ವಿದ್ಯಾರ್ಥಿನಿಯರಿಗೆ ಹೊಟ್ಟೆನೋವು, ವಾಂತಿ–ಭೇದಿ ಬಾಧಿಸಿದೆ. ಅಸ್ವಸ್ಥರಾಗಿದ್ದ ವಿದ್ಯಾರ್ಥಿನಿಯರಿಗೆ ಶಿರವಾಸೆ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಜಿಲ್ಲಾಸ್ಪತ್ರೆಗೆ ತರಲಾಗಿದೆ.

‘ಹಾಸ್ಟೆಲ್‌ನಲ್ಲಿ ಪುಳಿಯೋಗರೆ ಸೇವಿಸಿ ಶಾಲೆಗೆ ಹೋಗಿದ್ದೆವು. ಶಾಲೆಯಲ್ಲಿ ಹಾಲು ಕುಡಿದ ಎರಡು ಗಂಟೆ ನಂತರ ವಾಂತಿ–ಭೇದಿ ಶುರುವಾಯಿತು. ಹಾಸ್ಟೆಲ್‌ ವಿದ್ಯಾರ್ಥಿನಿಯರಿಗೆ ಮಾತ್ರ ಹೊಟ್ಟೆನೋವು, ವಾಂತಿ–ಭೇದಿಯಾಗಿದೆ’ ಎಂದು ಆಸ್ಪ್ರೆಯಲ್ಲಿದ್ದ ವಿದ್ಯಾರ್ಥಿನಿ ಆರ್‌.ವರ್ಷಿತಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಚಿಕಿತ್ಸೆ ನೀಡಲಾಗಿದೆ. ವಿದ್ಯಾರ್ಥಿಗಳು ಚೇತರಿಸಿಕೊಂಡಿದ್ದಾರೆ. ಅವರನ್ನು ಗುರುವಾರ ಆಸ್ಪತ್ರೆಯಿಂದ ಕಳಿಸಲಾಗುವುದು’ ವೈದ್ಯರು ತಿಳಿಸಿದರು.

‘ಬಿಸಿಎಂ ಬಾಲಕಿಯರ ಹಾಸ್ಟೆಲ್‌ನ ನೀರಿನ ಮಾದರಿ, ಪುಳಿಯೋಗರೆ ಹಾಗೂ ಶಾಲೆ ಹಾಲಿನ ಪುಡಿಯನ್ನು ಸಂಗ್ರಹಿಸಲಾಗಿದೆ. ಪುಳಿಯೋಗರೆ ಮತ್ತು ಹಾಲಿನ ಪುಡಿಯನ್ನು ಪರೀಕ್ಷೆಗೆ ಮೈಸೂರಿನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ನೀರಿನ ಪರೀಕ್ಷೆ ಇಲ್ಲಿನ ಪ್ರಯೋಗಾಲಯದಲ್ಲೇ ಮಾಡಲಾಗುವುದು. ಪ್ರಯೋಗಾಲಯ ವರದಿಯಿಂದ ನಿಖರ ಕಾರಣ ಗೊತ್ತಾಗಲಿದೆ’ ಎಂದು ಆಹಾರ ಸುರಕ್ಷತಾ ಅಧಿಕಾರಿ ಡಾ.ಮಂಜುನಾಥ್‌ ತಿಳಿಸಿದರು.

ಹಾಸ್ಟೆಲ್‌ ವಿದ್ಯಾರ್ಥಿನಿಯರು ಮಾತ್ರ ಅಸ್ವಸ್ಥರಾಗಿದ್ದಾರೆ. ಹಾಸ್ಟೆಲ್‌ ನೀರು ಅಥವಾ ಆಹಾರದಲ್ಲಿ ಎಡವಟ್ಟು ಆಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ್‌, ತಹಶೀಲ್ದಾರ್‌ ನಂದಕುಮಾರ್‌, ಜಿಲ್ಲಾ ಪಂಚಾಯಿತಿ ಸದಸ್ಯೆ ಜಸಂತಾಅನಿಲ್‌ಕುಮಾರ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಯಣ್ಣ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT