ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘₹ 170.48 ಕೋಟಿ ಅನುದಾನಕ್ಕೆ ತಡೆ’

ಕೊಪ್ಪದಲ್ಲಿ ಶಾಸಕ ರಾಜೇಗೌಡ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ
Last Updated 10 ಅಕ್ಟೋಬರ್ 2020, 3:21 IST
ಅಕ್ಷರ ಗಾತ್ರ

ಕೊಪ್ಪ: ‘ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ₹ 170.48 ಕೋಟಿ ಮಂಜೂರು ಆಗಿತ್ತು. ಅದಕ್ಕೆ ಬಿಜೆಪಿ ಸರ್ಕಾರ ತಡೆಯುಂಟು ಮಾಡಿದೆ’ ಎಂದು ಶಾಸಕ ಟಿ.ಡಿ.ರಾಜೇಗೌಡ ಆರೋಪಿಸಿದರು.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಶೃಂಗೇರಿ ಕ್ಷೇತ್ರಕ್ಕೆ ಮಂಜೂರು ಆಗಿದ್ದ ಅನುದಾನವನ್ನು ಬಿಜೆಪಿ ಸರ್ಕಾರ ತಡೆ ಹಿಡಿದಿದೆ ಎಂದು ಆರೋಪಿಸಿ ಅವರು ತಾಲ್ಲೂಕು ಕಚೇರಿ ಎದುರು ಶುಕ್ರವಾರ ಹಮ್ಮಿಕೊಂಡ ಉಪವಾಸ ಸತ್ಯಾಗ್ರಹದಲ್ಲಿ ಮಾತನಾಡಿದರು.

‘ಕ್ಷೇತ್ರಕ್ಕೆ ತಂದಿದ್ದ ಅನುದಾನ ನನ್ನ ಮನೆಯದ್ದಲ್ಲ ಅಥವಾ ಜೀವರಾಜ್ ಅವರ ಮನೆಯದ್ದಲ್ಲ. ಇಲ್ಲಿನ ಬಡವರ, ಶ್ರಮಿಕರ ಶ್ರಮದ ಹಣ. ಮೂರು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದ ಜೀವರಾಜ್ ಅವರಿಗೆ ಕ್ಷೇತ್ರದ ಜನರೇನು ದ್ರೋಹ ಮಾಡಿದ್ದರು’ ಎಂದು ಪ್ರಶ್ನಿಸಿದರು.

‘ಅತಿವೃಷ್ಟಿಯಲ್ಲಿ ಕ್ಷೇತ್ರಕ್ಕೆ ₹ 343.92 ಕೋಟಿ ನಷ್ಟ ಉಂಟಾಗಿದೆ. ಆದರೆ, ಕೇವಲ ₹ 28.61 ಕೋಟಿ ಬಿಡುಗಡೆಯಾಗಿದೆ. ಹೀಗಾದರೆ, ಕ್ಷೇತ್ರದ ಅಭಿವೃದ್ಧಿ ಹೇಗೆ ಸಾಧ್ಯವಾಗುತ್ತದೆ. ಅಭಿವೃದ್ಧಿ ನಿರಂತರವಾಗಿ ಇರಬೇಕು. ಕಾಮಗಾರಿ ಪಟ್ಟಿ ಬಿಡುಗಡೆ ಮಾಡಲಿ ಎಂದು ಜೀವರಾಜ್ ಸವಾಲು ಹಾಕಿದ್ದರು, ಸಂದರ್ಭಕ್ಕಾಗಿ ಕಾದಿದ್ದೆ. ಇದೀಗ ಪಟ್ಟಿಯನ್ನು ಮುಖ್ಯಮಂತ್ರಿಗೆ ಕಳುಹಿಸುತ್ತೇನೆ’ ಎಂದರು.

ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿಲ್ಲ: ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಮಾತನಾಡಿ, ‘ಜನರ ಬದುಕನ್ನು ಸುಧಾರಿಸುವುದು ಕಾಂಗ್ರೆಸ್ ಪಕ್ಷದ ಉದ್ಧೇಶ. ಜನರ ಭಾವನೆಗಳನ್ನು ಕೆರಳಿಸುವುದು ಬಿಜೆಪಿ ಕೆಲಸ. ಜನವಿರೋಧಿ ನೀತಿಗಳನ್ನು ಬಿಜೆಪಿ ಜಾರಿಗೆ ತರುತ್ತಿದೆ. ರಾಜಕೀಯವಾಗಿ ಹಣಿಯಲು ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗಪಡಿಸಿಕೊಳ್ಳುತ್ತಿದೆ. ಪರಿಸರ ಸೂಕ್ಷ್ಮ ವಲಯ, ಕಸ್ತೂರಿ ರಂಗನ್ ವರದಿ, ಹುಲಿಯೋಜನೆ ಮಲೆನಾಡಿಗೆ ದುರಂತ, ಈ ಬಗ್ಗೆ ಬಿಜೆಪಿ ನಾಯಕರು ಚಕಾರವೆತ್ತುತ್ತಿಲ್ಲ’ ಎಂದು ಆರೋಪಿಸಿದರು.

ಕೆಪಿಸಿಸಿ ಮಾಧ್ಯಮ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ‘ರಾಜೇಗೌಡ ಅವರು 1 ವರ್ಷ 4 ತಿಂಗಳಲ್ಲಿ ಮಾಡಿದ್ದ ಕ್ಷೇತ್ರದ ಅಭಿವೃದ್ಧಿ ಬೇರೆ ಯಾವ ಶಾಸಕರೂ ಮಾಡಿಲ್ಲ. ಜೀವರಾಜ್ ಅವರು ಬಿಜೆಪಿ ನಾಯಕರ ಪ್ರಭಾವ ಬಳಸಿ, ಅನುದಾನ ತಡೆ ಹಿಡಿದಿದ್ದಾರೆ. ಇಲ್ಲ ಎಂದಾದಲ್ಲಿ ಅವರು ಹೇಳಿದ ಯಾವ ಸ್ಥಳಕ್ಕಾದರೂ ಬಂದು ಪ್ರಮಾಣ ಮಾಡಲು ನಾವು ಸಿದ್ಧರಿದ್ದೇವೆ’ ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಎಂ.ಸತೀಶ್, ಶೃಂಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರನಕೊಡಿಗೆ ನಟರಾಜ್, ಎನ್.ಆರ್.ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರುಬೈಲು ನಟರಾಜ್, ಜಿಲ್ಲಾ ಪಂಚಾಯಿತಿ ಸದಸ್ಯ ಸದಾಶಿವ, ಮುಖಂಡರಾದ ಅಸಗೋಡು ನಾಗೇಶ್, ನವೀನ್ ಮಾವಿನಕಟ್ಟೆ, ಅನ್ನಪೂರ್ಣ ನರೇಶ್, ಮೂರು ತಾಲ್ಲೂಕುಗಳ ಬ್ಲಾಕ್ ಕಾಂಗ್ರೆಸ್, ವಿವಿಧ ಘಟಕಗಳ ಪದಾಧಿಕಾರಿಗಳು, ರೈತ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT