ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀರೂರು | ಶಿಷ್ಟಾಚಾರ ಉಲ್ಲಂಘನೆ: ಕ್ರಮಕ್ಕೆ ಜಿ.ಪಂ ಸಿಇಒ ಸೂಚನೆ

Published 11 ಮೇ 2024, 13:55 IST
Last Updated 11 ಮೇ 2024, 13:55 IST
ಅಕ್ಷರ ಗಾತ್ರ

ಬೀರೂರು: ಕಳೆದ ಫೆಬ್ರುವರಿ ತಿಂಗಳಲ್ಲಿ ಕಡೂರು ತಾಲ್ಲೂಕು ಹಿರೇನಲ್ಲೂರು ಹೋಬಳಿಯಲ್ಲಿ ನಡೆದ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪರಿಶೀಲನೆಯ ಜನಸ್ಪಂದನ ಸಭೆಯಲ್ಲಿ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಗಿರಿಯಾಪುರ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ದೂರಿನ ಕುರಿತು ಕ್ರಮ ವಹಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಕಡೂರು ತಹಶೀಲ್ದಾರ್‌ಗೆ ಸೂಚಿಸಿದ್ದಾರೆ.

ಗಿರಿಯಾಪುರ ಗ್ರಾಮ ಪಂಚಾಯಿತಿ ಸದಸ್ಯ ಜಿ.ಎಂ.ಉಮಾಮಹೇಶ್ವರಪ್ಪ ಅವರು ಅಂದಿನ ಸಭೆಗೆ ಆಹ್ವಾನಿತರಾಗಿದ್ದರು. ಹಿರೇನಲ್ಲೂರಿನಲ್ಲಿ ಶಾಸಕ ಕೆ.ಎಸ್‌.ಆನಂದ್‌, ಕಡೂರು ತಹಶೀಲ್ದಾರ್‌ ಎಂ.ಪಿ.ಕವಿರಾಜ್‌, ತಾಲ್ಲೂಕು ಪಂಚಾಯಿತಿ ಎಒ ಸಿ.ಆರ್‌.ಪ್ರವೀಣ್‌ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆದಿತ್ತು.

‘ಯೋಜನೆಗಳ ಅನುಷ್ಠಾನ ಕುರಿತು ಅಭಿಪ್ರಾಯ ವ್ಯಕ್ತಪಡಿಸಲು ವೇದಿಕೆ ಏರಿದ್ದ ನಾನು ಮಾತನಾಡುತ್ತಿರುವಾಗ ಕೆಲವರು ಅಡ್ಡಿಪಡಿಸಿದ್ದಾರೆ. ಜನಪ್ರತಿನಿಧಿಗಳು ಮತ್ತು ತಾಲ್ಲೂಕಿನ ಅಧಿಕಾರಿಕಾರಿಗಳ ಸಮ್ಮುಖದಲ್ಲಿಯೇ ಅವಮಾನಿಸಿ ಹಕ್ಕು ಚ್ಯುತಿ ಮಾಡಿದ್ದಾರೆ. ಸಭೆ ಆಯೋಜಿಸಿದ್ದ ಎಲ್ಲರೂ ಈ ಸಂದರ್ಭದಲ್ಲಿ ಮೌನವಾಗಿದ್ದುದು ಶಿಷ್ಟಾಚಾರದ ಉಲ್ಲಂಘನೆ. ಆದ್ದರಿಂದ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಉಮಾಮಹೇಶ್ವರಪ್ಪ ಅವರು ತಹಶೀಲ್ದಾರ್‌ ಮತ್ತು ಜಿಲ್ಲಾ ಪಂಚಾಯಿತಿ ಸಿಇಒಗೆ ಕೋರಿದ್ದರು. ಗಿರಿಯಾಪುರ ಗ್ರಾಮ ಪಂಚಾಯಿತಿ ಸಭೆಯಲ್ಲಿ ಈ ಕುರಿತು ನಿರ್ಣಯ ಕೂಡಾ ತೆಗೆದುಕೊಳ್ಳಲಾಗಿತ್ತು.

ತಹಶೀಲ್ದಾರ್‌ಗೆ ಜಿಲ್ಲಾ ಪಂಚಾಯಿತಿ ಸಿಇಒ ಬರೆದಿರುವ ಪತ್ರದಲ್ಲಿ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗದಂತೆ ಕ್ರಮ ವಹಿಸಬೇಕು. ಈಗ ಬಂದಿರುವ ದೂರಿನ ಬಗ್ಗೆ ಕ್ರಮ ವಹಿಸಬೇಕು ಎಂದು ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT