ಬುಧವಾರ, ಏಪ್ರಿಲ್ 8, 2020
19 °C

‘ಪ್ರವಾಸೋದ್ಯಮ ಅಭಿವೃದ್ಧಿ; ಡಿಪಿಆರ್‌ ತಯಾರಿಗೆ ಸೂಚನೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ‘ಜಿಲ್ಲೆಯ ಮುಳ್ಳಯ್ಯನಗಿರಿ, ಮಾಣಿಕ್ಯಧಾರಾ, ದತ್ತಪೀಠ, ಕಲ್ಹತ್ತಿಗಿರಿ, ಕೆಮ್ಮಣ್ಣುಗುಂಡಿ. ಅಮೃತಾಪುರ, ಬೆಳವಾಡಿ ದೇಗುಲ ಮೊದಲಾದ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶ ಇದೆ. ಈ ನಿಟ್ಟಿನಲ್ಲಿ ವಿಸ್ತೃತಾ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಪ್ರವಾಸೋದ್ಯಮ, ಕನ್ನಡ–ಸಂಸ್ಕೃತಿ ಸಚಿವ ಸಿ.ಟಿ.ರವಿ ಶನಿವಾರ ತಿಳಿಸಿದರು.

ಗಿರಿಶ್ರೇಣಿಯ ಹೊನ್ನಮ್ಮನಹಳ್ಳ, ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ ಸಂದರ್ಶಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶಗಳು ಇವೆ. ಬಸವನಹಳ್ಳಿ ಕೆರೆ, ಕೋಟೆ ಕೆರೆ, ಹಿರೇಕೊಳಲೆ ಕೆರೆ, ಅಯ್ಯನಕೆರೆ ಸಹಿತ ವಿವಿಧ ಕೆರೆಗಳ ಸಮಗ್ರ ಅಭಿವೃದ್ಧಿಗೆ ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ 15 ದಿನಗಳೊಳಗೆ ಡಿಪಿಆರ್‌ ಸಿದ್ಧಪಡಿಸುವಂತೆ ಅಧಿಕಾರಿಗಳಗೆ ತಿಳಿಸಿದ್ದೇನೆ ಎಂದು ಹೇಳಿದರು.

ಪ್ರವಾಸೋದ್ಯಮಕ್ಕೆ ಖಾಸಗಿ ಹೂಡಿಕೆಯನ್ನು ಆಕರ್ಷಿಸುವ ಚಿಂತನೆ ಇದೆ. ಪ್ರವಾಸೋದ್ಯಮದ ಅಭಿವೃದ್ಧಿ ನಿಟ್ಟಿನಲ್ಲಿ ಸಾರ್ವಜನಿಕರಿಂದ ಸಲಹೆಗಳನ್ನು ಪಡೆಯಲು ಉದ್ದೇಶಿಸಲಾಗಿದೆ. ಸೆಪ್ಟೆಂಬರ್‌ ಎರಡನೇ ವಾರದ ನಂತರ ಈ ಪ್ರಕ್ರಿಯೆ ನಡೆಯಲಿದೆ ಎಂದರು.

ಪ್ರವಾಸೋದ್ಯಮ ವಿಫುಲ ಉದ್ಯೋಗ ಸೃಷ್ಟಿಗೆ ಅವಕಾಶ ಇರುವ ಕ್ಷೇತ್ರ. ಪ್ರಧಾನಿ ಮೋದಿ ಅವರು ಪ್ರವಾಸೋದ್ಯಮಕ್ಕೆ ಉತ್ತೇಜನವನ್ನೂ ನೀಡುತ್ತಿದ್ದಾರೆ. ಪ್ರತಿ ರಾಜ್ಯದಲ್ಲಿ ವಿಶೇಷ ಪ್ರವಾಸಿ ತಾಣಗಳನ್ನು ಗುರುತಿಸಿ, ಅಂತಾರಾಷ್ಟ್ರೀಯ ಸ್ತರದಲ್ಲಿ ಹಂಬಲ ಅವರಿಗಿದೆ ಎಂದು ತಿಳಿಸಿದರು.

ದೇಶದಲ್ಲಿ 20 ವಿಶೇಷ ಪ್ರವಾಸಿ ಸ್ಥಳ ಗುರುತಿಸಿದ್ದರೆ, ಈ ಪಟ್ಟಿಯಲ್ಲಿ ರಾಜ್ಯದ ಹಂಪಿ ತಾಣವು 17ನೇ ಸ್ಥಾನದಲ್ಲಿದೆ. ರಾಜ್ಯದಲ್ಲೂ ಪ್ರವಾಸಿ ವರ್ತುಲ ಮಾಡಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ 319 ಪ್ರಮುಖ ಸ್ಥಳಗಳನ್ನು ಗುರುತಿಸಲಾಗಿದೆ.. 41 ಪ್ರವಾಸಿ ವರ್ತುಲ ಗುರುತಿಸಲಾಗಿದೆ. 844 ಕ್ಕೂ ಹೆಚ್ಚು ಪುರಾತತ್ವ ಇಲಾಖೆಗೆ ಸೇರಿದ ಕೇಂದ್ರಗಳು ಇವೆ ಎಂದರು.

ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜಸಿಂತಾ ಅನಿಲ್‌ಕುಮಾರ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಯಣ್ಣ, ಸದಸ್ಯ ರಮೇಶ್‌ ಇದ್ದರು.

‘ಅತಿವೃಷ್ಟಿ; 18 ತಿಂಗಳಲ್ಲಿ ಪುನರ್ವಸತಿ’

ಮಳೆ ಹಾನಿ ಬಗ್ಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಭೆ ಮಾಡಲಾಗಿದೆ. ಅತಿವೃಷ್ಟಿ ಸಂತ್ರಸ್ತರಿಗೆ 18 ತಿಂಗಳಲ್ಲಿ ಪುನರ್ವಸತಿ ಕಲ್ಪಿಸಲಾಗುವುದು ಎಂದು ರವಿ ತಿಳಿಸಿದರು.

ಅತೀವ ಹಾನಿಯಾಗಿರುವ ಒಂಬತ್ತು ಗ್ರಾಮಗಳ ಸ್ಥಳಾಂತರ ಮಾಡಬೇಕು ಎಂದು ಸಂತ್ರಸ್ತರು ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಜಾಗ ಗುರುತಿಸಲು ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ. 249 ಎಕರೆ ಜಾಗ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಸಾಧಕಬಾಧಕಗಳನ್ನು ಪರಿಶೀಲಿಸಿ ವ್ಯವಸ್ಥೆ ಮಾಡಲಾಗುವುದು ಎಂದು ಪ್ರತಿಕ್ರಿಯಿಸಿದರು.

ಮಧ್ಯಮ ವರ್ಗದ ಸುಮಾರು 44 ಕುಟುಂಬಗಳ ಮನೆಗಳು ನೆಲಸಮವಾಗಿವೆ. ಖಾಸಗಿ ನೆರವು ಪಡೆದು ಇವರಿಗೆ ವಸತಿ ಕಲ್ಪಿಸುವ ಪ್ರಯತ್ನ ನಡೆದಿದೆ ಎಂದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು