ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‍ತರೀಕೆರೆ: ‘ಪಿಎಂ ಉಷಾ’ ಅನುದಾನ ‍‍ಪಡೆದ ಹೆಮ್ಮೆ ಈ ಕಾಲೇಜಿಗೆ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪದವಿ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ
Published 4 ಮೇ 2024, 9:01 IST
Last Updated 4 ಮೇ 2024, 9:01 IST
ಅಕ್ಷರ ಗಾತ್ರ

ತರೀಕೆರೆ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಿದೆ.

ನ್ಯಾಕ್‍ನಿಂದ ‘ಬಿ++’ ಮಾನ್ಯತೆ ಪಡೆದಿರುವ ಜೊತೆಗೆ ಕೇಂದ್ರ ಸರ್ಕಾರದಿಂದ ‘ಪಿಎಂ ಉಷಾ’ ಯೋಜನೆಯಡಿ ರಾಜ್ಯದ 21 ಕಾಲೇಜುಗಳ ಪೈಕಿ ತರೀಕೆರೆ ಕಾಲೇಜು ಆಯ್ಕೆಯಾಗಿ ಅಭಿವೃದ್ಧಿಗಾಗಿ ₹5 ಕೋಟಿ ಅನುದಾನಕ್ಕೆ ಭಾಜನವಾಗಿರುವುದು ಹೆಮ್ಮೆ ತಂದಿದೆ.

2007ರ ಮೇ 23ರಂದು ‌ಪ್ರಾರಂಭವಾದ ಕಾಲೇಜು ಆರಂಭದ ದಿನಗಳಲ್ಲಿ ಲೋಕೋಪಯೋಗಿ ಕಟ್ಟಡ ಮತ್ತು ತುದೀಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತರಗತಿಗಳು ನಡೆಯುತ್ತಿದ್ದವು. ನಂತರ, 2018ರಲ್ಲಿ ತರಗತಿಗಳು ನೂತನ ಕಟ್ಟಡದಲ್ಲಿ ನಡೆಯುತ್ತಿದೆ.

ಬಿ.ಎ. ವಿಭಾಗದಲ್ಲಿ ಕನ್ನಡ ಐಚ್ಛಿಕ, ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಇಂಗ್ಲಿಷ್ ಐಚ್ಛಿಕ, ಅರ್ಥಶಾಸ್ತ್ರ, ಬಿ.ಎಸ್ಸಿ ವಿಭಾಗದಲ್ಲಿ ಭೌತವಿಜ್ಞಾನ, ಗಣಿತಶಾಸ್ತ್ರ, ಕಂಪ್ಯೂಟರ್‌ ಸೈನ್ಸ್. ಬಿ.ಕಾಂ. ವಿಭಾಗದಲ್ಲಿ ಅಕೌಂಟೆನ್ಸಿ, ಹ್ಯೂಮನ್‍ ರಿಸೋರ್ಸ್ ಮ್ಯಾನೇಜ್‌ಮೆಂಟ್ ಮತ್ತು ಮಾರ್ಕೆಟಿಂಗ್ ಸ್ಪೇಷಲೈಸೇಷನ್ ವಿಷಯಗಳ ಜೊತೆಗೆ ಜನರಲ್‍ ಬಿಬಿಎ, ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ಉರ್ದು ವಿಷಯಗಳು ಇವೆ.

ಹೊಸ ಕೋರ್ಸ್‌ಗಳು: ಬಿಸಿಎ ಪದವಿ ‘ಎಐಸಿಟಿಇ’ಯಿಂದ ಮಾನ್ಯತೆ ಪಡೆದಿದೆ. ಬಿಬಿಎ ಪದವಿಯಲ್ಲಿ ಪ್ರವಾಸೋದ್ಯಮ ಮತ್ತು ಆತಿಥ್ಯ ನಿರ್ವಹಣಾ ವಿಜ್ಞಾನ ವಿಷಯ ಪ್ರಾರಂಭಿಸಲಾಗಿದೆ.

ಕಾಲೇಜಿನಲ್ಲಿ 15 ಕಾಯಂ ಹಾಗೂ 21 ಅತಿಥಿ ಉಪನ್ಯಾಸಕರು ಇದ್ದಾರೆ. ಸುಸಜ್ಜಿತ ಕಟ್ಟಡ, 20 ಸಾವಿರ ಪುಸ್ತಕಗಳನ್ನೊಳಗೊಂಡ ಡಿಜಿಟಲ್ ಗ್ರಂಥಾಲಯ, ಸಾಮಾಜಿಕ ಚಟುವಟಿಕೆಗಳಾದ ಎನ್‍ಎಸ್‍ಎಸ್‌, ರೆಡ್‍ ರಿಬ್ಬನ್, ರೆಡ್‍ ಕ್ರಾಸ್, ರೇಂಜರ್ಸ್ ಮತ್ತು ರೋವರ್ಸ್, ಇಕೊ ಕ್ಲಬ್, ಇನ್ನೊವೇಟಿವ್ ಕ್ಲಬ್, ಪಾರಂಪರಿಕ ಮತ್ತು ಮಹಿಳಾ ಘಟಕ, ಅತ್ಯಾಧುನಿಕ ಜಿಮ್‌ ಸೌಲಭ್ಯ ಅಳವಡಿಸಲಾಗಿದೆ.

ವಿದ್ಯಾರ್ಥಿಗಳಿಗೆ ಪದವಿ ವ್ಯಾಸಂಗದ ಜೊತೆಗೆ ಐಎಎಸ್, ಕೆಎಎಸ್ ಮತ್ತು ಬ್ಯಾಂಕಿಂಗ್‍ಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ನೀಡಲಾಗುತ್ತಿದ್ದು, ಸ್ಪೋಕನ್‍ ಇಂಗ್ಲಿಷ್‍ ಮತ್ತು ಬೇಸಿಕ್‍ ಕಂಪ್ಯೂಟರ್‌ ಕ್ಲಾಸ್‍ಗಳನ್ನು ನಡೆಸಲಾಗುತ್ತಿದೆ.

ಕಾಲೇಜಿನಲ್ಲಿ ಒಟ್ಟು 16 ಕೊಠಡಿಗಳಿದ್ದು, ಒಂದು ಗ್ರಂಥಾಲಯ, ಪುರಸಭೆಯಿಂದ ಹೆಣ್ಣು ಮಕ್ಕಳಿಗೆ ನಿರ್ಮಾಣ ಮಾಡಿರುವ 2 ಪಿಂಕ್‍ ಶೌಚಾಲಯ, ವಿದ್ಯಾರ್ಥಿಗಳಿಗೆ 1, ಸಿಬ್ಬಂದಿಗೆ 4 ಶೌಚಾಲಯಗಳು ಇವೆ. 500 ಜನ ಕುಳಿತುಕೊಳ್ಳಬಹುದಾದ ಸಭಾಂಗಣವಿದ್ದು, ಸರ್ಕಾರದಿಂದ ಈಗಾಗಲೇ 5 ಕೊಠಡಿಗಳ ನಿರ್ಮಾಣಕ್ಕೆ ಕಾರ್ಯಾದೇಶವಾಗಿದ್ದು ಸದ್ಯದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ. ಮುಂದಿನ ಮೂರು ವರ್ಷಗಳಲ್ಲಿ 11 ಕೊಠಡಿಗಳು, ವಿಶಾಲವಾದ ಸಭಾಂಗಣ ನಿರ್ಮಾಣ ಮಾಡಲಾಗುದೆಂದು ತಿಳಿದು ಬಂದಿದೆ.

ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯುಸಿಯ ಉತ್ತಮ ಫಲಿತಾಂಶ ಬಂದಿದ್ದು ವಿದ್ಯಾರ್ಥಿಗಳ ಸಂಖ್ಯೆ 700 ದಾಟುವ ನಿರೀಕ್ಷೆ ಇದೆ.

ತರೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಸಜ್ಜಿತ ಕಟ್ಟಡ
ತರೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಸಜ್ಜಿತ ಕಟ್ಟಡ
ತರೀಕೆರೆ ಪುರಸಭೆಯಿಂದ ಕಾಲೇಜಿನ ವಿದ್ಯಾರ್ಥಿನಿಯರಿಗೆ ಅತ್ಯಾಧುನಿಕ ಪಿಂಕ್ ಟಾಯ್ಲೆಟ್ ನಿರ್ಮಿಸಿರುವುದು.
ತರೀಕೆರೆ ಪುರಸಭೆಯಿಂದ ಕಾಲೇಜಿನ ವಿದ್ಯಾರ್ಥಿನಿಯರಿಗೆ ಅತ್ಯಾಧುನಿಕ ಪಿಂಕ್ ಟಾಯ್ಲೆಟ್ ನಿರ್ಮಿಸಿರುವುದು.

‘ಕ್ರೀಡಾ ಚಟುವಟಿಕೆಗಳಿಗೆ ಅಗತ್ಯ ಕ್ರಮ’

ಕಾಲೇಜಿಗೆ ಸ್ವಂತ ಕಟ್ಟಡ ಕಟ್ಟಲು ನಿವೇಶನದ ಕೊರತೆ ಇತ್ತು. 2013ರಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಪತ್ರ ವ್ಯವಹರಿಸಿ ಇಲಾಖೆಯ ನಿಯಮಗಳ ಪ್ರಕಾರ ಕಾಲೇಜಿಗೆ ನಿವೇಶನ ಕೊಡಿಸಲಾಯಿತು. ನಂತರ ಸರ್ಕಾರದಿಂದ ಕೋಟ್ಯಾಂತರ ರೂಪಾಯಿ ಅನುದಾನ ಮಂಜೂರು ಮಾಡಿಸಿ ಕಟ್ಟಡ ನಿರ್ಮಿಸಿ ತಾಲ್ಲೂಕಿನ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ ಮಾಡಲಾಯಿತು. ಕಾಲೇಜಿಗೆ ಕ್ರೀಡಾಂಗಣದ ಕೊರತೆ ಇದ್ದು ಪಕ್ಕದಲ್ಲಿ ಅರಣ್ಯ ಇಲಾಖೆಯ ಜಾಗವಿದೆ. ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳನ್ನು ನಡೆಸಲು ಅವಕಾಶ ಕಲ್ಪಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದರು.

‘ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಿ’

ತರೀಕೆರೆ ತಾಲ್ಲೂಕಿನಲ್ಲಿರುವ ಏಕೈಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಾಗಿದ್ದು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಬೇಕಾದ ಎಲ್ಲ ಸೌಲಭ್ಯಗಳು ಲಭ್ಯವಿದೆ. ಪಿಎಚ್‍ಡಿ ಪಡೆದ ಅನುಭವಿ ಉಪನ್ಯಾಸಕರಿದ್ದು ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ವ್ಯಾಸಂಗಕ್ಕೆ ಬೇಕಾಗ ಉತ್ತಮ ವಾತಾವರಣವಿದ್ದು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಬೇಕು ಎಂದು ಕಾಲೇಜಿನ ಪ್ರಾಚಾರ್ಯ ಮಂಜುನಾಥ ಟಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT