ಶನಿವಾರ, ಅಕ್ಟೋಬರ್ 1, 2022
20 °C
lಗಾಳಿಗೆ ಉರುಳಿ ಬೀಳುತ್ತಿರುವ ಮರ lಹದಗೆಡುತ್ತಿರುವ ರಸ್ತೆ lಅಲ್ಲಲ್ಲಿ ಭೂ ಕುಸಿತದ ಭೀತಿ lಪರಿಹಾರಕ್ಕೆ ಮೊರೆ

ಮುಂದುವರಿದ ಮಳೆ: 666 ಮನೆಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಹಾಗೂ ಗಾಳಿ ಮುಂದುವರಿದಿದ್ದು, ಹಾನಿ ಪ್ರಮಾಣ ಹೆಚ್ಚಾಗಿದೆ. ಸಾವು–ನೋವು ಸಂಭವಿಸಿವೆ. 

ಜಿಲ್ಲೆಯಲ್ಲಿ ಬುಧವಾರ 42 ಮನೆಗಳು ಕುಸಿದಿವೆ. 78 ವಿದ್ಯುತ್‌ ಕಂಬಗಳು ಮುರಿದಿವೆ.

ಸುಮಾರು 3.5 ಕಿ.ಮೀ ರಸ್ತೆ , ನಾಲ್ಕು ಸೇತುವೆಗಳು ಹಾಳಾಗಿವೆ. 1.56 ಕಿ.ಮೀ ವಿದ್ಯುತ್‌ ಮಾರ್ಗದ ತಂತಿ ಹಾಳಾಗಿದೆ.

ಚಿಕ್ಕಮಗಳೂರು ತಾಲ್ಲೂಕಿನಲ್ಲಿ 9 ಮನೆಗಳು ಹಾನಿಯಾಗಿವೆ. ಕಲ್ದೊಡ್ಡಿಯ ಯಶೋಧಾ, ಮುಗುಳವಳ್ಳಿಯ ದೊಡ್ಡಯ್ಯ, ತಗಡೂರಿನ ಜ್ಯೋತಿ, ಹವ್ವಳ್ಳಿಯ ವಿಶ್ವನಾಥ್‌, ಕಾಳಮ್ಮ, ಕೆಳಗೂರಿನ ಉಮೇಶ, ಹಾಂದಿಯ ಉದ್ದಯ್ಯ, ಅಪ್ಪು ಮೇಸ್ತ್ರಿ, ಮಲ್ಲಂದೂರಿನ ಮಂಜುನಾಥ ಅವರ ಮನೆಗಳು ಹಾನಿಯಾಗಿವೆ.

ಕೊಟ್ಟಿಗೆಹಾರ– 9.8, ಕಮ್ಮರಡಿ– 9, ಬಿಳ್ಳೂರು– 7.9, ಹೊಸಕೆರೆ– 6.7, ಕೆರೆಕಟ್ಟೆ– 6.4, ಕಿಗ್ಗಾ– 6.2, ಹಿರೇಬೈಲು– 6,ಜಾವಳಿ– 5.8, ಕಳಸ– 5.7ಗೋಣಿಬೀಡು, ಶೃಂಗೇರಿ– 5.6 ಜಯಪುರ– 5.2, ಮೂಡಿಗೆರೆ– 4.7, ಮೇಗರಮಕ್ಕಿ– 3.9 ಸೆಂ.ಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಜೂನ್‌ 1ರಿಂದ ಈವರೆಗೆ 666 ಮನೆಗಳು, 23 ಗುಡಿಸಲು ಹಾನಿಯಾಗಿವೆ.

ಬಿದ್ದ ವಿದ್ಯುತ್ ಕಂಬ

ಕೊಪ್ಪ: ತಾಲ್ಲೂಕಿನಲ್ಲಿ ಬುಧವಾರ ಗಾಳಿ ಸಹಿತ ಮಳೆಯಾಗಿದ್ದು, ಪಟ್ಟಣದ ಮೇಲಿನಪೇಟೆ ನಿವಾಸಿ ಶೇಖರ್ ಎಂಬುವರ ಮನೆ ಮೇಲೆ ಮರಬಿದ್ದು ಮನೆಗೆ ಹಾನಿಯಾಗಿದೆ.

ಭಾರಿ ಗಾಳಿ ಮಳೆಯಿಂದಾಗಿ ಕೊಪ್ಪದಲ್ಲಿ 2 ವಿದ್ಯುತ್ ಕಂಬ, ಜಯಪುರ ಭಾಗದಲ್ಲಿ 12 ವಿದ್ಯುತ್ ಕಂಬ, ಹರಿಹರಪುರ ಭಾಗದಲ್ಲಿ 10 ವಿದ್ಯುತ್ ಕಂಬಗಳು ತುಂಡಾಗಿವೆ. ಕಮ್ಮರಡಿಯಲ್ಲಿ ಎರಡು ವಿದ್ಯುತ್ ಪರಿವರ್ತಕಗಳು ನೆಲಕ್ಕುರುಳಿವೆ. ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ತೆರಳಿ, ದುರಸ್ತಿ ಕಾರ್ಯಾಚರಣೆ ಆರಂಭಿಸಿದ್ದರು.

ತಾಲ್ಲೂಕಿನ ಬಿ.ಜಿ.ಕಟ್ಟೆಯಲ್ಲಿ ಉತ್ತಮೇಶ್ವರ ಕಡೆಗೆ ಹೋಗುವ ಮಾರ್ಗ ಮಧ್ಯಯಲ್ಲಿರುವ ಸೀತಾನದಿ ಸೇತುವೆ ತಡೆಗೋಡೆ ಮುರಿದು ಬಿದ್ದಿದೆ.

ಕೊಪ್ಪದಲ್ಲಿ 1.6 ಸೆಂ.ಮೀ, ಹರಿಹರಪುರದಲ್ಲಿ 2 ಸೆಂ.ಮೀ, ಜಯಪುರದಲ್ಲಿ 5.2 ಸೆಂ.ಮೀ, ಬಸರೀಕಟ್ಟೆಯಲ್ಲಿ 3.31 ಸೆಂ.ಮೀ, ಕಮ್ಮರಡಿಯಲ್ಲಿ 9.02 ಸೆಂ.ಮೀಟರ್ ಮಳೆಯಾಗಿದೆ.

ಮಳೆ ಆರ್ಭಟ

ಕಳಸ: ತಾಲ್ಲೂಕಿನಲ್ಲಿ ಮಳೆ ಆರ್ಭಟ ಮುಂದುವರಿದಿದ್ದು ಜನಜೀವನ ಅಸ್ತವ್ಯಸ್ತ ಆಗಿದೆ.

ಬುಧವಾರ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ತೋಟಗಳಲ್ಲಿ ಕಾರ್ಮಿಕರಿಗೆ ರಜೆ ಘೋಷಣೆ ಮಾಡಲಾಗಿತ್ತು. ಭದ್ರಾ ಮತ್ತು ಉಪನದಿ, ಹಳ್ಳಗಳು ತುಂಬಿ ಹರಿಯುತ್ತಿವೆ. ಸಂಸೆ ಗ್ರಾಮದ ಕಳಕೋಡಿನಲ್ಲಿ ಮರವೊಂದು ಮನೆಯ ಮೇಲೆ ಬಿದ್ದಿದೆ.
ಕಾರ್ಮಿಕ ಭಾಸ್ಕರ ಅವರ ಮನೆಯ ಮೇಲೆ ಮರ ಬಿದ್ದು ಹಾನಿಗೀಡಾಗಿದೆ. ಮನೆಯವರು ಅಪಾಯದಿಂದ ಪಾರಾಗಿದ್ದಾರೆ.

ಮನೆ ಕುಸಿತ

ಆಲ್ದೂರು: ಆಲ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಳೆಖಾನ್ ಗ್ರಾಮದ ಮಂಜಯ್ಯ ಹಾಗೂ ಕೂದುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಳವಾಸೆ ಗ್ರಾಮದ ರತ್ನಸಂದೀಪ್ ಅವರ ಮನೆಗಳು ಕುಸಿತವಾಗಿವೆ. 

ಕೆಳಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಂದಿ ಗ್ರಾಮದ ದೇವಿಗುಡ್ಡದಲ್ಲಿ ಉದ್ದಯ್ಯ ಎಂಬುವರ ಮನೆ ಕುಸಿದಿದೆ. ಇಲ್ಲಿನ ಮಾಣಿ ಮಕ್ಕಿ ಗ್ರಾಮದ ಕಾವ್ಯ ಉಮೇಶ್ ಅವರ ಮನೆ ಕುಸಿದಿದೆ. ಮನೆ ಕುಸಿತ  ಸಂದರ್ಭ ಸ್ಥಳೀಯರಾದ ಕಿರಣ್ ಮತ್ತು ದಿನೇಶ್ ರಕ್ಷಣೆಗೆ ನೆರವಾದರು. ಬಣಕಲ್ ಸಮೀಪದ ಬಿ.ಹೊಸಹಳ್ಳಿಯ ಭಾರತೀಬೈಲ್ ಮೀನಾಕ್ಷಿ ಅವರ ಮನೆಯ ಚಾವಣಿಗೆ ಹಾನಿಯಾಗಿದೆ. 

ಚಾವಣಿಗೆ ಹಾನಿ

ಕೊಟ್ಟಿಗೆಹಾರ: ಕೊಟ್ಟಿಗೆಹಾರ, ಬಣಕಲ್, ಬಾಳೂರು ಸುತ್ತಮುತ್ತ ಮನೆಗಳು ಕುಸಿದಿವೆ.
ಬಣಕಲ್ ಗ್ರಾಮ ಪಂಚಾಯಿತಿಯ ಕುವೆಂಪು ನಗರದ ಅಪ್ಪಿ ಎಂಬುವರ ಮನೆ ಕುಸಿದು ಬಿದ್ದಿದೆ. ತ್ರಿಪುರ ಗ್ರಾಮ ಪಂಚಾಯಿತಿಯ ಪಟ್ಟದೂರು ಗ್ರಾಮದ ಜಯಂತಿ ಮಂಜುನಾಥ್ ಎಂಬುವರ ಮನೆಗೆ ಹಾನಿಯಾಗಿದೆ. ಅಲ್ಲಲ್ಲಿ ಮರಗಳು ಧರೆಗುರುಳಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಗ್ರಾಮಸ್ಥರು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ.

ಕೊಟ್ಟಿಗೆಹಾರ ಸಮೀಪದ ಬಿನ್ನಡಿ ಗ್ರಾಮದ ಸಂದೇಶ್ ಜಯಶೀಲ ಮನೆ ಕುಸಿದು ಬಿದ್ದಿದೆ. ಮತ್ತಿಕಟ್ಟೆಯಲ್ಲಿ ರಸ್ತೆಗೆ ಮರ ಬಿದ್ದು, ಸಂಚಾರಕ್ಕೆ ಅಡಚಣೆಯಾಯಿತು. ಬಿಳಗಲಿ ಗ್ರಾಮದ ಪದ್ಮಾವತಿ ಎಂಬುವರ ಮನೆ ಕುಸಿದು ಬಿದ್ದಿದೆ. ಚಕ್ಕಮಕ್ಕಿಯ ಹರ್ಷವರ್ಧನ್ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಬಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಾರತೀಬೈಲ್ ನಿವಾಸಿ ಮೀನಾಕ್ಷಿ ಮನೆಯ ಚಾವಣಿ ಕುಸಿದಿದೆ. 

ದನ ಸಾವು

ನರಸಿಂಹರಾಜಪುರ: ತಾಲ್ಲೂಕಿನ ಸಿಂಸೆ ಗ್ರಾಮದ ಕೆ.ಟಿ.ಚಂದ್ರಶೇಖರ್ ಎಂಬುವರ ದನದ ಕೊಟ್ಟಿಗೆ ಮಂಗಳವಾರ ರಾತ್ರಿ  ಬಿದ್ದು ದನ ಮೃತಪಟ್ಟಿದೆ.

ಸೀತೂರು ಅನಂತ ಪದ್ಮನಾಭ ಮನೆಯ ಮೇಲೆ ಮರ ಉರುಳಿಬಿದ್ದು ಹೆಂಚು, ಶೀಟು ಪುಡಿಯಾಗಿದೆ. ಕಾನೂರಿನ ದುದ್ರ ಎಸ್ಟೇಟ್ ನಲ್ಲಿ ತೆಂಗಿನಮರ ಮನೆಯ ಮೇಲೆ ಬಿದ್ದು, ಹಾನಿಯಾಗಿದೆ. ನಾಗಲಾಪುರದ ಹಿಳುವಳ್ಳಿ ಗ್ರಾಮದ ಜೈಲ್ ರಸ್ತೆಯ ಪುಟ್ಟಮ್ಮ ಎಂಬುವರ ಮನೆಯ ಹಿಂಭಾಗದ ಗೋಡೆ ಕುಸಿದು ಬಿದ್ದಿದೆ.

ಮರದ ಕೊಂಬೆಗಳು ಬಿದ್ದು ವಿದ್ಯುತ್ ಕಂಬ ಧರೆಗುರುಳಿವೆ. ವಗ್ಗಡೆಕಲ್ಲು, ದಬ್ಬುಗುಣಿ, ನಾಗರಮಕ್ಕಿ, ಪಟ್ಟಣದ ವ್ಯಾಪ್ತಿಯ ಮೇಲ್ಪಾಲ್, ಹೊಳೆಕೊಪ್ಪ, ದ್ವಾರಮಕ್ಕಿ ಬೆಮ್ಮೆನೆ, ಸುತ್ತ ಗ್ರಾಮದ ಮುಖ್ಯರಸ್ತೆಯಲ್ಲಿ ಒಂದು ಕೆವಿ ವಿದ್ಯುತ್ ಮಾರ್ಗದ ಮೇಲೆ ಮರದ ಕೊಂಬೆ ಬಿದ್ದು ವಿದ್ಯುತ್ ಕಂಬ ತುಂಡಾಗಿದೆ. ಒಟ್ಟು 35 ವಿದ್ಯುತ್ ಕಂಬ ಧರೆಗುರುಳಿಬಿದ್ದಿವೆ. ಬುಧವಾರ ಸಂಜೆ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು