ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀರೂರು: ಜಿಲ್ಲಾಧಿಕಾರಿಯಿಂದ ನಗರೋತ್ಥಾನ ಯೋಜನೆ ಕಾಮಗಾರಿ ಪರಿಶೀಲನೆ

Published 5 ಜನವರಿ 2024, 14:04 IST
Last Updated 5 ಜನವರಿ 2024, 14:04 IST
ಅಕ್ಷರ ಗಾತ್ರ

ಬೀರೂರು: ಸಾರ್ವಜನಿಕರು ಹಲವು ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದು, ಈ ಬಗ್ಗೆ ಪರಿಶೀಲನೆ ನಡೆಸುವ ಜತೆಗೆ ನಗರಾಭಿವೃದ್ಧಿ ಕೋಶ ಮತ್ತು ಪುರಸಭೆ ಅಧಿಕಾರಿಗಳು ಗಮನ ಹರಿಸುವಂತೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.

ಅಮೃತ್ ನಗರೋತ್ಥಾನ ಯೋಜನೆಯ ನಾಲ್ಕನೇ ಹಂತದಲ್ಲಿ ಬೀರೂರು ಪಟ್ಟಣದ ವಿವಿಧೆಡೆ ಕೈಗೊಳ್ಳಲಾದ ಡಾಂಬರ್‌ ರಸ್ತೆ, ಕಾಂಕ್ರೀಟ್ ರಸ್ತೆ, ಮತ್ತು ಚರಂಡಿಗಳ ಗುಣಮಟ್ಟ ಪರಿಶೀಲನೆ ನಡೆಸಿ ಶುಕ್ರವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

ನಗರೋತ್ಥಾನ ಯೋಜನೆಯ 4ನೇ ಹಂತದಲ್ಲಿ ಬಿಡುಗಡೆಯಾದ ₹ 6.17 ಕೋಟಿಯಲ್ಲಿ ಬೀರೂರು ಪಟ್ಟಣದಲ್ಲಿ ₹ 4.66 ಕೋಟಿ ವೆಚ್ಚದ 2.8 ಕಿ.ಮೀ ಡಾಂಬರ್‌ ರಸ್ತೆ, 3.ಕಿ.ಮೀ.ನಷ್ಟು ಕಾಂಕ್ರೀಟ್ ರಸ್ತೆ, 1.8 ಕಿ.ಮೀ.ನಷ್ಟು ಸಿ.ಸಿ ಚರಂಡಿ ನಿರ್ಮಿಸಲಾಗಿದೆ. ಪರಿಶೀಲನೆ ಸಂದರ್ಭದಲ್ಲಿ ಕಾಮಗಾರಿಯ ಗುಣಮಟ್ಟ ತೃಪ್ತಿಕರವಾಗಿ ಕಂಡುಬಂದಿದೆ. ಕೆಲವೆಡೆ ಕಂಡುಬಂದಿರುವ ಸಣ್ಣಪುಟ್ಟ ಸಮಸ್ಯೆ ಬಗೆಹರಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬೀರೂರು ಪಟ್ಟಣದಲ್ಲಿ ಕೈಗೊಳ್ಳಲಾದ ಯುಜಿಡಿ ಕಾಮಗಾರಿ ಅಪೂರ್ಣವಾಗಿದೆ. ರಾಜಾಜಿನಗರ, ಭಾಗವತ್ ನಗರ, ಇಂದಿರಾನಗರ ಬಡಾವಣೆಗಳ ತ್ಯಾಜ್ಯ ಮುಂದೆ ಹರಿಯಲು ಅಥವಾ ಸಂಗ್ರಹವಾಗಲು ಟ್ರೀಟ್‍ಮೆಂಟ್ ಪ್ಲಾಂಟ್ ಸ್ಥಾಪನೆಯಾಗಿಲ್ಲ ಎಂದು ಪತ್ರಕರ್ತರು ತಿಳಿಸಿದಾಗ, ಈ ಬಗ್ಗೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳ ಜತೆ ಚರ್ಚಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ಪುರಸಭೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಕೊರತೆ ಇದೆ. ಇಲ್ಲಿ ಸಂಬಳ ಪಡೆಯುವ ಹಲವು ಸಿಬ್ಬಂದಿ ನಿಯೋಜನೆ ಮೇಲೆ ಬೇರೆ ಕಡೆ ಕೆಲಸ ನಿರ್ವಹಿಸುತ್ತಾರೆ. ಇರುವ ಅಧಿಕಾರಿ ವರ್ಗವನ್ನು ಕರ ವಸೂಲಿಗೆ ನಿಯೋಜಿಸಲಾಗುತ್ತಿದೆ. ಇದು ಸಾರ್ವಜನಿಕರ ಕಾರ್ಯಗಳಿಗೆ ವಿಳಂಬ ಆಗುತ್ತಿದೆ ಎಂಬ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಯಲ್ಲಿ ಹಲವು ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಈ ವಿಷಯವಾಗಿ ನಗರ ಸ್ಥಳೀಯ ಸಂಸ್ಥೆಗಳ ಸಭೆಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.

‘ಕೆ–ಶಿಪ್‍’ನವರು ಬೀರೂರು-ಚನ್ನಗಿರಿ-ದಾವಣಗೆರೆ-ಸಮ್ಮಸಗಿ ಹೆದ್ದಾರಿ ನಿರ್ಮಿಸುವ ಸಂದರ್ಭದಲ್ಲಿ ಬೀರೂರು ಪಟ್ಟಣದ ಅಜ್ಜಂಪುರ ರಸ್ತೆಯಲ್ಲಿ ಪರಿಹಾರ ನೀಡಿ ಭೂಸ್ವಾಧೀನ ಮಾಡಿಕೊಂಡಿದ್ದರು. ರಸ್ತೆ ನಿರ್ಮಾಣದ ಬಳಿಕ ಪಾದಚಾರಿ ಮಾರ್ಗ ನಿರ್ಮಾಣ ಮಾಡದ ಕಾರಣ ಅಲ್ಲಿ ಪರಿಹಾರ ಪಡೆದ ಹಲವರು ಪುನಃ ಅದೇ ಸ್ಥಳವನ್ನು ಅತಿಕ್ರಮಿಸಿ ಶೆಡ್, ಕಟ್ಟಡ, ಕಾಂಪೌಂಡ್ ನಿರ್ಮಿಸಿಕೊಂಡಿದ್ದಾರೆ. ಫುಟ್‍ಪಾತ್ ಇಲ್ಲದ ಕಾರಣ ಜನರು ರಸ್ತೆಯಲ್ಲಿ ನಡೆಯುವಂತಾಗಿದೆ. ರಸ್ತೆ ಕಿರಿದಾಗಿರುವ ಕಾರಣ ಅಪಘಾತಗಳ ನಡೆಯುವ ಸಾಧ್ಯತೆ ಇದೆ. ಪುರಸಭೆಗೆ ಈ ಸಂಬಂಧ ತಿಳಿಸಿದ್ದರೂ ಕ್ರಮ ವಹಿಸಿಲ್ಲ ಎಂದು ಸರಸ್ವತೀಪುರಂ ಬಡಾವಣೆಯ ಬಿ.ಎಂ.ರುದ್ರಪ್ಪ, ಬಿ.ಟಿ.ಚಂದ್ರಶೇಖರ್ ದೂರಿದರು.

ಹಳೇ ಅಜ್ಜಂಪುರ ರಸ್ತೆ ನಿರ್ಮಾಣ ಸಮಯದಲ್ಲಿ ರಸ್ತೆ ಎತ್ತರಿಸಿದ ಪರಿಣಾಮ ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗಿ ತೊಂದರೆಯಾಗುತ್ತದೆ ಎಂದು ಸ್ಥಳೀಯ ನಿವಾಸಿಗಳಾದ ಲೋಕನಾಥ ಪವಾರ್, ಶಿವು ದೂರಿದರು. ಸಿಸಿ ಚರಂಡಿ ನಿರ್ಮಾಣದ ಬಳಿಕ ಸಮಸ್ಯೆ ಬಗೆ ಹರಿಯುವುದು ಎಂದು ಜಿಲ್ಲಾಧಿಕಾರಿ ಉತ್ತರ ನೀಡಿದರು.

ನಾಡಕಚೇರಿ ಕಟ್ಟಡದಲ್ಲಿ ವಿದ್ಯುತ್ ಪೂರೈಕೆ ಇಲ್ಲ, ಕಚೇರಿಗೆ ಸ್ವಂತ ಕಟ್ಟಡವಿಲ್ಲ, ಈ ಬಗ್ಗೆ ಕ್ರಮ ವಹಿಸಬೇಕು. ಪಟ್ಟಣದ ಪುರಿಬಟ್ಟಿ ಬಡಾವಣೆಯಲ್ಲಿ ಮಳೆಗಾಳದಲ್ಲಿ ನೀರು ನಿಂತು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದು ನಾಗರಿಕರು ಅಹವಾಲು ಸಲ್ಲಿಸಿದರು.

ಪಟ್ಟಣದ ರಾಜಾಜಿನಗರ, ಹಳೇ ಅಜ್ಜಂಪುರ ರಸ್ತೆ, ಮರಾಠಾ ಕಾಲೊನಿ, ಹಳೇಪೇಟೆ ಮುಖ್ಯ ರಸ್ತೆ, ಮಾರ್ಗದ ಕ್ಯಾಂಪ್ ಬಡಾವಣೆಯ ಕೆಂಚರಾಯನ ಹಾಳು ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಜಾಜಿನಗರ ಪರಿಶೀಲನೆ ಸಂದರ್ಭದಲ್ಲಿ ರಸ್ತೆಯ ಪಕ್ಕದಲ್ಲಿಯೇ ಇದ್ದ ಹಿಂದುಳಿದ ವರ್ಗಗಳ ಅಲೆಮಾರಿ ಆಶ್ರಮ ಶಾಲೆಯ ಬಾಲಕ, ಬಾಲಕಿಯರ ಹಾಸ್ಟೆಲ್‍ಗೆ ಭೇಟಿ ನೀಡಿ ಅಡುಗೆ ಕೋಣೆ ಪರಿಶೀಲಿಸಿದರು.

 ಬೀರೂರು ಪಟ್ಟಣದ ಹಿಂದುಳಿದ ವರ್ಗಗಳ ದೇವರಾಜ ಅರಸು ಅಲೆಮಾರಿ ಮಕ್ಕಳ ಆಶ್ರಮ ಶಾಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಡುಗೆ ಕೋಣೆಯ ಪರಿಶೀಲನೆ ನಡೆಸಿದರು.   
 ಬೀರೂರು ಪಟ್ಟಣದ ಹಿಂದುಳಿದ ವರ್ಗಗಳ ದೇವರಾಜ ಅರಸು ಅಲೆಮಾರಿ ಮಕ್ಕಳ ಆಶ್ರಮ ಶಾಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಡುಗೆ ಕೋಣೆಯ ಪರಿಶೀಲನೆ ನಡೆಸಿದರು.   

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಾಗರತ್ನ, ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಎಂಜಿನಿಯರ್ ಸೋಮಶೇಖರ್ ಮತ್ತಿಕಟ್ಟಿ, ಎಇಇ ಪ್ರಸನ್ನಕುಮಾರ್, ಪುರಸಭೆ ಮುಖ್ಯಾಧಿಕಾರಿ ವಿ.ಡಿ.ಶಾಂತಲಾ, ಪರಿಸರ ಎಂಜಿನಿಯರ್ ಮಹಮದ್ ನೂರುದ್ದೀನ್, ಪುರಸಭೆ ಎಂಜಿನಿಯರ್ ವೀಣಾ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT