ಬುಧವಾರ, ಮೇ 18, 2022
25 °C
ವಿಧಾನ ಪರಿಷತ್‌; ಕಾಫಿನಾಡಲ್ಲಿ ಸ್ಥಳೀಯಸಂಸ್ಥೆ ಕ್ಷೇತ್ರದ 1 ಸ್ಥಾನಕ್ಕೆ ಚುನಾವಣೆ

ಮತದಾರರ ಕರಡು ಪಟ್ಟಿ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಜಿಲ್ಲೆಯಲ್ಲಿ ವಿಧಾನ ಪರಿಷತ್‌ನ(ಸ್ಥಳೀಯಸಂಸ್ಥೆ ಕ್ಷೇತ್ರ) ಒಂದು ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದ್ದು, ಮತದಾರರ ಕರಡುಪಟ್ಟಿ ಪ್ರಕಟಿಸಲಾಗಿದೆ. ಆಕ್ಷೇಪಣೆಗಳಿದ್ದರೆ ನ. 17ರೊಳಗೆ ಸಲ್ಲಿಸಬಹುದು, 23ರಂದು ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ತಿಳಿಸಿದರು.

ಕರಡು ಮತದಾರರ ಪಟ್ಟಿಯನ್ನು ಸ್ಥಳೀಯ ಸಂಸ್ಥೆಗಳು (ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ, ಪಟ್ಟಣ ಪಂಚಾಯಿತಿ, chikkamagaluru.nic.in ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಮತದಾರರ ಹೆಸರು ಕೈಬಿಟ್ಟಿದ್ದರೆ ಸೇರಿಸಲು ಅವಕಾಶ ಇದೆ. ನಮೂನೆ 17ರಲ್ಲಿ ಅರ್ಜಿ ಸಲ್ಲಿಸಬೇಕು. ಹೆಸರು– ವಿವರ ತಪ್ಪಾಗಿದ್ದರೆ ತಿದ್ದುಪಡಿಗೆ, ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಇದೆ. ನಮೂನೆ 18ರಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮತದಾರರು ಕರಡು ಪಟ್ಟಿಯಲ್ಲಿ ವಿವರ ಸರಿ ಇವೆಯೇ ಎಂಬುದನ್ನು ಪರಿಶೀಲಿಸಬೇಕು. ಹೆಸರು ಇಲ್ಲದಿದ್ದರೆ, ವಿವರ ತಪ್ಪಾಗಿದ್ದರೆ ಅರ್ಜಿ ಸಲ್ಲಿಸಿ ಸರಿಪಡಿಸಿಕೊಳ್ಳಬೇಕು ಎಂದರು.

ನೀತಿ ಸಂಹಿತೆ ಉಲ್ಲಂಘಿಸಿದರೆ ಕ್ರಮ: ಚುನಾವಣೆ ಘೋಷಣೆಯಾದ ದಿನದಿಂದಲೇ (ನ.9) ನೀತಿ ಸಂಹಿತ ಜಾರಿಯಲ್ಲಿದೆ. ಚುನಾವಣೆ ಪ್ರಕ್ರಿಯೆ ಡಿ.16ರವರೆಗೆ ಪೂರ್ಣವಾಗಲಿದೆ. ಅಲ್ಲಿವರೆಗೂ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಸರ್ಕಾರಿ ಜಾಹಿರಾತು, ರಾಜಕೀಯ ಪಕ್ಷ, ಜನಪ್ರತಿನಿಧಿಗಳ ಭಾವಚಿತ್ರವಿವರು ಬ್ಯಾನರ್‌, ಬಂಟಿಗ್‌, ಪೋಸ್ಟರ್‌, ಹೋರ್ಡಿಂಗ್ಸ್‌ ಗಳನ್ನು ತೆರೆವಿಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನೀತಿ ಸಂಹಿತೆ ಉಲ್ಲಂಘಿಸಿದರೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು, ಸಹ ಸದಸ್ಯರು ಮತದಾರರು. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಚಿಕ್ಕಮಗಳೂರು ನಗರಸಭೆ, ಅಜ್ಜಂಪುರ ಪಟ್ಟಣ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಚುನಾವಣೆ ಆಗದಿರುವುದರಿಂದ ಅಸ್ತಿತ್ವದಲ್ಲಿ ಇಲ್ಲ. ಕೆಲ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೂ ಚುನಾವಣೆ ಆಗಬೇಕಿದೆ. ಈ ಸ್ಥಾನಗಳನ್ನು ಬಿಟ್ಟು ಕರಡು ಮತದಾರರ ಪಟ್ಟಿ ತಯಾರಿಸಲಾಗಿದೆ ಎಂದು ವಿವರ ನೀಡಿದರು.

ಈ ಚುನಾವಣೆಯಲ್ಲಿ ಚಿಹ್ನೆ ಇರುವುದಿಲ್ಲ. ಬ್ಯಾಲೆಟ್‌ ಪತ್ರದ ಮೂಲಕ ಮತದಾನ ನಡೆಯಲಿದೆ. ಮತದಾರರು ಪ್ರಾಶಸ್ತ್ಯ ಅನುಸಾರ ಮತ ಹಾಕಲು ಅವಕಾಶ ಇದೆ. ‘ನೋಟಾ’ ಮತ ಚಲಾಯಿಸಲು ಅವಕಾಶ ಇದೆ. ಪ್ರಾಶಸ್ತ್ಯ ಅನುಗುಣವಾಗಿ ಮತಗಳ ಎಣಿಕೆ ನಡೆಯಲಿದೆ. ಡಿ.10ರಂದು ಮತದಾನ ನಿಗದಿಯಾಗಿದೆ. ಬೆಳಿಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಹಂತದಲ್ಲಿ ಈಗಾಗಲೇ ನೀತಿ ಸಂಹಿತೆ ನಿಗಾ ನಿಟ್ಟಿನಲ್ಲಿ ತಂಡ ರಚಿಸಲಾಗಿದೆ. ತಾಲ್ಲೂಕುಗಳಲ್ಲೂ ತಂಡ ರಚನೆ ಕ್ರಮ ವಹಿಸಲಾಗಿದೆ. ತಾಲ್ಲೂಕಿಗೆ ಒಂದು ಕ್ಷಿಪ್ರ ಕಾರ್ಯಾಚರಣೆ ತಂಡ ರಚಿಸಲಾಗುವುದು ಎಂದರು.

ಕರಡು ಪಟ್ಟಿ: ಮತದಾರರ ಸಂಖ್ಯೆ, ಮತಗಟ್ಟೆ ಅಂಕಿಅಂಶ

ಜಿಲ್ಲೆಯಲ್ಲಿ 225 ಗ್ರಾಮ ಪಂಚಾಯಿತಿಗಳ 2300 ಸದಸ್ಯರು, ನಾಲ್ಕು ಪಟ್ಟಣ ಪಂಚಾಯಿತಿಗಳ 44 ಚುನಾಯಿತ ಸದಸ್ಯರು, 12 ನಾಮ ನಿರ್ದೇಶಿತ ಸದಸ್ಯರು, ಮೂರು ಪುರಸಭೆಗಳ 69 ಸದಸ್ಯರು ಸಹಿತ 2435 ಮತದಾರರು ಕರಡು ಪಟ್ಟಿಯಲ್ಲಿ ಇದ್ದಾರೆ.

ತಾಲ್ಲೂಕುವಾರು ಚಿಕ್ಕಮಗಳೂರು– 483, ಮೂಡಿಗೆರೆ– 319, ಶೃಂಗೇರಿ–101, ಕೊಪ‍್ಪ–224, ಎನ್‌.ಆರ್‌.ಪುರ– 168, ತರೀಕೆರೆ– 298, ಕಡೂರು– 656, ಅಜ್ಜಂಪುರ–186 ಒಟ್ಟು 2435 ಮತದಾರರು ಇದ್ದಾರೆ.

232 ಮತಗಟ್ಟೆಗಳು: ಗ್ರಾಮ ಪಂಚಾಯಿತಿ– 225, ಪಟ್ಟಣ ಪಂಚಾಯಿತಿ– 4 ಹಾಗೂ ಪುರಸಭೆ– 3 ಮತಗಟ್ಟೆ ಸ್ಥಾಪನೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ತಾಲ್ಲೂಕುವಾರು ಮತಗಟ್ಟೆ: ಚಿಕ್ಕಮಗಳೂರು– 47 (ಗ್ರಾ.ಪಂ– 47), ಮೂಡಿಗೆರೆ– 30 (ಗ್ರಾ.ಪಂ–29, ಪಟ್ಟಣ ಪಂಚಾಯಿತಿ–1), ಶೃಂಗೇರಿ– 10 (ಗ್ರಾ.ಪಂ– 9, ಪಟ್ಟಣ ಪಂಚಾಯಿತಿ–1), ಕೊಪ್ಪ– 23 (ಗ್ರಾ.ಪಂ–22, ಪಟ್ಟಣ ಪಂಚಾಯಿತಿ–1), ಎನ್‌.ಆರ್‌.ಪುರ– 15 (ಗ್ರಾ.ಪಂ–14, ಪಟ್ಟಣ ಪಂಚಾಯಿತಿ–1), ತರೀಕೆರೆ–26 (ಗ್ರಾ.ಪಂ–25, ಪುರಸಭೆ–1), ಕಡೂರು– 62 (ಗ್ರಾ.ಪಂ– 60, ಪುರಸಭೆ–2), ಅಜ್ಜಂಪುರ –19 ( ಗ್ರಾ.ಪಂ–19).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.