ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಶಾಲೆಗಳ ಪ್ರಾರಂಭೋತ್ಸವ, ಮಕ್ಕಳಿಗೆ ಆತ್ಮೀಯ ಸ್ವಾಗತ

ಕಳೆಯಿತು ಬೇಸಿಗೆ... ಹೋಗೋಣ ಶಾಲೆಗೆ
Published 31 ಮೇ 2023, 11:21 IST
Last Updated 31 ಮೇ 2023, 11:21 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಬೇಸಿಗೆ ರಜೆ ಬಳಿಕ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಆರಂಭವಾಗಿದ್ದು ಬುಧವಾರ ವಿದ್ಯಾರ್ಥಿಗಳು ಉತ್ಸಾಹದಿಂದ ಶಾಲೆಗೆ ಮರಳಿದರು.

ನಗರದ ಬಸವನಹಳ್ಳಿಯ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಪಾ‌ಠಶಾಲೆ, ಆಜಾದ್‌ ಪಾರ್ಕ್‌ನ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಕರ್ನಾಟಕ ಪಬ್ಲಿಕ್ ಶಾಲೆ ಸೇರಿದಂತೆ ಜಿಲ್ಲೆಯಾದ್ಯಂತ ವಿವಿಧೆಡೆ ಶಾಲೆಗಳಿಗೆ ಸುಣ್ಣ–ಬಣ್ಣ ಬಳಿದು ಮಾವಿನ ತಳಿರು ತೋರಣ ಕಟ್ಟಿ ಸಿಂಗಾರಗೊಳಿಸಿದ್ದರು. ಶಾಲೆಗೆ ಬಂದ ಮಕ್ಕಳನ್ನು ಶಿಕ್ಷಕರು ಗುಲಾಬಿಯೊಂದಿಗೆ ಸಿಹಿ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.

ಪ್ರವಾಸ, ಸಂಬಂಧಿಕರ ಮನೆಗಳಲ್ಲಿ ಇದ್ದು ಬೇಸಿಗೆ ರಜೆ ದಿನಗಳನ್ನು ಅನುಭವಿಸಿದ್ದ ವಿದ್ಯಾರ್ಥಿಗಳು ಸಹಪಾಠಿಗಳೊಂದಿಗೆ ಶಾಲಾ ತರಗತಿಗಳಿಗೆ ಹಾಜರಾಗಿ ಸಂಭ್ರಮಪಟ್ಟರು. ಆರಂಭದ ದಿನವಾದ್ದರಿಂದ ಕೆಲ ಶಾಲೆಗಳಲ್ಲಿ ಮಕ್ಕಳ ಕಲರವ ಇತ್ತು. ಕೆಲವೆಡೆ ಸಂಖ್ಯೆ ಕಡಿಮೆ ಇತ್ತು.

ಶಾಲೆಗೆ ಮರಳಿದ ಮಕ್ಕಳನ್ನು ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯವರು ಗುಲಾಬಿ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು. ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಣೆ ಮಾಡಲಾಯಿತು. ಮೊದಲ ದಿನವೇ ಶಾಲೆಗೆ 50ಕ್ಕೂ ಅಧಿಕ ಮಕ್ಕಳು ಹಾಜರಾಗಿದ್ದಾರೆ. ಮಧ್ಯಾಹ್ನದ ಊಟಕ್ಕೆ ಪಾಯಸ(ಕೀರು) ಅನ್ನ, ಸಾಂಬರ್ ನೀಡಲಾಯಿತು ಎಂದು ಬಸವನಹಳ್ಳಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ ಮುಖ್ಯಶಿಕ್ಷಕ ಎಚ್‌.ಕೆ.ಪ್ರಭಾಕರ್ ‘ಪ‍್ರಜಾವಾಣಿ’ಗೆ ತಿಳಿಸಿದರು.

ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ ತೇರ್ಗಡೆಯಾದವರೂ ಸೇರಿ 90 ಮಕ್ಕಳಿದ್ದಾರೆ. ಕರ್ತಿಕೆರೆ, ಗೌಡನಹಳ್ಳಿ, ಮಲ್ಲೇದೇವರಹಳ್ಳಿ ಸಹಿತ ಸುತ್ತಮತ್ತಲ ಹಳ್ಳಿಯ ಮಕ್ಕಳು ಇಲ್ಲಿಗೆ ಬರುತ್ತಾರೆ. ದಾಖಲಾತಿ ಆರಂಭವಾಗಿದೆ ಮಕ್ಕಳ ಸಂಖ್ಯೆ ಅಧಿಕವಾಗಲಿದೆ ಎನ್ನುತ್ತಾರೆ ಬೇಲೂರು ರಸ್ತೆಯ ಕರ್ನಾಟಕ ಪ್ಲಬಿಕ್‌ ಶಾಲೆಯ ಮುಖ್ಯಶಿಕ್ಷಕಿ ಸಿ.ಎಸ್.ಪ‍್ರೇಮಾ.

ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದ ಬಳಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಿಸಿದರು. ಮುಖ್ಯಶಿಕ್ಷಕಿ ನಾಗವೇಣಿ ಇದ್ದಾರೆ
ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದ ಬಳಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಿಸಿದರು. ಮುಖ್ಯಶಿಕ್ಷಕಿ ನಾಗವೇಣಿ ಇದ್ದಾರೆ
ಚಿಕ್ಕಮಗಳೂರಿನ ಬಸವನಹಳ್ಳಿಯ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯೊಳಗೆ ಮಕ್ಕಳು ಹಾಜರಾಗುತ್ತಿರುವುದು (ಎ.ಎನ್‌.ಮೂರ್ತಿ ಪ್ರಜಾವಾಣಿ ಚಿತ್ರ)
ಚಿಕ್ಕಮಗಳೂರಿನ ಬಸವನಹಳ್ಳಿಯ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯೊಳಗೆ ಮಕ್ಕಳು ಹಾಜರಾಗುತ್ತಿರುವುದು (ಎ.ಎನ್‌.ಮೂರ್ತಿ ಪ್ರಜಾವಾಣಿ ಚಿತ್ರ)

Quote - ಮೊದಲ ದಿನವೇ ಸಹಪಾಠಿಗಳೊಂದಿಗೆ ಶಾಲೆಗೆ ಬಂದಿರುವುದು ಖುಷಿ ಇದೆ. ಶಿಕ್ಷಕರು ಪಠ್ಯಪುಸ್ತಕಗಳನ್ನು ವಿತರಿಸಿದ್ದಾರೆ. ಚೆನ್ನಾಗಿ ಓದಿ ಉತ್ತಮ ಅಂಕದೊಂದಿಗೆ ತೇರ್ಗಡೆಯಾಗುತ್ತೇನೆ. ಉನ್ನತ ಅಧಿಕಾರಿಯಾಗುವ ಕನಸು ಇದೆ ಬಿಂದು ಏಳನೇ ತರಗತಿ ವಿದ್ಯಾರ್ಥಿನಿ

Cut-off box - ‘ಶಾಲೆಗಳಲ್ಲಿ ಹಬ್ಬದ ವಾತಾವರಣ’ ‘ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಸೇರಿ ಒಟ್ಟು 315 ಸರ್ಕಾರಿ ಶಾಲೆಗಳಿವೆ. 24 ಸರ್ಕಾರಿ ಹಾಗೂ 28 ಅನುದಾನಿತ ಪ್ರೌಢ ಶಾಲೆಗಳಿವೆ. ಶಾಲೆಗಳಿಗೆ ಈಗಾಗಲೇ ಪಠ್ಯಪುಸ್ತಕ ಸಮವಸ್ತ್ರ ಪೂರೈಕೆ ಮಾಡಲಾಗಿದೆ. ಶೌಚಾಲಯ ಕೊಠಡಿ ಸಹಿತ ಮೂಲಸೌಕರ್ಯ ಕೊರತೆ ನೀಗಿಸಲಾಗಿದೆ. ಮೊದಲ ದಿನ ಶಾಲೆಗಳಲ್ಲಿ ಹಬ್ಬದ ವಾತಾವರಣ ಇದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಆರ್.ಮಂಜುನಾಥ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT