ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಡಾನೆ ಸೆರೆಗೆ ಬಲಿಷ್ಠ ತಂಡ: ಅಧಿಕಾರಿಗಳ ತಯಾರಿ

ಕಾರ್ಯಾಚರಣೆ ಆರಂಭಿಸಲು ಅರಣ್ಯ ಇಲಾಖೆಯಿಂದ ತಯಾರಿ
Published 11 ಡಿಸೆಂಬರ್ 2023, 16:17 IST
Last Updated 11 ಡಿಸೆಂಬರ್ 2023, 16:17 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಸಾಕಾನೆ ಅರ್ಜುನ ಸಾವಿನ ಬಳಿಕ ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಮಾನಸಿಕವಾಗಿ ಕುಗ್ಗಿರುವ ಕಾರ್ಯಾಚರಣೆ ‌ತಂಡವನ್ನು ಪುಟಿದೇಳಿಸಿ ಬಲಿಷ್ಠ ತಂಡ ಕಟ್ಟುವ ಸವಾಲು ಅಧಿಕಾರಿಗಳ ಮುಂದಿದ್ದು, ತಯಾರಿ ನಡೆಸುತ್ತಿದ್ದಾರೆ.

ಜಿಲ್ಲೆಯಲ್ಲಿ ಆರು ಸಾಕಾನೆಗಳನ್ನು ಹಿಡಿದು ರೇಡಿಯೊ ಕಾಲರ್ ಅಳವಡಿಸಿ ಸ್ಥಳಾಂತರಿಸಲು ಸರ್ಕಾರ ಅನುಮತಿ ನೀಡಿದೆ. ಈ ಪೈಕಿ ಒಂದು ಆನೆಯನ್ನು ಮಾತ್ರ ಸೆರೆ ಹಿಡಿಯಲಾಗಿದೆ. ಇನ್ನೂ ಐದು ಆನೆ ಹಿಡಿದು ಸ್ಥಳಾಂತರಿಸುವ ಹೊಣೆ ಅರಣ್ಯ ಇಲಾಖೆ ಮೇಲಿದೆ.

ಆಲ್ದೂರು ಭಾಗದಲ್ಲಿ ಇಬ್ಬರ ಜೀವ ಬಲಿ ಪಡೆದ ಪುಂಡಾನೆ ಸೇರಿ ಐದು ಸಲಗಗಳನ್ನು ಹಿಡಿದು ಸ್ಥಳಾಂತರಿಸಬೇಕಿದೆ. ಅರ್ಜುನ ಆನೆ ಸಾವು ಮತ್ತು ಮೂಡಿಗೆರೆ ಭಾಗದಲ್ಲಿ ಕಾರ್ಯಾಚರಣೆ ವೇಳೆ ಕಾಡಾನೆಯೇ ಮೃತಪಟ್ಟಿರುವುದು ತಂಡ ಮಾನಸಿಕವಾಗಿ ಕುಗ್ಗಿಸಿದೆ.

ಸೆರೆ ಹಿಡಿಯಬೇಕು ಎಂದುಕೊಂಡಿರುವ ಐದು ಸಲಗಗಳು ಬಲಿಷ್ಠವಾಗಿದ್ದು, ಅವುಗಳನ್ನು ಸಕ್ರೈಬೈಲು ಶಿಬಿರದಲ್ಲಿರುವ ಸಾಕಾನೆಗಳ ಸಹಾಯದಿಂದ ಸೆರೆ ಹಿಡಿಯುವುದು ಕಷ್ಟ. ಆದ್ದರಿಂದ ಬಲಿಷ್ಠ ಸಾಕಾನೆಗಳ ತಂಡ ಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ.

‘ಅರ್ಜುನ ಸಾವು ಎಲ್ಲರಿಗೂ ನೋವು ತಂದಿದೆ. ಮುಂದಿನ  ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಎಲ್ಲಿಯೂ ಲೋಪದೋಷಗಳು ಆಗದಂತೆ ಎಚ್ಚರಿಕೆ ವಹಿಸಬೇಕಿದೆ. ಕಾರ್ಯಾಚರಣೆ ತಂಡಕ್ಕೆ ನುರಿತ ಸಿಬ್ಬಂದಿಯನ್ನು ನಿಯೋಜಿಸಬೇಕಿದೆ. ಎಲ್ಲಾ ರೀತಿಯ ಸಿದ್ಧತೆ ಪೂರ್ಣಗೊಂಡು ತಂಡ ಪರಿಪಕ್ವವಾದ ಬಳಿಕವೇ ಕಾರ್ಯಾಚರಣೆ ಆರಂಭಿಸಲಾಗುವುದು’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Quote - ಇನ್ನೂ ಐದು ಸಲಗ ಸೆರೆ ಹಿಡಿಯಬೇಕಿದ್ದು ಕಾರ್ಯಾಚರಣೆಗೆ ಸಶಕ್ತ ತಂಡ ಬೇಕಿದೆ. ತಯಾರಿ ನಡಯುತ್ತಿದ್ದು ಕೆಲವೇ ದಿನಗಳಲ್ಲಿ ಮತ್ತೆ ಕಾರ್ಯಾಚರಣೆ ಆರಂಭವಾಗಲಿದೆ –ರಮೇಶ್ ಬಾಬು ಉಪಅರಣ್ಯ ಸಂರಕ್ಷಣಾಧಿಕಾರಿ

Cut-off box - ಅಭಿಮನ್ಯು ಕರೆಸಲು ಪ್ರಯತ್ನ ಕಾಡಾನೆ ಹಿಡಿಯುವ ಕಾರ್ಯಾಚರಣೆಗೆ ಅಭಿಮನ್ಯು ಆನೆ ಕಳಹಿಸುವಂತೆ ಅಧಿಕಾರಿಗಳು ಹಿಡಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಸಣ್ಣ ಸಾಕಾನೆಗಳಿಂದ ಸಲಗಗಳ ಸೆರೆ ಕಾರ್ಯಾಚರಣೆ ನಡೆಸುವುದು ಕಷ್ಟ. ಅಭಿಮನ್ಯು ರೀತಿಯ ಬಲಿಷ್ಠ ಆನೆಗಳೇ ಬೇಕು ಎಂದಿದ್ದಾರೆ. ರಾಜ್ಯದಲ್ಲಿರುವ ಸಾಕಾನೆಗಳಲ್ಲಿ ಅಭಿಮನ್ಯು ಅತ್ಯಂತ ಬಲಿಷ್ಠ ಆನೆ ಎಂದೇ ಗುರಿತಿಸಲಾಗಿದೆ. ಆ ಆನೆಯನ್ನು ಕಾರ್ಯಾಚರಣೆಗೆ ಕಳುಹಿಸುವ ಸಾಧ್ಯತೆ ಕಡಿಕೆ ಎಂದು ತಜ್ಞರು ಹೇಳುತ್ತಾರೆ.

Cut-off box - ಕಣ್ಣಿಗೆ ಬೀಳದ ಪುಂಡಾನೆ ಇನ್ನೊಂದೆಡೆ ಆಲ್ದೂರು ಬಳಿ ಇಬ್ಬರನ್ನು ಬಲಿ ಪಡೆದ ಪುಂಡಾನೆ ಒಂದು ತಿಂಗಳಿಂದ ಅರಣ್ಯ ಇಲಾಖೆ ಸಿಬ್ಬಂದಿಯ ಕಣ್ಣಿಗೆ ಬಿದ್ದಿಲ್ಲ. ಈ ಆನೆ ಸೆರೆ ಹಿಡಿಯಲೇಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅನುಮತಿ ಪಡೆದಿದ್ದಾರೆ. ಈ ಆನೆ ಪತ್ತೆಗೆ ನೂರು ಟ್ರ್ಯಾಪ್ ಕ್ಯಾಮೆರಾಗಳನ್ನೂ ಅಳವಡಿಸಿದ್ದಾರೆ. ಆ ಕ್ಯಾಮೆರಾಗಳ ಕಣ್ಣಿಗು ಈ ಪುಂಡಾನೆ ಸೆರೆ ಸಿಕ್ಕಿಲ್ಲ.  ಸದ್ಯಕ್ಕೆ ಬೇರೆ ಆನೆಗಳನ್ನು ಹಿಡಿದು ಸ್ಥಳಾಂತರ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT