ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

JCBM ಕಾಲೇಜು | ಮೂರು ದಶಕ, 450ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು

Published 4 ಸೆಪ್ಟೆಂಬರ್ 2024, 6:42 IST
Last Updated 4 ಸೆಪ್ಟೆಂಬರ್ 2024, 6:42 IST
ಅಕ್ಷರ ಗಾತ್ರ

ಶೃಂಗೇರಿ: ಆರ್ಥಿಕವಾಗಿ ಹಿಂದುಳಿದ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೃಂಗೇರಿಯ ಜೆ.ಸಿ.ಬಿ.ಎಂ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ ನೆರವು  ನೀಡುತ್ತಿದೆ. ಮೂರು ದಶಕಗಳಿಂದ ಪ್ರತಿಭಾವಂತರ ಶೈಕ್ಷಣಿಕ ವೆಚ್ಛವನ್ನು ಸಂಘ ಭರಿಸುತ್ತಿದ್ದು ಈವರೆಗೂ 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೆರವು ಪಡೆದುಕೊಂಡಿದ್ದಾರೆ.

1991ನೇ ಸಾಲಿನಲ್ಲಿ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದ, ಹಳೆಯ ವಿದ್ಯಾರ್ಥಿ, ಐ.ಪಿ.ಎಸ್ ಅಧಿಕಾರಿ  ಕೆ.ವಿ. ರವೀಂದ್ರನಾಥ್ ಟ್ಯಾಗೂರ್ ಹಾಗೂ ಸ್ನೇಹಿತರು ಹಳೆಯ ವಿದ್ಯಾರ್ಥಿಗಳ ಸಂಘ ಸ್ಥಾಪಿಸಿದರು. ಅಂದಿನಿಂದ ಜೆ.ಸಿ.ಬಿ.ಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡುವ, ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಸಂಘವು ನೆರವು ನೀಡುತ್ತಾ ಬರುತ್ತಿದೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಸಂಘದಿಂದ ನೆರವು ಪಡೆದು ವಿದ್ಯಾಭ್ಯಾಸ ಮಾಡಿದವರು, ತಮಗೆ ಉದ್ಯೋಗ ಲಭಿಸಿದ ನಂತರ ಸಂಘದ ಕಾರ್ಯಕ್ಕೆ ಕೈಜೋಡಿಸುತ್ತಿದ್ದಾರೆ.

ರಾಜ್‌ಕುಮಾರ್‌ ನೈಟ್: ಸಂಘಕ್ಕೆ ಆರ್ಥಿಕ ಸಂಪನ್ಮೂಲ ಸಂಗ್ರಹಿಸಲು 1998ರಲ್ಲಿ ಆಯೋಜಿಸಿದ್ದ ರಾಜ್‌ಕುಮಾರ್ ನೈಟ್ ಮನರಂಜನಾ ಕಾರ್ಯಕ್ರಮ ಯಶಸ್ವಿಯಾಗಿ, ಸಂಘಕ್ಕೆ ದೊಡ್ಡ ಮಟ್ಟದಲ್ಲಿ ಆರ್ಥಿಕ ಬಲ ತುಂಬುವಲ್ಲಲಿ ಯಶಸ್ವಿಯಾಯಿತು. ಇದರಲ್ಲಿ ₹35 ಲಕ್ಷ  ಉಳಿಕೆಯಾಗಿ, ಈ ಮೊತ್ತವನ್ನು ಬ್ಯಾಂಕ್‌ನಲ್ಲಿ ಠೇವಣಿ ಇರಿಸಿ, ಅದರ ಬಡ್ಡಿ ಹಣದಲ್ಲಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ.

2015ರಲ್ಲಿ ಬ್ಯಾಂಕ್ ಬಡ್ಡಿದರ ಗಣನೀಯವಾಗಿ ಇಳಿಕೆಯಾಗಿದ್ದರಿಂದ ವಿದ್ಯಾರ್ಥಿಗಳಿಗೆ ನೆರವು ನೀಡುವುದು ಕಷ್ಟವಾಯಿತು. ಆದರೆ, ಸಂಘ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಹಕಾರ ಪಡೆದು ಪ್ರತಿ ವರ್ಷ ಠೇವಣಿ ಮೊತ್ತ ಹೆಚ್ಚಿಸಿಕೊಂಡು ಬಂದಿದೆ.  ಈಗ ಈ ಮೊತ್ತವು ₹75 ಲಕ್ಷಕ್ಕೆ ಏರಿಕೆಯಾಗಿದೆ. ದಾನಿಗಳ ಸಹಕಾರದಿಂದ ಹೆಚ್ಚಿನ ವಿದ್ಯಾರ್ಥಿಗಳಿಗೆ ನೆರವು ನೀಡಲು ಅನುಕೂಲವಾಗುತ್ತಿದೆ.

ವಿದ್ಯಾರ್ಥಿಗಳ ಆಯ್ಕೆಗೆ ಮಾನದಂಡ: ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟಗೊಂಡ ನಂತರ ಸಂಘ ಶೇ 85ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಂದ ಉಚಿತ ಶಿಕ್ಷಣಕ್ಕಾಗಿ ಅರ್ಜಿ ಆಹ್ವಾನಿಸುತ್ತದೆ. ಪದಾಧಿಕಾರಿಗಳು ಅರ್ಜಿ ಪರಿಶೀಲಿಸಿ, ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತಾರೆ. ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಿಕ್ಷಣದ ಸಂಪೂರ್ಣ ವೆಚ್ಚ, ನೋಟ್ ಬುಕ್, ಪಠ್ಯ ಪುಸ್ತಕ ನೀಡಲಾಗುತ್ತದೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಿಇಟಿ ಕೋಚಿಂಗ್ ಸೌಲಭ್ಯವನ್ನೂ ಕಲ್ಪಿಸಲಾಗುತ್ತದೆ.

ಬಹುದಿನದ ಕನಸು ಸಾಕಾರ

ದಾನಿಗಳಿಂದ  ಸಂಗ್ರಹಿಸಿದ ₹85 ಲಕ್ಷದಲ್ಲಿ ನಿರ್ಮಿಸಿರುವ ಸಂಘದ ನೂತನ ಕಟ್ಟಡಕ್ಕೆ ಸ್ಥಾಪಕ ಅಧ್ಯಕ್ಷ ದಿ. ಕೆ.ವಿ.ಆರ್ ಟ್ಯಾಗೂರ್ ಹೆಸರಿಡಲಾಗಿದ್ದು ಬುಧವಾರ (ಸೆ. 4) ಕಟ್ಟಡ ಉದ್ಘಾಟನೆಗೊಳ್ಳಲಿದೆ. ಕಟ್ಟಡದಲ್ಲಿ 100 ಜನರು ಕುಳಿತು ಕಾರ್ಯಕ್ರಮ ವೀಕ್ಷಿಸಬಹುದಾದ ಸಭಾಂಗಣ ಸಂಘದ ಕಚೇರಿ ಮತ್ತು ವಸತಿ ಕೊಠಡಿಗಳಿವೆ. ಸೆ.5ರಂದು ಗುರುನಮನ ಕಾರ್ಯಕ್ರಮ ನಡೆಯಲಿದೆ.

ಕಟ್ಟಡಕ್ಕೆ  ಡಾ.ಎಚ್.ಟಿ ನಿರ್ಮಾಲಾ ಕಚ್ಚೋಡಿ ಶ್ರೀನಿವಾಸ್ ಕೆ.ಎನ್ ಗೋಪಾಲ್ ಹೆಗ್ಡೆ ಶುಂಠೀಕಟ್ಟೆ ರತ್ನಾಕರ್ ಗರಿಷ್ಠ ಮೊತ್ತದ ದೇಣಿಗೆ ನೀಡಿದ್ದಾರೆ. ನೂರಾರು ವಿದ್ಯಾರ್ಥಿಗಳಿಗೆ ಆಸರೆ ಸಂಘದ ಸ್ಥಾಪಕ ಅಧ್ಯಕ್ಷ ಕೆ.ವಿ. ರವೀದ್ರನಾಥ ಟ್ಯಾಗೂರ್ ಅವರ ಶ್ರಮ ನೂರಾರು ವಿದ್ಯಾರ್ಥಿಗಳಿಗೆ ಆಸರೆಯಾಗಿದೆ. ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯಂದು ಕಾಲೇಜಿನ ಮೊದಲ ಪ್ರಾಂಶುಪಾಲ ಕೆ.ಬಿ. ರಾಮಕೃಷ್ಣರಾವ್ ಹೆಸರಿನಲ್ಲಿ ಹೆಸರಾಂತ ಸಾಹಿತಿಗಳಿಂದ ದತ್ತಿ ಉಪನ್ಯಾಸ ಗುರುನಮನ ಏರ್ಪಡಿಸಲಾಗುತ್ತಿದೆ.

ಈ ವರ್ಷ ಸಂಘದ ನೂತನ ಕಟ್ಟಡ ಉದ್ಘಾಟನೆಗೊಳ್ಳುವ ಮೂಲಕ ನೆಮ್ಮಲ್ಲರ ಬಹುದಿನದ ಕನಸು ಸಾಕಾರಗೊಳ್ಳುತ್ತಿದೆ ಎಂದು ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಣ್ಕುಳಿ ಅಜಿತ್ ಹೇಳಿದರು. ಸದ್ಯ 43 ವಿದ್ಯಾರ್ಥಿಗಳಿಗೆ ನೆರವು ಸಂಘದಿಂದ ನೆರವು ಪಡೆದ ವಿದ್ಯಾರ್ಥಿಗಳು ಈಗ ಉದ್ಯೋಗ ಮಾಡುತ್ತಿದ್ದು ಅವರೂ ಸಹ ಸಂಘದ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಪ್ರಸ್ತುತ 43 ವಿದ್ಯಾರ್ಥಿಗಳು ನೆರವು ಪಡೆಯುತ್ತಿದ್ದಾರೆ. ಸಂಘದ ಕಟ್ಟಡ ನಿರ್ಮಾಣಕ್ಕೆ ಕಾಲೇಜಿನ ವಿಶ್ವಸ್ಥ ಮಂಡಳಿಯಿಂದ ಜಾಗ ನೀಡಲಾಗಿದೆ ಎಂದು ಪ್ರಾಂಶುಪಾಲರಾದ ಎಂ.ಸ್ವಾಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT