ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಚೇತರಿಕೆ ಹಾದಿಯಲ್ಲಿ ಸಾರಿಗೆ ಸಂಸ್ಥೆ

ಕೋವಿಡ್ ಭಯ ಬಿಟ್ಟು ಬಸ್ ಏರುತ್ತಿರುವ ಪ್ರಯಾಣಿಕರು
Last Updated 3 ಸೆಪ್ಟೆಂಬರ್ 2020, 8:30 IST
ಅಕ್ಷರ ಗಾತ್ರ

ಚಿಂತಾಮಣಿ: ಲಾಕ್‌ಡೌನ್‌ನಿಂದ ಅಸ್ತವ್ಯಸ್ತಗೊಂಡಿದ್ದ ಜನ ಜೀವನ ಹಂತ ಹಂತವಾಗಿ ಸಾಮಾನ್ಯಸ್ಥಿತಿಗೆ ಮರಳುತ್ತಿದೆ. ಅಂತೆಯೇ ನೆಲಕಚ್ಚಿದ್ದ ಸಾರಿಗೆ ಸಂಸ್ಥೆಯೂ ಕ್ರಮೇಣ ಚೇತರಿಕೆಯ ಹಾದಿ ಹಿಡಿಯುತ್ತಿದೆ. ಪ್ರಯಾಣಿಕರ ಸಂಖ್ಯೆ ಏರುತ್ತಿದ್ದು ಆಶಾಭಾವನೆ ಮೂಡುತ್ತಿದೆ.

ಕೊರೊನಾ ಲಾಕ್‌ಡೌನ್ ಕಾರಣ ಮಾರ್ಚ್‌ ಕೊನೆ ವಾರದಿಂದ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಜೂನ್‌ನಲ್ಲಿ ಬೆಂಗಳೂರು ಮತ್ತು ತಾಲ್ಲೂಕು ಕೇಂದ್ರಗಳಿಗೆ ಮಾತ್ರ ಬಸ್ ಸಂಚಾರ ಆರಂಭವಾಯಿತು. ಆದರೆ, ಕೋವಿಡ್ ಭಯದಿಂದ ಬಸ್ ಏರಲು ಜನರು ಹಿಂದೇಟು ಹಾಕುತ್ತಿದ್ದರು.

ಆಗಸ್ಟ್ ಮೂರನೇ ವಾರದಿಂದ ಗ್ರಾಮೀಣ ಭಾಗಗಳ ಕಡೆಗೂ ಬಸ್‌ಗಳು ಸಂಚರಿಸುತ್ತಿವೆ. ನಿಧಾನವಾಗಿ ಹಳ್ಳಿಗಳ ಜನರು ನಗರ, ಪಟ್ಟಣಗಳಿಗೆ ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಮೊದಲಿಗಿಂತ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಆದಾಯವೂ ದಿನೇ ದಿನೇ ಉತ್ತಮವಾಗುತ್ತಿದೆ.

ಲಾಕ್‌ಡೌನ್‌ಗೂ ಮೊದಲು ದಿನಕ್ಕೆ ಸರಾಸರಿ ₹18 ಲಕ್ಷ ಆದಾಯವಿತ್ತು. ಲಾಕ್‌ಡೌನ್ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಇತ್ತೀಚೆಗೆ ದಿನವೊಂದಕ್ಕೆ ಸರಾಸರಿ ₹8 ಲಕ್ಷದಿಂದ ₹10 ಲಕ್ಷ ಆದಾಯ ಬರತೊಡಗಿದೆ. ಹಂತ ಹಂತವಾಗಿ ಏರಿಕೆಯಾಗುತ್ತಿದೆ ಎಂದು ಘಟಕದ ವ್ಯವಸ್ಥಾಪಕ ಬಿ.ಅಪ್ಪಿರೆಡ್ಡಿ ಪ್ರಜಾವಾಣಿಗೆ ತಿಳಿಸಿದರು.

ಆರಂಭದಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ಬಾಗೇಪಲ್ಲಿ ಮಾರ್ಗಗಳಲ್ಲಿ ಬಸ್‌ಗಳು ಸಂಚರಿಸುತ್ತಿದ್ದವು. ಪ್ರಯಾಣಿಕರು ಹೆಚ್ಚು ಸಂಚರಿಸುವ ಬೆಂಗಳೂರಿಗೆ ಪ್ರತಿ 15 ನಿಮಿಷ ಅಥವಾ ಗಂಟೆಗೊಮ್ಮೆ ಬಸ್‌ ಓಡಿಸಲು ಕ್ರಮಕೈಗೊಳ್ಳಲಾಗಿದೆ. ಅಂತರರಾಜ್ಯ ಮಾರ್ಗಗಳಾದ ಮದನಪಲ್ಲಿ, ಹಿಂದೂಪುರ, ತಿರುಪತಿ, ರಾಜ್ಯದ ದೂರದ ಮಾರ್ಗಗಳಾದ ಶಾಹಪುರ, ಧರ್ಮಸ್ಥಳ, ಶಿವಮೊಗ್ಗ, ಹೊಸಪೇಟೆ, ಬಳ್ಳಾರಿ, ದೇವದುರ್ಗ, ಮೈಸೂರು, ಹಾಸನಕ್ಕೆ ಬಸ್‌ಗಳು ಸಂಚರಿಸುತ್ತಿವೆ.

ಚಿಂತಾಮಣಿ ಘಟಕದಿಂದ 138 ಮಾರ್ಗಗಳಿದ್ದು, ಸದ್ಯ 80 ಮಾರ್ಗಗಳಲ್ಲಿ ಬಸ್‌ಗಳು ಓಡುತ್ತಿವೆ. ಆಗಸ್ಟ್ ಕೊನೆಯ ವಾರದಿಂದ ಗ್ರಾಮೀಣ ಭಾಗದ ಮುರುಗಮಲ್ಲ, ಪೆದ್ದೂರು, ಚೇಳೂರು, ಶ್ರೀನಿವಾಸಪುರ ಮತ್ತಿತರ ಕಡೆ ಹಂತ ಹಂತವಾಗಿ ಬಸ್‌ಗಳನ್ನು ಓಡಿಸಲಾಗುತ್ತಿದೆ. ಆರಂಭದ ದಿನಗಳಿಗಿಂತಈಗ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ.

‘ಉಳಿದ ಮಾರ್ಗಗಳಲ್ಲೂ ಈ ತಿಂಗಳಿನಲ್ಲಿ ಸಂಚಾರ ಆರಂಭಿಸ ಲಾಗುವುದು. ಬಸ್‌ಗಳಲ್ಲಿ ಪ್ರಯಾಣಿಕರ ವ್ಯಕ್ತಿಗತ ಅಂತರವನ್ನು ತೆಗೆದು ಹಾಕಲಾಗಿದೆ. ಪ್ರಯಾಣಿಕರು ಮಾಸ್ಕ್ ಧರಿಸಿ ಬಸ್ಸಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಎಲ್ಲ ಸೀಟುಗಳಲ್ಲೂ ಕುಳಿತು ಪ್ರಯಾಣಿಸಬಹುದು. ನಿಂತು ಪ್ರಯಾಣ ಮಾಡಲು ಅವಕಾಶವಿಲ್ಲ ಎಂದು’ ಎಂದು ಅಪ್ಪಿರೆಡ್ಡಿತಿಳಿಸಿದರು.

***

ಜನರು ಈಗೀಗ ಕೋವಿಡ್ ಭಯದಿಂದ ಹೊರಬಂದು ಬಸ್ ಪ್ರಯಾಣ ಆರಂಭಿಸಿದ್ದಾರೆ. ನಿಧಾನವಾಗಿ ಆದಾಯ ಏರಿಕೆಯಾಗುತ್ತಿದೆ.
-ಬಿ.ಅಪ್ಪಿರೆಡ್ಡಿ, ಘಟಕ ವ್ಯವಸ್ಥಾಪಕ

***

ಬಹುತೇಕರು ಕೋವಿಡ್–19 ಭಯದಿಂದ ಬೈಕ್, ಸ್ವಂತ ವಾಹನ ಗಳಲ್ಲಿ ಸಂಚರಿಸುತ್ತಿದ್ದಾರೆ. ಈಗೀಗ ಪ್ರಯಾಣಿಕರು ಬಸ್ ಅವಲಂಬಿಸುತ್ತಿದ್ದಾರೆ.
-ಗಂಗಾಧರ್, ನಿರ್ವಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT