’ನಮ್ಮ ಕಾಫಿ ಡೇ, ನಾನು ಸಿದ್ಧಾರ್ಥ‘: ಷೇರು ಕುಸಿತ ತಡೆಯಲು ಅಭಿಯಾನ ಶುರು

ಚಿಕ್ಕಮಗಳೂರು: ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ ಹೆಗ್ಡೆ ಅವರ ಸಾವಿನ ನಂತರ ಕಾಫಿ ಡೇ ಷೇರು ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಇದನ್ನು ತಡೆಯುವುದಕ್ಕಾಗಿ ಕಾಫಿ ನಾಡು ಚಿಕ್ಕಮಗಳೂರಿನ ಯುವಕರು ಅಭಿಯಾನವೊಂದು ಪ್ರಾರಂಭಿಸಿದ್ದಾರೆ.
ಈ ಅಭಿಯಾನದ ಮೂಲಕ ‘ಸಾಮಾಜಿಕ ಜಾಲತಾಣಗಳಲ್ಲಿ ಷೇರು ಖರೀದಿಸುವಂತೆ’ ಮನವಿ ಮಾಡಲಾಗುತ್ತಿದೆ. ಚಿಕ್ಕಮಗಳೂರಿನ ‘ಟೀಮ್ ನಮ್ಮ ಹುಡ್ರು’ನಿಂದ ಈ ಅಭಿಯಾನ ಶುರುಮಾಡಿದ್ದಾರೆ.
‘ಸಾವಿರಾರು ಜನರಿಗೆ ಅನ್ನದಾತರಾದ ವಿ.ಜಿ ಸಿದ್ಧಾರ್ಥ್ ಅವರ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ Cafe coffee day ಷೇರುಗಳನ್ನು ಖರೀದಿಸುವ ಮೂಲಕ ಆದರ ಖ್ಯಾತಿಯನ್ನು ಉಳಿಸಿ ಬೆಳಸುವುದು ಭಾರತಿಯರಾದ ನಮ್ಮಲ್ಲೆರ ಆದ್ಯ ಕರ್ತವ್ಯ, ಆದ್ದರಿಂದ ‘ನಮ್ಮ ಕಾಫಿ ಡೇ, ನಾನು ಸಿದ್ಧಾರ್ಥ’ ಅಭಿಯಾನದಲ್ಲಿ ಭಾಗಿಯಾಗಿ ಸಾಧ್ಯವಾದಷ್ಟು ಷೇರು ಖರೀದಿಸಿ ಎಂದು ಮನವಿ. ಪ್ರತಿಯೊಬ್ಬರಿಗೂ ಆದಷ್ಟು ಸಂದೇಶ ತಲುಪಿಸಿ ಅಭಿಯಾನ ಯಶಸ್ವಿಗೊಳಿಸಿ’ ಎಂಬ ಅಡಿಬರಹದಲ್ಲಿ ಈ ಅಭಿಯಾನ ನಡೆಯುತ್ತಿದೆ.
‘ನಮ್ಮ ಕಾಫಿ ಡೇ.. ನಾನು ಸಿದ್ಧಾರ್ಥ.. ಕೈ ಜೋಡಿಸಿ.. ಅಭಿಯಾನ .. ಕಾಫಿ ಡೇ ಷೇರು ಕೊಂಡು ನಮ್ಮ ಘನತೆ ಎತ್ತಿ ಹಿಡಿಯೋಣ. ನಮ್ಮವರ ಋಣ ತೀರಿಸೋಣ’ ಎಂದು ಕಡಿದಾಳ್ ಸುದೀರ್ ಎಂಬುವವರು ತಮ್ಮ ಫೇಸ್ಬುಕ್ ಪುಟದಲ್ಲಿ ಪ್ರಕಟಿಸಿಕೊಂಡಿದ್ದಾರೆ. ಇದೇ ರೀತಿ ಸಾಕಷ್ಟು ಮಂದಿ ಷೇರು ಖರೀದಿಗಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದ್ದಾರೆ.
ಸಿದ್ದಾರ್ಥ ಅವರು ನಿಗೂಢವಾಗಿ ಕಾಣೆಯಾದ ಸುದ್ದಿ ಪ್ರಕಟಗೊಂಡ ದಿನದಂದು ಅವರ ಮಾಲೀಕತ್ವದ ಕಾಫಿ ಡೇ ಮತ್ತು ಎಸ್ಐಸಿಎಎಲ್ ಲಾಜಿಸ್ಟಿಕ್ ಸಂಸ್ಥೆಗಳ ಷೇರುಗಳು ಶೇ 20ರಷ್ಟು ಕುಸಿತ ಕಂಡಿತ್ತು.
ಮಂಗಳವಾರ ₹38.35 ಕುಸಿಯುವುದರೊಂದಿಗೆ ₹153.40 ಮೊತ್ತದಲ್ಲಿ ವಹಿವಾಟು ನಡೆಯಿತು. ಎಸ್ಐಸಿಎಎಲ್ನ ಷೇರು ದರ ₹72.35 ಆಗಿತ್ತು. ಒಂದೇ ದಿನ ₹18.05 (ಶೇ 19.97) ಕುಸಿದಿತ್ತು.
ಸಿದ್ಧಾರ್ಥ ಅವರ ಮೃತಪಟ್ಟ ದಿನವಾದ ಬುಧವಾರದಂದು ಷೇರು ವಹಿವಾಟಿನಲ್ಲಿ ಕಾಫಿ ಡೇ ಕಂಪನಿಯ ಷೇರುಗಳು ಶೇ.19.98ರಷ್ಟು ಕುಸಿದವು. ₹30.65 ಕುಸಿಯುವುದರೊಂದಿಗೆ ₹122.75 ಮೊತ್ತದಲ್ಲಿ ವಹಿವಾಟು ನಡೆಯಿತು. ಕಾಫಿ ಡೇಯ ಸಂಸ್ಥಾಪಕರೂ ಆಗಿರುವ ಸಿದ್ದಾರ್ಥ ಕಾಫಿ ಡೇ ಕಂಪನಿಯಲ್ಲಿ ಶೇ 32.75ರಷ್ಟು ಷೇರು ಹೊಂದಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.