ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸ ನೆಲೆಯ ಕನಕರಾಯನ ಗುಡ್ಡ

ಕನಕದಾಸರ ಕರೆಗೆ ಓಗೊಟ್ಟು ಬಂದ ಕನಕರಾಯ
Last Updated 7 ಆಗಸ್ಟ್ 2022, 7:38 IST
ಅಕ್ಷರ ಗಾತ್ರ

ಕಡೂರು: ಅರಸೀಕೆರೆ ಬಳಿಯ ಮಾಲೆಕಲ್ಲು ತಿರುಪತಿಯು ಕಡೂರಿಗೆ ಹತ್ತಿರದ ಗೋವಿಂದ ಕ್ಷೇತ್ರ. ಆದರೆ, ಪಟ್ಟಣದ ಸೆರಗಲ್ಲೇ ಕನಕರಾಯಸ್ವಾಮಿ ಹೆಸರಿನ ಶ್ರೀನಿವಾಸನೆಲೆಸಿರುವ ತಾಣವಿರುವುದು ತಾಲ್ಲೂಕಿನ ಬಹಳಷ್ಟು ಜನರಿಗೆ ತಿಳಿದಿಲ್ಲ.

ಈ ತಾಣವು ಪಟ್ಟಣದಿಂದ ಕೇವಲ ಒಂದೂವರೆ ಕಿ.ಮೀ. ಅಂತರದಲ್ಲಿ ಇದೆ. ಹೊಲ–ಗದ್ದೆಗಳ ನಡುವೆ ಬಂಡೆಯ ಮೇಲೆ ಮಂದಸ್ಮಿತ ಶ್ರೀನಿವಾಸನ ಸ್ವಯಂಭೂ ವಿಗ್ರಹವಿದೆ. ಇಲ್ಲಿ ಶ್ರೀನಿವಾಸ ದೇವರು ನೆಲೆಯಾಗಿರುವ ಪ್ರತೀತಿಯಿದೆ.

ಕನಕರು ಒಮ್ಮೆ ತಮ್ಮ ಸ್ವಗ್ರಾಮದಿಂದ ಉಡುಪಿಗೆ ಪಾದಯಾತ್ರೆ ಮಾಡಿಕೊಂಡು ಹೋಗುತ್ತಿದ್ದ ವೇಳೆ ರಾತ್ರಿಯಾಯಿತು. ಅವರು ನಿಂತ ಸ್ಥಳ ‍ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಕಲ್ಲುಬಂಡೆಗಳ ಪ್ರದೇಶ. ರಾತ್ರಿ ಆದಿಕೇಶವನಿಗೆ ಪೂಜೆ ಮಾಡಿ ನೈವೇದ್ಯ ಸಮರ್ಪಿಸಿದ ನಂತರವೇ ತಾವು ಪ್ರಸಾದ ಸ್ವೀಕರಿಸುವುದು ಅವರ ನಿತ್ಯ ಅಭ್ಯಾಸ. ಆದರೆ, ಪೂಜೆ ಮಾಡಲು ಬಯಲು ಸೀಮೆಯ ಪ್ರದೇಶದಲ್ಲಿ ತಮ್ಮ ಆರಾಧ್ಯದೈವ ಆದಿಕೇಶವ ಸ್ವಾಮಿಯ ಪ್ರತೀಕವಿರಲಿಲ್ಲ. ಒಂದೆಡೆ ಕುಳಿತು ತಮ್ಮ ಕುಲದೈವ ಆದಿಕೇಶವ ಸ್ವಾಮಿಯನ್ನು ಭಕ್ತಿಯಿಂದ ಕರೆದರು. ಭಕ್ತಪರಾಧೀನನಾದ ಆದಿಕೇಶವ ತಿರುಪತಿ ವೆಂಕಟರಮಣ ಸ್ವಾಮಿ ರೂಪದಲ್ಲಿ ಕನಕರ ಭಕ್ತಿಗೆ ಓಗೊಟ್ಟು ಅಲ್ಲಿದ್ದ ಬಂಡೆಯ ಮೇಲೆ ಮೂಡಿದರು. ಭಕ್ತಿಯಿಂದ ಕನಕರು ಪೂಜಿಸಿದರು. ಕರೆಗೆ ಓಡೋಡಿ ಬಂದ ತಿಮ್ಮಪ್ಪ ಕನಕರಾಯನೆಂದೇ ಪ್ರಸಿದ್ಧಿಯಾದ. ಅ ಬಂಡೆಗಳ ಸಮೂಹ ಕನಕರಾಯನ ಗುಡ್ಡ, ಕನಕಪ್ಪನ ಗುಡ್ಡವೆಂದೇ ಖ್ಯಾತಿ ಪಡೆಯಿತು ಎಂಬುದು ಇಲ್ಲಿನ ಬಗ್ಗೆ ಜನಜನಿತವಾಗಿರುವ ಮಾತು.

ಶಂಖ ಚಕ್ರಧಾರಿಯಾಗಿ ವರದ ಹಸ್ತ ತೋರುತ್ತಿರುವ 6 ಅಡಿ ಎತ್ತರದ ಶ್ರೀನಿವಾಸನ ವಿಗ್ರಹ ಮನಮೋಹಕ. ಕಡೂರಿನ ಕುರುಬ ಸಮುದಾಯದವರಿಗೆ ಇಲ್ಲಿನ ತಿಮ್ಮಪ್ಪ ಆರಾಧ್ಯದೈವವೂ ಹೌದು. ವರ್ಷಕ್ಕೊಮ್ಮೆ ಕನಕ ಜಯಂತಿಯ ಸಮಯದಲ್ಲಿ ಕಡೂರಿನ ಮಾಧ್ವ ಸಮುದಾಯದವರು ಕನಕರಾಯನ ಗುಡ್ಡಕ್ಕೆ ಹೋಗಿ ಶ್ರೀನಿವಾಸನಿಗೆ ವಿಶೇಷ ಪೂಜೆ, ಅಭಿಷೇಕ ನಡೆಸುತ್ತಾರೆ. ಇತ್ತೀಚೆಗೆ ಕೂಡ್ಲಿ ಆರ್ಯ ಅಕ್ಷೋಭ್ಯ ತೀರ್ಥ ಮಠದ ರಘು ವಿಜಯ ತೀರ್ಥ ಸ್ವಾಮೀಜಿ ಮತ್ತು ಉತ್ತರಾದಿ ಮಠದ ಸತ್ಯಾತ್ಮತೀರ್ಥ ಸ್ವಾಮೀಜಿ ಬಂದು ಇಲ್ಲಿ ಸಂಸ್ಥಾನ ಪೂಜೆ ನೆರವೇರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT