ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲಾ ಜಾಗ ಖಾತೆ ಅಭಿಯಾನ ಶುರು

ದಾನಿಗಳಿಂದ ಶಾಲೆ ಹೆಸರಿಗೆ ದಾಖಲೀಕರಣ ಪ್ರಕ್ರಿಯೆ
Last Updated 9 ಜುಲೈ 2022, 18:27 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ತಾಲ್ಲೂಕಿನಲ್ಲಿ ಸರ್ಕಾರಿ ಶಾಲಾ ಜಾಗ ಖಾತೆ ಅಭಿಯಾನ ಕೈಗೆತ್ತಿಕೊಳ್ಳಲಾಗಿದೆ. ಈವರೆಗೆ ಎಂಟು ಶಾಲೆಗಳ ಜಾಗ ದಾಖಲೀಕರಣ ಮಾಡಲಾಗಿದೆ.

ಚಿಕ್ಕಮಗಳೂರು ವಿಭಾಗದ ಉಪ ವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌ ಅವರು ಅಭಿಯಾನ ಶುರು ಮಾಡಿದ್ದಾರೆ. ದಾನಿಗಳ ಹೆಸರಿನಲ್ಲಿರುವ ಜಾಗವನ್ನು ಶಾಲೆ ಹೆಸರಿಗೆ ದಾಖಲೀಕರಣ ಮಾಡುವ ಪ್ರಕ್ರಿಯೆ ಕೈಗೆತ್ತಿಕೊಂಡಿದ್ದಾರೆ. ತಾಲ್ಲೂಕಿನ ಯಲಗುಡಿಗೆ, ಭಕ್ತರಹಳ್ಳಿ, ಬೀರಾಪುರ ಸಹಿತ ಎಂಟು ಗ್ರಾಮಗಳ ಶಾಲೆಗಳ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ.
ಜೂನ್‌ 29ರಂದು ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರ ಸಭೆ ನಡೆಸಲಾಗಿದೆ. ಶಾಲಾ ಜಾಗಗಳ ವಿವರ ನೀಡುವಂತೆ ತಿಳಿಸಲಾಗಿದೆ.

ಜಿಲ್ಲೆಯಲ್ಲಿ ಕಿರಿಯ ಪ್ರಾಥಮಿಕ – 724, ಹಿರಿಯ ಪ್ರಾಥಮಿಕ, 901 ಹಾಗೂ ಪ್ರೌಢಶಾಲೆಗಳು 356 ಇವೆ. ಚಿಕ್ಕಮಗಳೂರು ತಾಲ್ಲೂಕಿನ ಕೆಲವು ಶಾಲೆಗಳ ಮುಖ್ಯಶಿಕ್ಷಕರು ಖಾತೆ ನಿಟ್ಟಿನಲ್ಲಿ ಮನವಿ ಸಲ್ಲಿಸಿದ್ದಾರೆ.

ಜಿಲ್ಲೆಯ ಶೇ 30ರಷ್ಟು ಶಾಲೆಗಳ ಜಾಗ ದಾಖಲೀಕರಣವಾಗಿಲ್ಲ. ಶಾಲೆಗೆ ಜಾಗ ದಾನ ನೀಡಿದವರು ಪೌತಿಯಾಗಿದ್ದು, ಕುಟುಂಬದವರ ಹೆಸರಿಗೆ ಖಾತೆ ವರ್ಗಾವಣೆಯಾಗಿರುವ ಪ್ರಕರಣಗಳೇ ಹೆಚ್ಚು ಇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಜಿಲ್ಲೆಯ ಮಲೆನಾಡಿನಲ್ಲಿ ಶಾಲಾ ಜಾಗ ಬಹಳಷ್ಟು ದಾಖಲೀಕರಣ ಆಗಿಲ್ಲ. ಭೂಮಿ ಬೆಲೆ ಈಗ ಹೆಚ್ಚಾಗಿದೆ ಹೀಗಾಗಿ, ಕೆಲವರು ಜಾಗದ ವಿಚಾರದಲ್ಲಿ ತಗಾದೆ ಎತ್ತಿದ್ದಾರೆ. ಕೆಲವೆಡೆ ಅರಣ್ಯ ಜಾಗ ತೊಡಕು ಇದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ರಂಗನಾಥಸ್ವಾಮಿ ತಿಳಿಸಿದರು.

ಚಿಕ್ಕಮಗಳೂರು ತಾಲ್ಲೂಕಿನ ಗಾಳಿಹಳ್ಳಿಯ ಪರ್ವತೇಗೌಡ ಅವರು ಶಾಲೆಗೆ 20 ಗುಂಟೆ ಜಾಗ ನೀಡಿದ್ದರು. ಪರ್ವತೇಗೌಡ ಅವರ ಪೌತಿಯಾಗಿದ್ದು, ಪುತ್ರ ಗಂಗಾಧರಪ್ಪ ಅವರ ಹೆಸರಿಗೆ ಖಾತೆ ವರ್ಗಾವಣೆಯಾಗಿತ್ತು. ಶಾಲೆ ಮುಖ್ಯ ಶಿಕ್ಷಕ ಚಂದ್ರೇಗೌಡ ಅವರು ಉಪ ವಿಭಾಗಾಧಿಕಾರಿಗೆ ಖಾತೆ ಮಾಡಿಸಿಕೊಡಲು ಮನವಿ ಸಲ್ಲಿಸಿದ್ದರು. ಉಪವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌ ಅವರು ಗಂಗಾಧರಪ್ಪ ಅವರೊಂದಿಗೆ ಮಾತನಾಡಿ ಶಾಲೆ ಹೆಸರಿಗೆ ಖಾತೆ ಮಾಡಿಸಿಕೊಟ್ಟಿದ್ದಾರೆ.

‘ನಮ್ಮ ತಂದೆಯವರು 1985ರಲ್ಲಿ 20 ಗುಂಟೆ ಜಾಗವನ್ನು ಶಾಲೆಗೆ ದಾನ ನೀಡಿದ್ದರು. ಜಾಗದ ಖಾತೆ ನನ್ನ ಹೆಸರಿಗಿತ್ತು. ಜಾಗವನ್ನು ಶಾಲೆ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದೇನೆ’ ಎಂದು ಗಾಳಿಹಳ್ಳಿಯ ಗಂಗಾಧರಪ್ಪ ತಿಳಿಸಿದರು.

‘ಶಾಲಾ ಜಾಗ ಖಾತೆ; ಶೀಘ್ರದಲ್ಲಿ ಅದಾಲತ್‌ ಆಯೋಜನೆ’

‘ಶಾಲಾ ಜಾಗ ಖಾತೆ ನಿಟ್ಟಿನಲ್ಲಿ ಚಿಕ್ಕಮಗಳೂರು ತಾಲ್ಲೂಕುಮಟ್ಟದ ಅದಾಲತ್‌ ಅನ್ನು ಶೀಘ್ರದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ’ ಎಂದು ಉಪವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌ ತಿಳಿಸಿದರು.

‘ಶಾಲಾ ಜಾಗ ಖಾತೆ ದಾಖಲೀಕರಣ ಮಾಡಿ, ಒತ್ತುವರಿ ತೆರವುಗೊಳಿಸಿ, ಖಾತ್ರಿ ಯೋಜನೆಯಡಿ ಶಾಲೆ ಜಾಗಕ್ಕೆ ಬೇಲಿ ಅಳವಡಿಸಲಾಗುವುದು. ಈ ನಿಟ್ಟಿನಲ್ಲಿ ಕಾರ್ಯಗತವಾಗಿದ್ದೇವೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT